ADVERTISEMENT

ಕೊಡಗು: ಶಾಲೆಗಳ ತುರ್ತು ದುರಸ್ತಿಗೆ ಬೇಕಿದೆ ₹ 1.08 ಕೋಟಿ

ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಪ್ರಸ್ತಾವ, ಮಳೆಗಾಲ ಬಂದರೂ ಹಣ ಬಿಡುಗಡೆಯಾಗಿಲ್ಲ

ಕೆ.ಎಸ್.ಗಿರೀಶ್
Published 17 ಜೂನ್ 2024, 7:08 IST
Last Updated 17 ಜೂನ್ 2024, 7:08 IST
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯನ್ನು ಈಚೆಗೆ ಸರಿಪಡಿಸುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯನ್ನು ಈಚೆಗೆ ಸರಿಪಡಿಸುತ್ತಿರುವುದು.   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈಗಲೋ, ಆಗಲೋ ಬೀಳುವ ಹಂತದಲ್ಲಿರುವ ಶಿಥಿಲವಾದ ಕಟ್ಟಡವಾಗಲಿ, ಮುರಿದ ಬಾಗಿಲುಗಳುಳ್ಳ ಶಾಲಾ ಕಟ್ಟಡಗಳಿಲ್ಲ. ಗ್ರಾಮಸ್ಥರು, ಶಿಕ್ಷಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳ ಪ್ರಯತ್ನದ ಫಲವಾಗಿ ಒಂದಿಷ್ಟು ಉಸಿರಾಡುವ ಕಟ್ಟಡಗಳು ಇವೆ. ಆದರೂ, 38 ಸರ್ಕಾರಿ ಶಾಲೆಗಳ ದುರಸ್ತಿ ತುರ್ತಾಗಿ ಆಗಬೇಕಿದೆ.

ಅದಕ್ಕಾಗಿ ಇಲಾಖೆಯ ಅಧಿಕಾರಿಗಳು ₹ 1.08 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮಡಿಕೇರಿ ಮತ್ತು ವಿರಾಜಪೇಟೆ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಲಾ ₹ 54.24 ಲಕ್ಷ ಮೊತ್ತದ ಪ್ರಸ್ತಾವ ಸಲ್ಲಿಕೆಯಾಗಿದ್ದು, ಸಂಬಂಧಪಟ್ಟ ಶಾಸಕರು ಮುತುವರ್ಜಿ ವಹಿಸಿ ಈ ಹಣವನ್ನು ಬಿಡುಗಡೆ ಮಾಡಿಸಿಕೊಟ್ಟಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ನೆರವಾಗಲಿದೆ.

ಆದರೆ, ಇಂತಹ ದುರಸ್ತಿ ಕಾರ್ಯಗಳು ಮಳೆಗಾಲಕ್ಕೂ ಮುನ್ನವೇ ಜಿಲ್ಲೆಯಲ್ಲಿ ನಡೆದರೆ ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಬೇರೆ ಜಿಲ್ಲೆಗಳಿಗೆ ಇರುವ ನಿಯಮಗಳಂತೆಯೇ ಇಲ್ಲಿಯೂ ಪಾಲನೆ ಮಾಡಲು ಹೋದರೆ ದುರಸ್ತಿ ಕಾರ್ಯವನ್ನು ಮಳೆಗಾಲದಲ್ಲೇ ಮಾಡಬೇಕಾಗುತ್ತದೆ. ಹಾಗಾಗಿ, ಸರ್ಕಾರವೇ ತನ್ನ ನೀತಿಯಲ್ಲಿ ಬದಲಾವಣೆ ತಂದು ವಿಶೇಷವಾಗಿ ಕೊಡಗಿಗೆಂದೇ ಜನವರಿಯಿಂದ ದುರಸ್ತಿ ಕಾರ್ಯ ನಡೆಸಿದರೆ, ಮಳೆಗಾಲದಲ್ಲಿ ಸುರಕ್ಷಿತವಾಗಿ ವಿದ್ಯಾರ್ಥಿಗಳು ಪಾಠ ಕೇಳ ಬಹುದಾಗಿದೆ.

