ADVERTISEMENT

ಕ್ರೀಡಾಂಗಣ ಸರಿಪಡಿಸಿ, ರಾಜ್ಯೋತ್ಸವ ಆಚರಿಸಿ: ಅಧಿಕಾರಿಗಳಿಗೆ ಕೊಡಗು DC ಸೂಚನೆ

ಅಧಿಕಾರಿಗಳಿಗೆ ಸೂಚನೆ ನೀಡಿದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 6:29 IST
Last Updated 19 ಅಕ್ಟೋಬರ್ 2024, 6:29 IST
ಕನ್ನಡ ರಾಜ್ಯೋತ್ಸವ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶುಕ್ರವಾರ ಮಡಿಕೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು
ಕನ್ನಡ ರಾಜ್ಯೋತ್ಸವ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶುಕ್ರವಾರ ಮಡಿಕೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು   

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ದಸರಾ ವೇಳೆಯಲ್ಲಿ ವಾಹನ ನಿಲುಗಡೆಗೆ ಬಳಕೆ ಮಾಡಿಕೊಂಡಿದ್ದರಿಂದ ಸಂಪೂರ್ಣ ಹಾಳಾಗಿದೆ. ಹಾಗಾಗಿ, ಅದನ್ನು ಕನ್ನಡ ರಾಜ್ಯೋತ್ಸವಕ್ಕಾಗಿ ಕೂಡಲೇ ದುರಸ್ತಿಗೊಳಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.

ಇಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೇವಲ ವಾಹನ ನಿಲುಗಡೆ ಬಳಕೆ ಮಾಡಿಕೊಂಡಿದ್ದರಿಂದ ಮಾತ್ರವಲ್ಲ ಹೆಚ್ಚಿನ ಮಳೆಯಿಂದಲೂ ಕ್ರೀಡಾಂಗಣವು ಹಾಳಾಗಿದೆ. ಅದಕ್ಕೆ ಮರಳನ್ನು ಹಾಕಿ ಸುಸ್ಥಿತಿಯಲ್ಲಿಡಬೇಕು ಎಂದು ಪೌರಾಯುಕ್ತ ಎಚ್.ಆರ್.ರಮೇಶ್ ಅವರಿಗೆ ನಿರ್ದೇಶನ ನೀಡಿದರು.

ADVERTISEMENT

ಕಳೆದ ಬಾರಿಯಂತೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ‘ವೇದಿಕೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸ್ವಲ್ಪ ಎತ್ತರದಲ್ಲಿ ಮಾಡಬೇಕು. ಗಣ್ಯರು, ಅತಿಥಿಗಳು, ಮಾಧ್ಯಮದವರು ಇತರರು ಕುಳಿತುಕೊಳ್ಳಲು ಸೂಕ್ತ ಕುರ್ಚಿಗಳನ್ನು ಅಳವಡಿಸಿ ಪೆಂಡಾಲ್ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಶಾಲೆಗಳಿಗೆ ಅವಕಾಶ ಮಾಡಿಕೊಡಬೇಕು. ಕನ್ನಡ ರಾಜ್ಯೋತ್ಸವ ಸಂಬಂಧ ಹಾಡುಗಳನ್ನು ಕಾರ್ಯಕ್ರಮಗಳು ಒಳಗೊಂಡಿರಬೇಕು ಎಂದು ಅವರು ಸಲಹೆ ನೀಡಿದರು.

ಸಾಂಸ್ಕೃತಿಕ ಕಾಯಕ್ರಮಗಳ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವ ತಯಾರಿಯನ್ನು ವೀಕ್ಷಿಸಿ ಸರಿಯಾದದ್ದನ್ನು ಆಯ್ಕೆ ಮಾಡಬೇಕು. ಕನ್ನಡ ರಾಜ್ಯೋತ್ಸವ ಸಂದರ್ಭಕ್ಕೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಹೇಳಿದರು.

ಸ್ವಾಗತ, ಮೆರವಣಿಗೆ, ಸ್ತಬ್ಧಚಿತ್ರ, ಧ್ಜಜಾರೋಹಣ ಮತ್ತು ವೇದಿಕೆ, ಪಥ ಸಂಚಲನ, ಸಾಂಸ್ಕೃತಿಕ, ಉಪಾಹಾರ, ಬಹುಮಾನ, ಸ್ವಚ್ಛತೆ ಹಾಗೂ ಕುಡಿಯುವ ನೀರು ಹೀಗೆ ವಿವಿಧ ಉಪ ಸಮಿತಿಗಳು ತಮ್ಮ ತಮ್ಮ ಹಂತದಲ್ಲಿ ಸಮಾಲೋಚನೆ ನಡೆಸಿ ಅ. 25 ರೊಳಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು.

ವಿವಿಧ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿಸುಲು ಅಗತ್ಯ ಕ್ರಮವಹಿಸುವಂತೆಯೂ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ‘ಕಳೆದ ಬಾರಿಯಂತೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಎಲ್ಲರೂ ಶ್ರಮಿಸಬೇಕು. ಕನ್ನಡ ಮಯ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾತನಾಡಿ, ‘ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದರು.

ಕನ್ನಡ ರಾಜ್ಯೋತ್ಸವ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶುಕ್ರವಾರ ಮಡಿಕೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರ ಆರ್.ಐಶ್ವರ್ಯ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಭಾಗವಹಿಸಿದ್ದರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ‘ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪೂರ್ವತಯಾರಿ ನಡೆಸಿ ಅಂತಿಮಗೊಳಿಸಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಭಾಗಹಿಸಿದ್ದ ಅಧಿಕಾರಿಗಳು

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್.ಶೆಟ್ಟಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಜಿ.ಕೆ.ನಾಯಕ್, ಡಿವೈಎಸ್‍ಪಿ ಮಹೇಶ್ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ, ಡಾ.ಮಧುಸೂದನ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಅನಿತಾ ಭಾಸ್ಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.