ADVERTISEMENT

ವಿರಾಜಪೇಟೆ: ಪಡಿತರ ಚೀಟಿ ರದ್ದು ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 3:38 IST
Last Updated 2 ನವೆಂಬರ್ 2024, 3:38 IST
ವಿರಾಜಪೇಟೆಯ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು
ವಿರಾಜಪೇಟೆಯ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು   

ವಿರಾಜಪೇಟೆ: ಕರ್ನಾಟಕ ಸರ್ಕಾರ ಯಾವುದೇ ಪೂರ್ವ ಸೂಚನೆ ನೀಡದೆ ಕೂಲಿ ಕಾರ್ಮಿಕರ ಸಾವಿರಾರು ಬಿ.ಪಿ.ಎಲ್ ಪಡಿತರ ಚೀಟಿ ರದ್ದು ಮಾಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಈಚೆಗೆ ಪಟ್ಟಣದಲ್ಲಿನ ಮಿನಿ ವಿಧಾನ ಸೌಧದ ಎದರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಜನವಾದಿ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಮಾತನಾಡಿ, ಬಡ ಕಾರ್ಮಿಕರು, ಒಬ್ಬಂಟಿ ಮಹಿಳೆಯರು, ಹಿರಿಯ ನಾಗರಿಕರು ಪಡಿತರ ಚೀಟಿಗಳಿಲ್ಲದೆ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದರಿಂದ ಹೊಸ ಕಾರ್ಡುಗಳ ನೋಂದಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಅರ್ಹ ಬಡವರು ಪಡಿತರದಿಂದ ವಂಚಿತರಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ರಾಜ್ಯದಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಯು ಕೇವಲ ಅಕ್ಕಿ ಸೇರಿದಂತೆ ರೇಷನ್ ಪಡೆಯಲು ಮಾತ್ರವಲ್ಲದೆ, ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಸೌಲಭ್ಯ ಮತ್ತು ಇತರ ಸಾಮಾಜಿಕ ಸುರಕ್ಷೆಗಳಿಗೂ ಅಗತ್ಯ ದಾಖಲೆಯಾಗಿದೆ. ಇದೀಗ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಪಡಿತರ ಚೀಟಿ ರದ್ದಾಗಿರುವುದರಿಂದ ಬಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ರದ್ದು ಮಾಡಿರುವ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಕಾರರು ವಿರಾಜಪೇಟೆ ತಹಶೀಲ್ದಾರ್ ಎಚ್.ಎನ್.ರಾಮಚಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರಾದ ಪ್ರೇಮ, ಸುನೀತಾ, ಪಾರ್ವತಿ, ರೂಪ, ಅನುಪಮ, ಮಂಗಳಾ, ಭಾಗ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.