ADVERTISEMENT

ಸುಂಟಿಕೊಪ್ಪ: ಬರೆ, ಬಂಡೆ ಕುಸಿಯುವ ಭೀತಿ

ಸುನಿಲ್ ಎಂ.ಎಸ್.
Published 8 ಆಗಸ್ಟ್ 2024, 6:30 IST
Last Updated 8 ಆಗಸ್ಟ್ 2024, 6:30 IST
ಸುಂಟಿಕೊಪ್ಪ ಪಂಪ್ ಹೌಸ್ ಬಡಾವಣೆಯಲ್ಲಿ ಕಂಡು ಬಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರೆ.
ಸುಂಟಿಕೊಪ್ಪ ಪಂಪ್ ಹೌಸ್ ಬಡಾವಣೆಯಲ್ಲಿ ಕಂಡು ಬಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬರೆ.   

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ಜೂನ್‌ 1ರಿಂದ ಆಗಸ್ಟ್ 6ರವರೆಗೆ ಬೀಳಬೇಕಿದ್ದ ವಾಡಿಕೆ ಮಳೆ 78 ಸೆಂ.ಮೀ. ಆದರೆ, ಸುರಿದಿರುವುದು 201 ಸೆಂ.ಮೀ. ಬರೋಬರಿ ಶೇ 155ರಷ್ಟು ಹೆಚ್ಚು ಮಳೆ ಈಗಾಗಲೇ ಬಂದಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಅಪಾಯದಂಚಿನಲ್ಲಿರುವ ಪ್ರದೇಶಗಳ ಜನರಲ್ಲಿ ಭೀತಿ ಆವರಿಸಿದೆ.

ಮುಖ್ಯವಾಗಿ, ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಪಂಪ್‌ಹೌಸ್ ಬಡಾವಣೆಯಲ್ಲಿ ಬಂಡೆ ಮತ್ತು ಬರೆ ಕುಸಿತದ ಭೀತಿ ಉಂಟಾಗಿದ್ದು, ನಿವಾಸಿಗಳು ಆತಂಕದಲ್ಲೇ ಬದುಕು ಸಾಗಿಸುತ್ತಿದ್ದಾರೆ.

ಈ ಬಡಾವಣೆಯ ಮೇಲ್ಭಾಗದಲ್ಲಿ ಬೃಹತ್ ಆಕಾರದ ಕಲ್ಲು, ಬರೆಯ ಪಕ್ಕದಲ್ಲಿಯೇ ಮರ ಹಾಗೂ ಜಲದ ನೀರು ಹರಿಯುತ್ತಿದೆ. ಒಂದು ವೇಳೆ ಗಾಳಿ, ಮಳೆ ಹೆಚ್ಚಾಗಿ ಆ ಮರ ಜಾರಿದರೆ ಅದರೊಂದಿಗೆ ಬಂಡೆ, ಬರೆ ಕುಸಿತ ಉಂಟಾಗಿ ನೂರಾರು ಮನೆಗಳು ಹಾನಿಯಾಗುವ ಜೊತೆಯಲ್ಲಿ ಸಾವು ನೋವುಗಳು ಸಂಭವಿಸಲಿದೆ ಎಂಬ ಭಯ ನಿವಾಸಿಗಳದ್ದು.

ADVERTISEMENT

ಈ ಪಂಪ್‌ಹೌಸ್‌ ಬಡಾವಣೆಯು ಮೊದಲು ಗದ್ದೆಯಾಗಿದ್ದು, ಅದನ್ನು ಭೂಪರಿವರ್ತನೆಯಾಗಿ ಮಾರ್ಪಡಿಸಿ ಇದೀಗ ಮನೆಗಳನ್ನು ನಿರ್ಮಿಸಿ, ನೂರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ವರ್ಷಪೂರ್ತಿ ಈ ಬಡಾವಣೆಯ ಜಾಗದಲ್ಲಿ ಜಲ ಉತ್ಪತ್ತಿಯಾಗಿ ಶೀತದ ವಾತಾವರಣವೇ ಉಂಟಾಗಿ, ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಪಾತದಂತೆ ನೀರು ಹರಿಯುತ್ತದೆ.

ಇಲ್ಲಿನ ಬಹಳಷ್ಟು ಮಂದಿ ಈ ಜಲದ ನೀರನ್ನು ದಿನನಿತ್ಯದ ಬಳಕೆಗೆ ಬಳಸುವ ಜೊತೆಯಲ್ಲಿ ಎಲ್ಲಿ ನಮ್ಮ ಮನೆ ಕುಸಿಯಲಿದೆಯೋ ಎಂಬ ಆತಂಕದಲ್ಲಿದ್ದಾರೆ.

