ADVERTISEMENT

ಸುಂಟಿಕೊಪ್ಪ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 14:28 IST
Last Updated 25 ಜೂನ್ 2024, 14:28 IST
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು   

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಮನವಿಯನ್ನು ಆದ್ಯತೆ ಮೇರೆ ಪರಿಗಣಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ. ಮಂತರ್‌ ಗೌಡ, ಜನಪ್ರತಿನಿಧಿಗಳು ಪಕ್ಷದ ಮುಖಂಡರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಂದು–ಕೊರತೆ ಆಲಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ರಾತ್ರಿ ಪಾಳಿಗೆ ವೈದ್ಯರ ನೇಮಕ, ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಸೇರಿ ಒಟ್ಟಾರೆಯಾಗಿ ಆಸ್ಪತ್ರೆಯನ್ನು  ಮೇಲ್ದರ್ಜೆಗೇರಿಸಬೇಕು ಮುಂತಾದ ಬೇಡಿಕೆಗಳನ್ನು ಜನರು ಮುಂದಿಟ್ಟಿತ್ತು, ಸ್ಥಳೀಯವಾಗಿ ವೈದ್ಯರು ಲಭ್ಯವಿದ್ದಲ್ಲಿ ಅವರನ್ನು ತಕ್ಷಣ ನೇಮಕ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡಿ, ‘ಕುಶಾಲನಗರದಲ್ಲಿ ಈಗಾಗಲೇ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿದ್ದು, ಸೋಮವಾರಪೇಟೆಯಲ್ಲಿ 3 ಮಂದಿ ತಜ್ಞ ವೈದ್ಯರ ನೇಮಕ ಮಾಡಲು ಅನುಮತಿ ಪಡೆಯಲಾಗಿದೆ. ‌‌‌ ಶೀಘ್ರ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸಚಿವರ ಮೂಲಕ ಸರ್ಕಾರದೊಂದಿಗೆ ವ್ಯವಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ‘ಈ ಆರೋಗ್ಯ ಕೇಂದ್ರ ಜನಸಂಖ್ಯೆಗೆ ಅನುಗುಣವಾಗಿ ಮೇಲ್ದರ್ಜೆಗೆ ‌ಏರಬೇಕಾಗಿದೆ.ಈ ಆಸ್ಪತ್ರೆಯ ಸುತ್ತಮುತ್ತಲ 7 ಗ್ರಾಮ ಪಂಚಾಯಿತಿಯ ಜನ ತಮ್ಮ ಚಿಕಿತ್ಸೆಗೆ ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇಲ್ಲಿ ವೈದ್ಯರ ಕೊರತೆ, ಹೆಚ್ಚಿನ ಚಿಕಿತ್ಸೆ ಅಲಭ್ಯತೆ, ಔಷಧ ಕೊರತೆ, ಮರಣೋತ್ತರ ಪರೀಕ್ಷೆ ನಡೆಯದಿರುವುದು ಇಲ್ಲಿನ ಸಮಸ್ಯೆಗಳಾಗಿದ್ದು, ಇದನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕಾಗಿದೆ. ಸಾಕಷ್ಟು ಬಾರಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಗೇರಿಸಬೇಕು ಎಂಬ ಮನವಿ ಸಲ್ಲಿಸಲಾಗಿದೆ’ ಎಂದು ಅವರು ಉಲ್ಲೇಖೀಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮತ್ತು ಸದಸ್ಯರು ಸಚಿವರಿಗೆ ಮನವಿ ಈ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಬೇಕಾದ ಅವಶ್ಯಕತೆಯನ್ನು ಮನದಟ್ಟು ಮಾಡಿಕೊಟ್ಟರು.

‘ಸುಂಟಿಕೊಪ್ಪ ಪಟ್ಟಣದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಹಾದು ಹೋಗಿದ್ದು, ಅದೇ ರೀತಿ ಚೆಟ್ಟಳ್ಳಿ, ಮಾದಾಪುರ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. ಅಪಘಾತಗಳ ಸಂಖ್ಯೆಯೂ ಮಿತಿಮೀರಿದೆ. ತುರ್ತು ಸಂದರ್ಭ ಈ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ತೆ ನೀಡಲಾಗದೆ ಮಡಿಕೇರಿಗೆ ಗಾಯಾಳುಗಳನ್ನು ರವಾನಿಸಬೇಕಾದ ಅನಿವಾರ್ಯತೆ ಇದೆ’ ಎಂದು ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ಸಚಿವರಿಗೆ ಮನದಟ್ಟು ಮಾಡಿದರು.

ಸ್ಥಳೀಯ ಕಾಂಗ್ರೆಸ್ ಮುಖಂಡ ಪಿ.ಎಂ. ಲತೀಫ್ ಅವರು, ‘ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ವ್ಯಾಪ್ತಿಯಲ್ಲಿ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ. ಆದರೆ ಸಂಜೆ 4 ಗಂಟೆಯ ಬಳಿಕ ಇಲ್ಲಿ ವೈದ್ಯರು ಇಲ್ಲದೇ  ಇರುವುದರಿಂದ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಇದನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವುದೇ ಪರಿಹಾರ’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ರಫೀಕ್‌ಖಾನ್ ಅವರು, ‘ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯು ಸೇರಿ ಸಿಬ್ಬಂದಿ ಕೊರತೆಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಸತೀಶ್‌ಕುಮಾರ್, ಟಿಎಚ್‌ಒ ಡಾ.ಇಂದೂಧರ್, ತಾಲ್ಲೂಕು ದಂಡಾಧಿಕಾರಿ ಕಿರಣ್‌ಗೌರಯ್ಯ, ಆಡಳಿತಾಧಿಕಾರಿ ಡಾ.ಚೇತನ್‌ಕುಮಾರ್, ಪ್ರಾಥಮಿಕ ವೈದ್ಯಾಧಿಕಾರಿ ಸಮ್ನಾ, ಗ್ರಾಮ ಪಂಚಾಯಿತಿ ಸದಸ್ಯರಾದ ಶಬೀರ್, ಸಬಾಸ್ಟೀನ್, ಸೋಮನಾಥ್‌, ರೇಷ್ಮ, ಸ್ಥಳೀಯ ಮುಖಂಡರಾದ ಎಂ.ಎ. ಉಸ್ಮಾನ್, ಕೆ.ಇ. ಕರೀಂ, ಹಕೀಂ, ರೋಸ್‌ಮೇರಿ ರಾಡ್ರಿಗಸ್, ಮರಿಯ, ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್, ಭಾನುಮತಿ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಪಕ್ಷದ ಹಿರಿಯ ಮುಖಂಡ ಎಂ.ಎ. ವಸಂತ, ಕೆ.ಪಿ. ಚಂದ್ರಕಲಾ ಇದ್ದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ರಾತ್ರಿ ಭೇಟಿ ನೀಡಿದರು
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಶಾಸಕ ಮಂತರ್ ಗೌಡ ಅವರೊಂದಿಗೆ ಚರ್ಚಿಸಿದರು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.