ADVERTISEMENT

ಕೊಡಗು: ಅವೈಜ್ಞಾನಿಕ ಕಾಮಗಾರಿ, ಮಾನವ ಹಸ್ತಕ್ಷೇಪದಿಂದ ಭೂಕುಸಿತ

ಜಿಲ್ಲಾಡಳಿತಕ್ಕೆ 16 ಪುಟಗಳ ಪ್ರಾಥಮಿಕ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 15:29 IST
Last Updated 17 ಡಿಸೆಂಬರ್ 2020, 15:29 IST
ಭೂಕುಸಿತವಾಗಿದ್ದ ಸ್ಥಳ (ಸಂಗ್ರಹ ಚಿತ್ರ)
ಭೂಕುಸಿತವಾಗಿದ್ದ ಸ್ಥಳ (ಸಂಗ್ರಹ ಚಿತ್ರ)   

ಮಡಿಕೇರಿ: ಕಳೆದ ಆಗಸ್ಟ್‌ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟವೂ ಸೇರಿದಂತೆ ಜಿಲ್ಲೆಯ ಕೆಲವು ಕಡೆ ಸಂಭವಿಸಿದ್ದ ಭೂಕುಸಿತ ಸ್ಥಳದ ಅಧ್ಯಯನ ನಡೆಸಿದ್ದ ಭೂವಿಜ್ಞಾನಿಗಳ ತಂಡವು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ. ಇತ್ತೀಚೆಗೆ 16 ಪುಟಗಳ ವರದಿಯು ಜಿಲ್ಲಾಡಳಿತದ ಕೈಸೇರಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆಯೂ ತಜ್ಞರು ಶಿಫಾರಸು ಮಾಡಿದ್ದಾರೆ.

ಅರಣ್ಯ ಇಲಾಖೆ ನಡೆಸಿದ್ದ ಇಂಗುಗುಂಡಿ ಕಾಮಗಾರಿ, ಬೆಟ್ಟದ ಮೇಲೆ ಉಂಟಾದ ಬಿರುಕು, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಅನಗತ್ಯ ಮಾನವ ಹಸ್ತಕ್ಷೇಪ ಹಾಗೂ ಅಧಿಕ ಮಳೆಯಿಂದ ಭೂಕುಸಿತವಾಗಿದೆ ಎಂದು ಭೂವಿಜ್ಞಾನಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆಗಸ್ಟ್‌ 6ರಂದು ತಲಕಾವೇರಿಯ ಗಜಗಿರಿ ಬೆಟ್ಟವು ಕುಸಿದಿತ್ತು. ಕೊಡಗು ಜಿಲ್ಲಾಡಳಿತ ಕೋರಿಕೆಯ ಮೇರೆಗೆ ತಜ್ಞರಾದ ಕಪಿಲ್‌ ಸಿಂಗ್‌ ಹಾಗೂ ಕಮಲ್‌ ಕುಮಾರ್‌ ಅವರು ಆಗಸ್ಟ್14 ಹಾಗೂ 15ರಂದು ತಲಕಾವೇರಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾರೆ.

ADVERTISEMENT

2007 ಹಾಗೂ 2019ರಲ್ಲೂ ತಲಕಾವೇರಿ ಭಾಗದಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 2020ರ ಆಗಸ್ಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಸಾವು– ನೋವು ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭೂಮಿಯ ಒಳಕ್ಕೆ ಇಳಿದ ನೀರು!:

ಗಜಗಿರಿ ಬೆಟ್ಟದ ತಳಭಾಗದಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಸಲಾಗಿದೆ. ಬೆಟ್ಟದ ಮೇಲೆ ಅರಣ್ಯ ಇಲಾಖೆಯವರು ಇಂಗುಗುಂಡಿ ತೆಗೆದಿದ್ದ ಕಾರಣಕ್ಕೆ ಮಳೆಗಾಲದಲ್ಲಿ ನೀರು ಒಳಕ್ಕೆ ಇಳಿದು ಬೆಟ್ಟವು ಸಡಿಲಗೊಂಡಿತ್ತು. ಅತಿಯಾದ ಮಳೆಯಿಂದ ಒತ್ತಡ ಉಂಟಾಗಿ ಭೂಕುಸಿತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ತಜ್ಞರ ಸಲಹೆಗಳು ಏನು?:

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುವ ಭಾರಿ ಮಳೆಯನ್ನು ತಡೆಯುವ ರೀತಿಯಲ್ಲಿ ಸರ್ವಋತು ರಸ್ತೆ ನಿರ್ಮಾಣವಾಗಬೇಕು. ಬೆಟ್ಟದ ಮೇಲೆ ನೀರು ಇಂಗದಂತೆ ತಡೆಯಬೇಕು, ತಡೆಗೋಡೆ ನಿರ್ಮಿಸುವ ವೇಳೆ ಗಟ್ಟಿಯಾದ ತಳಪಾಯ ಹಾಕಬೇಕು, ಆಳಕ್ಕೆ ಬೇರು ಇಳಿಯುವ ಮರ– ಗಿಡ ಬೆಳೆಸಬೇಕು, ಬೆಟ್ಟದಲ್ಲಿ ಬಿರುಕು ಕಾಣಿಸಿದರೆ ಅದನ್ನು ಮುಚ್ಚಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆಗಸ್ಟ್‌ನಲ್ಲಿ ಉಂಟಾಗಿದ್ದ ಗಜಗಿರಿ ಬೆಟ್ಟ ಕುಸಿತದಿಂದ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿದಂತೆ ಅವರ ಕುಟುಂಬದ ಐವರು ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.