ADVERTISEMENT

ಸಿದ್ದಾಪುರ | ಪಟ್ಟಣದಲ್ಲಿ ಕೊಳೆತ ತ್ಯಾಜ್ಯ: ಸಾಂಕ್ರಾಮಿಕ ರೋಗದ ಭೀತಿ

ರೆಜಿತ್ ಕುಮಾರ್
Published 28 ಮೇ 2024, 7:35 IST
Last Updated 28 ಮೇ 2024, 7:35 IST
ಮಾರುಕಟ್ಟೆಯಲ್ಲಿ ಬಿದ್ದಿರುವ ಕಸದ ರಾಶಿ
ಮಾರುಕಟ್ಟೆಯಲ್ಲಿ ಬಿದ್ದಿರುವ ಕಸದ ರಾಶಿ   

ಸಿದ್ದಾಪುರ: ಪಟ್ಟಣದಲ್ಲಿ ಸೂಕ್ತ ಕಸ ವಿಲೇವಾರಿಯಾಗದೇ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ತುಂಬಿದೆ. ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಸಿದ್ದಾಪುರದಲ್ಲಿ ಕಸದ ವಿಲೇವಾರಿ ಜ್ವಾಲಂತ ಸಮಸ್ಯೆಯಾಗಿದ್ದು, ಸೂಕ್ತ ಜಾಗವಿಲ್ಲದೇ ಕಸ ವಿಲೇವಾರಿ ನಡೆಯುತ್ತಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ, ಮೈಸೂರು ರಸ್ತೆ, ಬಸ್ಸ್ ನಿಲ್ದಾಣ ಸೇರಿದಂತೆ ಪಟ್ಟಣದ ವಿವಿಧ ಭಾಗದಲ್ಲಿ ಸೂಕ್ತ ಕಸವಿಲೇವಾರಿಯಾಗದೇ ರಾಶಿಗಟ್ಟಲೇ ಕಸ ಬಿದ್ದಿದೆ.

ಮರುಕಟ್ಟೆ ಭಾಗದಲ್ಲಿ ಕಸದ ರಾಶಿ ಬಿದ್ದಿದ್ದು, ಸಂತೆ ಮುಗಿದ ಬಳಿಕ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ಮಾರುಕಟ್ಟೆಯ ಸಮೀಪದ ಚರಂಡಿಗಳಲ್ಲಿಯೂ ಕೊಳೆತ ನೀರು ನಿಂತಿದ್ದು, ಮಳೆಗಾಲದಲ್ಲಿ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಮೈಸೂರು ರಸ್ತೆ, ಸರ್ಕಾರಿ ಮಲಯಾಳಂ ಶಾಲೆಯ ಮುಂಭಾಗ, ಹಳೇ ಸಿದ್ದಾಪುರ, ಪಾಲಿಬೆಟ್ಟ ರಸ್ತೆ, ಬಸ್ಸ್ ನಿಲ್ದಾಣದಲ್ಲೂ ಕಸದ ರಾಶಿ ಬಿದ್ದಿದೆ.

ADVERTISEMENT

ಎಂ.ಜಿ ರಸ್ತೆ ಹಾಗೂ ಮಾರುಕಟ್ಟೆ ಬಾಗದ ಮನೆಯ ಸಮೀಪದಲ್ಲಿರುವ ಹಲವರಿಗೆ ಜ್ವರ ಕಾಣಿಸಿಕೊಂಡಿದೆ. ಹಲವು ಸಮಯದಿಂದ ಸಾರ್ವಜನಿಕರು ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸಿರಲಿಲ್ಲ. ಮಾತ್ರವಲ್ಲದೇ ಮಾರುಕಟ್ಟೆ ಬಾಗದಲ್ಲಿ ಕಸದ ತ್ಯಾಜ್ಯಗಳು, ಕೊಳಚೆ ನೀರು ನಿಂತಿದ್ದು, ಅಶುಚಿತ್ವ ಎದ್ದು ಕಾಣುತ್ತಿದೆ. ಗ್ರಾಮ ಪಂಚಾಯಿತಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾರುಕಟ್ಟೆ ನಿವಾಸಿ ಶೌಕತ್ ಆಲಿ ಒತ್ತಾಯಿಸಿದ್ದಾರೆ.

ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಯತಿರಾಜ್ ಪ್ರತಿಕ್ರಿಯಿಸಿ, ‘ಅಶುಚಿತ್ವ, ಮೂರು ದಿನಕ್ಕಿಂತಲೂ ಹೆಚ್ಚು ಕಾಲ ನೀರು ನಿಲ್ಲುವಲ್ಲಿ ಲಾರ್ವಾ ಹುಟ್ಟಿಕೊಳ್ಳುತ್ತದೆ. ಸಾರ್ವಜನಿಕರು ಮನೆಯ ಬಳಿ ಧೀರ್ಘಕಾಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನವರಿ ತಿಂಗಳಿನಿಂದ ಈವರೆಗೂ 35 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಶೀಘ್ರದಲ್ಲೇ ಸಿದ್ದಾಪುರದಲ್ಲಿ ಲಾರ್ವಾ ಸರ್ವೆ ಮಾಡಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಾ ಗೋಪಾಲ್ ಪ್ರತಿಕ್ರಿಯಿಸಿ, ‘ಗ್ರಾಪ ಪಂಚಾಯಿತಿ ವತಿಯಿಂದ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ. ಕಸವನ್ನು ವಿಂಗಡಿಸಲು ಸಾಧ್ಯವಾಗುತ್ತಿಲ್ಲ. ನೀತಿಸಂಹಿತೆ ಮುಗಿದ ಬಳಿಕ ಸಭೆ ನಡೆಸಿ, ಕಸವನ್ನು ವಿಂಗಡಿಸಿ, ವಿಲೇವಾರಿ ಮಾಡಲಾಗುವುದು’ ಎಂದು ಹೇಳಿದರು.

ಸರ್ಕಾರಿ ಮಲಯಾಳಂ ಶಾಲೆಯ ಮುಂಭಾಗದಲ್ಲಿ ಹಾಕಲಾಗಿರುವ ಕಸದ ರಾಶಿ
ಕರಡಿಗೋಡು ರಸ್ತೆಯ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು
ನೀತಿ ಸಂಹಿತೆ ಮುಗಿದ ಬಳಿಕ ಸಭೆ ಕಸ ವಿಲೇವಾರಿ ಇನ್ನೂ ವಿಳಂಬ ವ್ಯಾಪಿಸಿದೆ ಸಾಂಕ್ರಮಿಕ ರೋಗ ಭೀತಿ
ಡೆಂಗಿ ಭೀತಿ
ಮಾರುಕಟ್ಟೆ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದ್ದು ಡೆಂಗಿ ಕೂಡ ಪತ್ತೆಯಾಗಿದೆ. ಒಂದೇ ವಾರದಲ್ಲಿ ಮಾರುಕಟ್ಟೆ ಭಾಗದ 30ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಹಲವು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವು ತಿಂಗಳುಗಳಿಂದ ಮಾರುಕಟ್ಟೆ ಭಾಗದ ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ ಬಳಿಕ ಇದೀಗ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕ್ ಶುಚಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.