ADVERTISEMENT

ಕೊಡಗು ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುದರಿಂದ ಸಾಮಾನ್ಯವಾಗಿ ಹೆಚ್ಚಿನ ಕಡೆ ಶಾಲಾ ಕಟ್ಟಡಗಳಿಗೆ ಹೆಂಚಿನ ಚಾವಣಿ ಇದೆ. ಆರ್‌ಸಿಸಿ ಚಾವಣಿ ಇದ್ದರೆ ಹೆಚ್ಚು ಮಳೆ ಇದ್ದರೆ ಮಕ್ಕಳಿಗೆ ಶೀತ ಹಿಡಿಯುತ್ತದೆ ಎಂಬ ಕಾರಣಕ್ಕೆ ಚಾವಣಿಯ ಸ್ವರೂಪವನ್ನು ಬದಲಿಸಿಲ್ಲ. ಹಾಗಾಗಿ, ಹೆಂಚಿನ ಚಾವಣಿಯ ದುರಸ್ತಿಗೆಂದೇ ಪ್ರತಿ ವರ್ಷ ಒಂದಿಷ್ಟು ಹಣ ಬೇಕಾಗುತ್ತದೆ.

ಕೊಡಗಿನಲ್ಲಿ ಸರ್ಕಾರೇತರ ಸಂಸ್ಥೆಗಳ ನೆರವಿನಿಂದಲೂ ಹಲವು ಶಾಲೆಗಳು ಉತ್ತಮ ಕಟ್ಟಡದ ಭಾಗ್ಯ ಕಂಡಿವೆ. ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಸಾಟ್ ಎಂಬ ಸರ್ಕಾರೇತರ ಸಂಸ್ಥೆಯ ನೆರವಿನಿಂದ ಖಾಸಗಿ ಶಾಲೆಯನ್ನೂ ಮೀರಿಸುವಂತಹ ಕಟ್ಟಡ ಪಡೆದಿದೆ. ಇಂತಹ ಸಕರಾತ್ಮಕವಾದ ಸಂಗತಿಗಳೂ ಅಲ್ಲಲ್ಲಿ ಗೋಚರಿಸುತ್ತಿವೆ.

ಸೋಮವಾರಪೇಟೆ: ಮಳೆಗಾಲ ಬಂದರೂ ದುರಸ್ತಿ ಮುಗಿದಿಲ್ಲ

ಸೋಮವಾರಪೇಟೆ: ಮಳೆಗಾಲ ಪ್ರಾರಂಭವಾಗುತ್ತಿದ್ದರೂ, ಇಂದಿಗೂ ಹಲವು ಸರ್ಕಾರಿ ಶಾಲೆಗಳ ಚಾವಣಿ ದುರಸ್ತಿ ಕಾರ್ಯ ಮುಗಿಯದೆ, ಕೊಠಡಿಗಳಲ್ಲಿ ನೀರಿನ ಸಿಂಚನವಾಗುತ್ತಿದೆ.

ಅತಿ ಹೆಚ್ಚು ಮಳೆಯಾಗುವ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿ ದುರಸ್ಥಿಗೀಡಾಗಿ ಒಂದೆರಡು ವರ್ಷಗಳೇ ಕಳೆದಿದ್ದರೂ, ಇಂದಿಗೂ ಸರಿಪಡಿಸಿಲ್ಲ. ಒಂದು ಭಾಗದ ಗೋಡೆ ಬಿರುಕು ಬಿಟ್ಟಿದೆ. ಒಂದು ಕೊಠಡಿಯ ಮೇಲ್ಚಾವಣಿ ಸರಿಪಡಿಸಿದ್ದು, ಉಳಿದೆಡೆ ಗ್ರಾಮ ಪಂಚಾಯಿತಿ ಸಹಕಾರದಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲು ಮುಂದಾಗಿರುವುದಾಗಿ ಬೆಟ್ಟದಳ್ಳಿ ಗ್ರಾಮಸ್ಥರು ತಿಳಿಸಿದರು.

