ಗೋಣಿಕೊಪ್ಪಲು: ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಭಾನುವಾರ ಕೊಡವ ಟಗ್ ಆಫ್ ಅಕಾಡೆಮಿಯ ಮಹತ್ವದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದಲ್ಲಿ ನಡೆದ ಹಗ್ಗ ಜಗ್ಗಾಟ ಅಕಾಡೆಮಿ ಸಭೆಯಲ್ಲಿ ತೆಂಗಿನ ನಾರಿನಿಂದ ತಯಾರಿಸುವ ಚೂಡಿ ಹಗ್ಗದ ಬದಲಾಗಿ ಅಂತರರಾಷ್ಟ್ರೀಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಳಸುವ ಹತ್ತಿಯ ದಾರಗಳಿಂದ ಮಾಡಿದ ಹಗ್ಗವನ್ನು ಬಳಸುವ ತೀರ್ಮಾನ ಕೈಗೊಳ್ಳಲಾಯಿತು.
ಹತ್ತಿ ಹಗ್ಗವು ಕೈಗಳಿಗೆ ನೋವುಂಟು ಮಾಡುವುದಿಲ್ಲ ಎಂಬ ಕಾರಣದಿಂದ ಹಗ್ಗ ದುಬಾರಿಯಾದರೂ ಅದನ್ನು ಬಳಸಲಾಗುವುದು ಎಂದು ಆಯೋಜಕರು ತಿಳಿಸಿದರು.
2025ರ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಹಬ್ಬವನ್ನು ಅರಮೇರಿಯಲ್ಲಿ ನಡೆಸಲು ಬಾಳೆಕುಟ್ಟಿರ ಕುಟುಂಬಸ್ಥರಿ ಈಗಾಗಲೇ ತಯಾರಿ ನಡೆಸಿದ್ದಾರೆ. ತೆಂಗಿನ ನಾರಿನ ಒರಟು ಹಗ್ಗದಿಂದ ಕೈ ಉರಿಯಾಗುತ್ತದೆಂಬ ಕಾರಣಕ್ಕೆ ಹೆಚ್ಚಿನ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಹತ್ತಿ ಹಗ್ಗ ಬಳಸಲು ತೀರ್ಮಾನಿಸಲಾಯಿತು.
2022ರಲ್ಲಿ ಹಗ್ಗ ಜಗ್ಗಾಟ ಹಬ್ಬ ಆರಂಭವಾಗಿದ್ದು, ಪ್ರಥಮ ವರ್ಷದ ಹಬ್ಬವನ್ನು ಕಕ್ಕಬೆಯಲ್ಲಿ ಯಶಸ್ವಿಯಾಗಿ ನಡೆಯಿತು. ಇದೀಗ 5ನೇ ವರ್ಷದ ಹಗ್ಗ ಜಗ್ಗಾಟ ಸ್ಪರ್ಧೆಯಾಗಿದೆ.
ಹಗ್ಗ ಜಗ್ಗಾಟ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪರವರ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಉಳುವಂಗಡ ಲೋಹಿತ್ ಭೀಮಯ್ಯ, ಖಜಾಂಚಿ ಜಮ್ಮಡ ಗಿಲ್, ನಿರ್ದೇಶಕರಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.