ಮಡಿಕೇರಿ: ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಪರಿಣಾಮ ರೆಸಾರ್ಟ್ ಪಾಲಿಟಿಕ್ಸ್ ಆರಂಭವಾಗಿದೆ. ಫೆ.19ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮುಖಂಡರು, ತಮ್ಮ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಬೆಂಬಲಿತ ಪಕ್ಷೇತರ ಸದಸ್ಯರನ್ನು ಗುರುವಾರ ರಾತ್ರಿ ಕೊಡಗಿನ ರೆಸಾರ್ಟ್‌ವೊಂದಕ್ಕೆ ಕರೆ ತಂದಿದ್ದರು ಎಂದು ಮೂಲಗಳು ತಿಳಿಸಿವೆ.
ರೆಸಾರ್ಟ್ ವಾಸ್ತವ್ಯವು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದು ಶುಕ್ರವಾರ ಮಧ್ಯಾಹ್ನದ ವೇಳೆಗೆ ಇಲ್ಲಿಂದ ಚಿಕ್ಕಮಗಳೂರಿನ ಹೋಮ್‌ಸ್ಟೇಯೊಂದಕ್ಕೆ 21 ಸದಸ್ಯರ ವಾಸ್ತವ್ಯ ಸ್ಥಳಾಂತರಗೊಂಡಿದೆ. ಮೇಯರ್ ಗಾದಿಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸದಸ್ಯರೊಬ್ಬರ ಮಾರ್ಗದರ್ಶನದಲ್ಲಿ ಈ ರೆಸಾರ್ಟ್ ವಾಸ್ತವ್ಯ ಆರಂಭವಾಗಿದೆ. ಅದಕ್ಕೆ ಅಲ್ಲಿನ ಸಂಸದರು, ಪ್ರಭಾವಿ ಶಾಸಕರೊಬ್ಬರು ಬೆಂಬಲವೂ ಇದೆ ಎನ್ನಲಾಗಿದೆ.
‘ಕಾಂಗ್ರೆಸ್ ಮುಖಂಡರು, ತಮ್ಮ ಬೆಂಬಲಿತ ಸದಸ್ಯರನ್ನು ಸೆಳೆಯುವ ಸಾಧ್ಯತೆಯಿರುವ ಕಾರಣ ರೆಸಾರ್ಟ್ ವಾಸ್ತವ್ಯಕ್ಕೆ ಮುಂದಾಗಿದ್ದೇವೆ’ ಎಂದು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಅಜಯ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೊಬೈಲ್ ಕಸಿದುಕೊಳ್ಳಲಾಗಿದೆ?:ರೆಸಾರ್ಟ್ ರಾಜಕೀಯ ಪಾಲಿಕೆ ಚುನಾವಣೆಗೂ ಕಾಲಿಟ್ಟಿದ್ದು ಸದಸ್ಯರಿಗೆ ಮೊಬೈಲ್ ಸಹ ನೀಡಲಾಗಿಲ್ಲ. ಹೀಗಾಗಿ, ಕೊಡಗಿಗೆ ಬಂದಿದ್ದ ಸದಸ್ಯರು ಯಾರ ಸಂಪರ್ಕಕ್ಕೂ ಸಿಗಲಿಲ್ಲ.
ಕಳೆದ ನವೆಂಬರ್ 12ರಂದು ಅಲ್ಲಿನ ಪಾಲಿಕೆಗೆ ಚುನಾವಣೆ ನಡೆದಿತ್ತು. ಅದೇ ತಿಂಗಳ 14ರಂದು ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ 22, ಬಿಜೆಪಿ 17 ವಾರ್ಡ್‌ಗಳಲ್ಲಿ ಗೆದ್ದಿದ್ದವು. ಅದೇ ರೀತಿ ಐವರು ಪಕ್ಷೇತರರು ಹಾಗೂ ಜೆಡಿಎಸ್‌ನಿಂದ ಒಬ್ಬರು ಆಯ್ಕೆಯಾಗಿದ್ದರು.
ಒಬ್ಬರು ಸಂಸದರು, ಇಬ್ಬರು ಶಾಸಕರು ಹಾಗೂ 14 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶವಿದೆ. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು, ಪಕ್ಷೇತರ ಸದಸ್ಯರು ಹಾಗೂ ಮತದಾನಕ್ಕೆ ಅವಕಾಶವಿರುವ ಜನಪ್ರತಿನಿಧಿಗಳನ್ನು ಬಳಸಿಕೊಂಡು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೇರಲು ತಂತ್ರ ರೂಪಿಸಿವೆ. ಬಿಜೆಪಿ ಮುಖಂಡರು ಬೆಂಬಲಿತರ ಸದಸ್ಯರನ್ನು ಕಾಂಗ್ರೆಸ್‌ನವರು ಸೆಳೆಯದಂತೆ ರೆಸಾರ್ಟ್‌ನಲ್ಲಿ ಹಿಡಿದಿಡುವ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.