ಯಡೂರು ಗ್ರಾಮದ ಪ್ರಾಥಮಿಕ ಶಾಲೆಯ ಚಾವಣಿಯೂ ಹಾಳಾಗಿದ್ದು, ಮಳೆ ಪ್ರಾರಂಭವಾಗಿರುವುದರಿಂದ ಹಣವಿಲ್ಲದಿದ್ದರೂ, ತುರ್ತು ಕಾಮಗಾರಿಯನ್ನು ಶಾಲಾ ನಿಧಿಯನ್ನು ಬಳಸಿಕೊಂಡು ಮಾಡಲು ತಯಾರಿ ನಡೆಸಲಾಗಿದೆ. ಕಾರ್ಮಿಕರ ಕೊರತೆಯಿಂದ ತಡವಾಗುತ್ತಿದ್ದು, ಒಂದು ವಾರದಲ್ಲಿ ಸರಿಪಡಿಸುವುದಾಗಿ ಶಾಲಾ ಮುಖ್ಯ ಶಿಕ್ಷಕರು ತಿಳಿಸಿದರು.

ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್ಲ ಸರಿ ಇದ್ದರೂ, ಕೆಲವೊಮ್ಮೆ ದುಷ್ಕರ್ಮಿಗಳ ಹಾವಳಿಯಿಂದ ಶಾಲೆಯಲ್ಲಿ ಅನಾಚಾರಗಳು ನಡೆಯುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಈ ಹಿಂದೆ ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪುಂಡರು ಕದ್ದೊಯ್ದಿದ್ದರು. ಶಾಲೆಗೆ ರಜೆ ಎಂದು ತಿಳಿಯುತ್ತಲೇ ಮದ್ಯವ್ಯಸನಿಗಳು ಇಲ್ಲಿ ಮದ್ಯಪಾನಕ್ಕಾಗಿ ಬಿಡಾರ ಹೂಡುತ್ತಾರೆ. ಅದಕ್ಕಾಗಿ ಕೆಲವೊಮ್ಮೆ ಸಿಸಿಟಿವಿ ಕ್ಯಾಮೆರಾದ ಮೇಲೆ ಬಟ್ಟೆಯನ್ನು ಸಹ ಮುಚ್ಚಿ ದೂಮಪಾನ ಮತ್ತು ಮದ್ಯಪಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ದಿನೇಶ್ ದೂರಿದರು.

ಚುನಾವಣೆ ಘೋಷಣೆಯಾಗಿದ್ದರಿಂದ ಇನ್ನೂ ಶಾಲೆಗಳಿಗೆ ಯಾವುದೇ ಹಣ ಬಾರದೆ, ಹಲವು ಶಾಲೆಗಳಲ್ಲಿ ಇಂದಿಗೂ ಸಾಕಷ್ಟು ಸಮಸ್ಯೆ ತಲೆದೋರಿದೆ. ಮುಂದಿನ ದಿನಗಳಲ್ಲಾದರೂ ಸರಿಪಡಿಸುತ್ತಾರೋ ಎಂದು ಪೋಷಕರು ಆತಂಕದಿಂದ ಕಾಯುತ್ತಿದ್ದಾರೆ.

ಸಿದ್ದಾಪುರ; ಜಾರುಬಂಡೆ ಅಪಾಯದಲ್ಲಿ

ಸಿದ್ದಾಪುರ: ಗುಹ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 40 ವರ್ಷ ಹಿಂದೆ ನಿರ್ಮಿಸಿರುವ ಜಾರುಬಂಡೆ ಬೀಳುವ ಹಂತದಲ್ಲಿದ್ದು, ಅಪಾಯಕ್ಕೆ ಎಡೆಮಾಡಿಕೊಟ್ಟಿದೆ.

