ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಜೊತೆ BJP ನಾಯಕರ ನೇರ ಸಂಬಂಧ: ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:26 IST
Last Updated 19 ಜೂನ್ 2024, 14:26 IST
ಎ.ಎಸ್. ಪೊನ್ನಣ್ಣ
ಎ.ಎಸ್. ಪೊನ್ನಣ್ಣ   

ವಿರಾಜ‍ಪೇಟೆ (ಕೊಡಗು ಜಿಲ್ಲೆ): ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಜೊತೆ ಬಿಜೆಪಿ ಶಾಸಕರು ಹಾಗೂ ಸಂಸದರು ನಿಕಟ ಸಂಬಂಧ ಹೊಂದಿದ್ದಾರೆ. ಹಾಗಾಗಿ, ಆರೋಪಿಗಳ ಪರವಾಗಿ ಬಿಜೆಪಿಯಿಂದಲೇ ಪೊಲೀಸರ ಮೇಲೆ ಒತ್ತಡ ಬಂದಿರುವ ಸಾಧ್ಯತೆ ಇದೆ. ಈ ಕುರಿತು ತನಿಖೆಯಾಗಬೇಕು’ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಒತ್ತಾಯಿಸಿದರು.

‘ತನಿಖೆ ನಡೆದಾಗ ಮಾತ್ರ ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ ಎಂಬುದು ಖಚಿತವಾಗುತ್ತದೆ. ದರ್ಶನ್ ಒಬ್ಬ ನಟ. ಅವರಿಗೆ ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳು ಸೇರಿದಂತೆ ಅನೇಕ ಅಭಿಮಾನಿಗಳು, ಸ್ನೇಹಿತರಿದ್ದಾರೆ. ಸ್ನೇಹದ ಕಾರಣಕ್ಕೆ ಮೊದಲಿನ ದಿನಗಳಲ್ಲಿ ಒತ್ತಡ ಬಂದಿರಬಹುದು. ಆದರೆ, ಯಾರೇ ಒತ್ತಡ ಹೇರಿದರೂ ಮಣಿಯದ ಪೊಲೀಸರು ಅಭಿನಂದನೀಯರು’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ದರ್ಶನ್ ಅವರನ್ನು ಪಾರು ಮಾಡಲು ಕಾಂಗ್ರೆಸ್‌ ಯತ್ನಿಸುತ್ತಿದೆ’ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಆರೋಪಿಗಳಿಗೆ, ಅಪರಾಧಿಗಳಿಗೆ ರಕ್ಷಣೆ ಕೊಡುವುದು ಬಿಜೆಪಿ ಸಂಸ್ಕೃತಿ. ಪ್ರಜ್ವಲ್ ರೇವಣ್ಣ ಕುರಿತು ಎಲ್ಲ ಗೊತ್ತಿದ್ದೂ ಜೆಡಿಎಸ್ ಟಿಕೆಟ್ ನೀಡಿತ್ತು. ಪ್ರಧಾನಿಯೇ ಬಂದು, ಈ ನಾಡಿನಲ್ಲಿ ಇಂತಹ ಸುಪುತ್ರ ಹುಟ್ಟಿರಲಿಲ್ಲ ಎಂದು ಹಾಡಿ ಹೊಗಳಿದ್ದರು’ ಎಂದು ತಿರುಗೇಟು ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.