ಈ ಬಡಾವಣೆಯಲ್ಲಿ 600ಕ್ಕೂ ಹೆಚ್ಚಿನ ವಾಸದ ಮನೆಗಳಿದ್ದು, ಈ ಭಾಗದಲ್ಲಿ ಭೂಕುಸಿತವಾದರೆ ನೂರಕ್ಕೂ ಹೆಚ್ಚು ಮನೆಗಳು ನಾಶವಾಗಲಿದೆ ಎಂದು ಸ್ಥಳೀಯ ನಿವಾಸಿ ಹಮೀದ್ ಆತಂಕ ವ್ಯಕ್ತಪಡಿಸಿದರು.

ಈ ಬಂಡೆ ಮತ್ತು ಬರೆಯ ಪಕ್ಕದಲ್ಲಿ ಜುಬೈದ, ಹುಸೈನ್ ಸೇರಿದಂತೆ ಹಲವು‌ ಮನೆಗಳಿದ್ದು, ಈ ಮನೆಗಳನ್ನು ಖಾಲಿ ಮಾಡಿ ಬೇರೆಡೆ ನೆಲೆಸಲು ಜಾಗ ಕೊಡಿಸುವುದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದರೂ ಇವರು ಒಪ್ಪುವುದಿಲ್ಲ ಎಂದು ಸದಸ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಸುರೇಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅಪಾಯದ ಅಂಚಿನಲ್ಲಿರುವ ಮನೆಯ ಮಾಲೀಕರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಹೇಳಿದ್ದರೂ, ಅವರು ಮನೆ ಬಿಟ್ಟು ಹೋಗುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಒಂದು ವೇಳೆ ಮನೆಯವರು ಒಪ್ಪಿದ್ದಲ್ಲಿ ಶಾಸಕರ ಬಳಿ ನಿಯೋಗ ತೆರಳಿ ಇಲ್ಲಿಯ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಡಾವಣೆಯ ನಿವಾಸಿಗಳಾದ ಜುಬೈದ ಮತ್ತು ಹುಸೈನ್, ‘ನಾವು ಕಳೆದ ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ನಿರಂತರವಾಗಿ ಮೇಲಿನಿಂದ ಜಲ ನೀರು ಬರುತ್ತಿದ್ದು, ಭಯದಿಂದಲೇ ಬದುಕು ಸಾಗಿಸುತ್ತಿದ್ದೇವೆ. ಹಾಗಾಗಿ ನಮಗೆ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿಕೊಂಡರು.

ಇಷ್ಟೇ ಅಲ್ಲದೇ, ಈ ಬಡಾವಣೆಯಲ್ಲಿ ಒಂದು ಕೆರೆಯಿದ್ದು, ಆ ಕೆರೆಯನ್ನು ಮುಚ್ಚಿ ಅದರ ಮೇಲ್ಭಾಗದಲ್ಲಿ ಅಂಗನವಾಡಿಯನ್ನು ಕಟ್ಟಲಾಗಿದೆ. ಮಳೆಗಾಲದಲ್ಲಿ ಈ ಅಂಗನವಾಡಿ ಒಳಗೆ ಮತ್ತು ಹೊರಗೆ ಜಲ ಉತ್ಪತ್ತಿಯಾಗುತ್ತದೆ. ಇದರಿಂದ ಪುಟಾಣಿ ಮಕ್ಕಳಿಗೂ ಸಂಕಷ್ಟ ಎದುರಾಗಿರುತ್ತದೆ. ಅಲ್ಲದೇ, ಮುಚ್ಚಿದ ಕೆರೆಯ ಕೆಳಭಾಗದಲ್ಲಿ ನೀರು ಹರಿಯುತ್ತಿದ್ದು, ಈ ಬಡಾವಣೆಯ ನಿವಾಸಿಗಳಿಗೆ ಆತಂಕದ ಜೊತೆಗೆ ಯಾವ ಸಮಯದಲ್ಲಾದರೂ ಮನೆಗಳು ಕುಸಿಯಬಹುದು ಎಂಬ ಭಯವೂ ಉಂಟಾಗಿದೆ.

ಕೂಡಲೇ ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ, ಸರ್ಕಾರ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.

ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯಲ್ಲಿ ಕಲ್ಲು ಬಂಡೆಗಳ ನಡುವೆ ಜಲದ ನೀರು ಹರಿದು ಬರುತ್ತಿರುವುದು
ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ಮನೆಯ ಪಕ್ಕದಲ್ಲಿ ಜಲ ಉಕ್ಕುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.