ಗುಹ್ಯ ಸರ್ಕಾರಿ ಶಾಲೆ ನಿರ್ಮಿಸಲು ಜಾಗ ನೀಡಿದ ದಾನಿಗಳಾದ ಚೇಂದಂಡ ಮುತ್ತಪ್ಪ ಅವರು ಕಲ್ಲು ಮತ್ತು ಸಿಮೆಂಟ್ ಬಳಸಿ ಜಾರುಬಂಡೆಯನ್ನು ನಿರ್ಮಿಸಿಕೊಟ್ಟಿದ್ದರು. ಕಳೆದ ಕೆಲವು ವರ್ಷಗಳಿಂದ ಇದು ಉಪಯೋಗಶೂನ್ಯವಾಗಿದ್ದು, ಇದರ ಕೆಳ ಭಾಗದಲ್ಲಿ ಮಣ್ಣು ಕುಸಿಯುತ್ತಿದೆ. ಇದರ ಮಧ್ಯ ಭಾಗದಲ್ಲಿ ಬಿರುಕುಬಿಟ್ಟಿದೆ. ಶಾಲಾ ಮಕ್ಕಳು ಜಾರುಬಂಡೆಯ ಸಮೀಪದಲ್ಲೇ ಆಟವಾಡುತ್ತಿದ್ದು, ವಿದ್ಯಾರ್ಥಿಗಳು ಇದರ ಸಮೀಪದಿಂದಲೇ ಹಾದುಹೋಗುತ್ತಾರೆ. ಮಳೆಗಾಲದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದ್ದು, ಇದನ್ನು ತೆರವುಗೊಳಿಸುವುದು ಇಲ್ಲವೇ ದುರಸ್ತಿಪಡಿಸುವುದು ಸೂಕ್ತ ಎಂದು ಸ್ಥಳೀಯರು ಹೇಳುತ್ತಾರೆ.

ಕಾಡಾನೆ ಹೆಚ್ಚಾಗಿರುವ ಗುಹ್ಯ ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡಾನೆಗಳ ಹಿಂಡು ಶಾಲೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶಾಲೆಯ ಆವರಣದ ಸುತ್ತಲೂ ಸೋಲಾರ್ ಬೇಲಿ ನಿರ್ಮಿಸಿದ್ದಾರೆ. ಆದರೆ, ಸೋಲಾರ್ ಬೇಲಿ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿದೆ. ಸೋಲಾರ್ ಬೇಲಿಯನ್ನು ದುರಸ್ಥಿಗೊಳಿಸಬೇಕಾಗಿದ್ದು, ಮಳೆಗಾಲದಲ್ಲಿ ಕಾಡಾನೆಗಳು ಶಾಲೆಗೆ ಬಂದರೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಮಾಹಿತಿ: ಡಿ.ಪಿ.ಲೋಕೇಶ್, ಎಂ.ಎಸ್.ಸುನಿಲ್, ಎಂ.ಎನ್.ಹೇಮಂತ್, ರೆಜಿತ್‌ಕುಮಾರ್ ಗುಹ್ಯ, ರಘು ಹೆಬ್ಬಾಲೆ

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಗೋಡೆ ದುರಸ್ಥಿಗೀಡಾಗಿದ್ದು ಬಿರುಕು ಬಿಟ್ಟಿರುವುದು.
ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ದುರಸ್ಥಿಗೀಡಾಗಿರುವುದರಿಂದ ಈಗಿನ ಮಳೆಗೆ ಗೋಡೆಯ ಮೇಲೆ ನೀರು ಸೋರುತ್ತಿರುವುದು.
ಬೀಳುವ ಹಂತದಲ್ಲಿರುವ ಜಾರುಬಂಡೆ

ದುರಸ್ತಿಗೆ ಕಾದಿರುವ ಶಾಲೆಗಳು

ಮಡಿಕೇರಿ ವಿಧಾನಸಭಾ ಕ್ಷೇತ್ರ

* ಮಡಿಕೇರಿ * ಕಡಗದಾಳು * ಸಿದ್ದಾಪುರ * ಚೆಟ್ಟಳ್ಳಿ * ಮಕ್ಕಂದೂರು * ಗಾಳಿಬೀಡು *ನಂಜರಾಯಪಟ್ಟಣ

* ನೆಲ್ಯಹುದಿಕೇರಿ * ಅತ್ತೂರು ನಲ್ಲೂರು * ನಿಡ್ತ * ತೋಳೂರು ಶೆಟ್ಟಳ್ಳಿ * ನಂದಿಗುಂದ * ಗೋಪಾಲಪುರ

