ADVERTISEMENT

ಕುಶಾಲನಗರ: ಗಣಪತಿ ದೇಗುಲದ ರಥೋತ್ಸವ ಸಂಭ್ರಮ

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:43 IST
Last Updated 20 ನವೆಂಬರ್ 2024, 5:43 IST
ಕುಶಾಲನಗರದಲ್ಲಿ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು
ಕುಶಾಲನಗರದಲ್ಲಿ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು   

ಕುಶಾಲನಗರ: ಪಟ್ಟಣದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗಣಪತಿ ದೇವಾಲಯದ 104ನೇ ವಾರ್ಷಿಕ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಮಹಾಗಣಪತಿ ದೇವಾಲಯ ಸೇವಾ ಸಮಿತಿಯಿಂದ ಕಾರ್ತೀಕ ಕೃಷ್ಣ ಪಕ್ಷದಲ್ಲಿ ಸಲ್ಲುವ ಅಭಿಜಿನ್ ಶುಭ ಲಗ್ನದಲ್ಲಿ ಮಧ್ಯಾಹ್ನ 1.30 ಗಂಟೆಗೆ ಗಣಪತಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥ ಬಲಿ ಮತ್ತು ಪೂಜೆ ಹಾಗೂ ಮಹಾಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆಯಿತು. ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ಹಾಗೂ ರಥ ಬಲಿ ಕಾರ್ಯಕ್ರಮಗಳು ನಡೆದವು. ಬಳಿಕ, ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳ ಜೊತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳ ಮಧ್ಯೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ADVERTISEMENT

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥವನ್ನು ಗಣಪತಿ ದೇವಾಲಯದಿಂದ ರಥ ಬೀದಿ ಮೂಲಕ ಆಂಜನೇಯ ದೇವಸ್ಥಾನದವರೆಗೆ ಎಳೆಯುವ‌ ಮೂಲಕ ಭಕ್ತಿ ಸಮರ್ಪಿಸಿದರು. ಜೈ, ಜೈ ಗಣೇಶ ಎಂದು ಜಯಕಾರ ಹಾಕಿದರು.

ಇದೇ ವೇಳೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯಲ್ಲಿ ಕರ್ಪೂರ ಹರಡಿ ಬೆಂಕಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಧಾರಿಗಳ ಲಯಬದ್ಧ ಭಜನೆ ಗಮನ ಸೆಳೆಯಿತು. ಭಕ್ತರು ರಥದ ಮುಂದೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಹರಕೆ ಹೊತ್ತಿದ್ದ ಭಕ್ತರು ಸಾವಿರಾರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ನವದಂಪತಿಗಳು ಹಾಗೂ ಹರಕೆ ಹೊತ್ತ ಅವಿವಾಹಿತರು ರಥಕ್ಕೆ ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ ಜೋರಾಗಿತ್ತು.

ಜಾತ್ರೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಕೊಡಗು ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಪುರಸಭೆಯ ಪೌರಕಾರ್ಮಿಕರು ಪಟ್ಟಣವನ್ನು ಶುಚಿಗೊಳಿಸಿದರು. ಭಕ್ತರಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಇದಕ್ಕೂ ಮೊದಲು ಪಕ್ಕದ ಕಣಗಾಲ್ ಮತ್ತು ಆವರ್ತಿಯಿಂದ ಬಂದಿದ್ದ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು.

ಗಣಪತಿ ದೇವಸ್ಥಾನಕ್ಕೆ ಆಗಮಿಸಿದ ಶಾಸಕ ಡಾ.ಮಂತರ್ ಗೌಡ ದೇವರ ದರ್ಶನ ಪಡೆದರು. ಆರತಿ ಹಾಗೂ ಪ್ರಸಾದ ಸ್ವೀಕರಿಸಿದರು. ರಥೋತ್ಸವಕ್ಕೆ ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್, ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡಾರೀಕಾಕ್ಷ, ವಿ.ಪಿ.ಶಶಿಧರ್, ಟಿ.ಆರ್.ಶರವಣಕುಮಾರ್, ಎಚ್.ಎಂ.ಚಂದ್ರು, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡಸ್ಚಾಮಿ, ಎಂ.ಮುನಿರಾಜು, ವಿ.ಎಸ್.ಆನಂದಕುಮಾರ್ ಪಾಲ್ಗೊಂಡಿದ್ದರು.

ಕುಶಾಲನಗರದಲ್ಲಿ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು
ಕುಶಾಲನಗರದಲ್ಲಿ ನಡೆದ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವದಲ್ಲಿ ಭಕ್ತರು ಈಡುಗಾಯಿ ಹೊಡೆದರು
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಎತ್ತುಗಳ ಜೋಡಿ ಎಲ್ಲರ ಗಮನ ಸೆಳೆಯಿತು
ಕುಶಾಲನಗರದಲ್ಲಿ ಗಣಪತಿ ದೇವಾಲಯದಲ್ಲಿ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಗೆ ಅಲಂಕರಿಸಲಾಗಿತ್ತು
ದೇವಾಲಯ ಸಮಿತಿಯಿಂದ ರಥೋತ್ಸವದ ಅಂಗವಾಗಿ ಗಾಯಿತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.