* ಕೊಡ್ಲಿಪೇಟೆ * ಬಾಣಾವಾರ * ಗುಂಡುಗುಟ್ಟಿ * ಅಂಕನಹಳ್ಳಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ

* ಹಾಕತ್ತೂರು * ಕೊಟ್ಟೂರು * ಬೆಟ್ಟಗೇರಿ * ಯವಕಪಾಡಿ * ಸಂಪಾಜೆ * ಮೇಕೇರಿ * ಕಗ್ಗೋಡ್ಲು * ಕುಟ್ಟ

* ಟಿ.ಶೆಟ್ಟಿಗೇರಿ * ಬಿಳುಗುಂದ * ವಿರಾಜಪೇಟೆಯ ಜಿಎಂಪಿಎಸ್ ಮಾದರಿ ಶಾಲೆ * ಕಾನೂರು

* ವಿರಾಜ‍‍ಪೇಟೆ ಚಿಕ್ಕಪೇಟೆ * ಬಿರುನಾಣಿ

ಶಾಲೆಗಳ ದುರಸ್ತಿ ಮೊದಲ ಆದ್ಯತೆಯಾಗಬೇಕು ಶಾಲೆಗಳಿಗೆ ಎಲ್ಲ ಬಗೆಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಸಾರ್ವಜನಿಕರಿಗೆ ವ್ಯಕ್ತವಾಗಿದೆ ಒತ್ತಾಯ

ಪ್ರತಿಕ್ರಿಯೆಗಳು

ವಿದ್ಯಾರ್ಥಿಗೆ ಅನುಗುಣವಾಗಿ ಕೊಠಡಿಯೂ ಬೇಕು ಶಿಕ್ಷಕರೂ ಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳೂ ಬೇಕು ಶಿಕ್ಷಕರೂ ಬೇಕು. ಬಹಳಷ್ಟು ಕಡೆ ಕೊಠಡಿಗಳಿಲ್ಲ ಇದ್ದರೂ ಅವು ಶಿಥಿಲವಾಗಿವೆ. ಮತ್ತಷ್ಟು ಕಡೆ ಶಿಕ್ಷಕರೇ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತವಾದ ಕೊಠಡಿಗಳು ಮೂಲಸೌಕರ್ಯ ಹಾಗೂ ಶಿಕ್ಷಕರನ್ನು ಒದಗಿಸುವುದು ಸರ್ಕಾರದ ಕರ್ತವ್ಯ.

ಸ್ವಾತಿ ಎಐಡಿಎಸ್‌ಒ ಕೊಡಗು ಸಹ ಸಂಚಾಲಕಿ.

ಗುಹ್ಯ ಶಾಲೆಗೆ ಬೇಕು ತುರ್ತು ಗಮನ ಗುಹ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾರುಬಂಡಿಯನ್ನು ಹಲವು ವರ್ಷಗಳಿಂದ ಉಪಯೋಗಿಸುತ್ತಿಲ್ಲ. ಜಾರುಬಂಡಿಯು ಬೀಳುವ ಹಂತದಲ್ಲಿದ್ದು ಮಕ್ಕಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಉಪಯೋಗ ಶೂನ್ಯವಾದ ಜಾರುಬಂಡಿಯನ್ನು ತೆರವುಗೊಳಿಸಬೇಕು.

ಉದಯಕುಮಾರ್ ಹಳೇ ವಿದ್ಯಾರ್ಥಿ ಗುಹ್ಯ

ಸರ್ಕಾರಿ ಶಾಲೆಗಳ ಅಭಿವೃದ್ಧಿ ಸರ್ಕಾರದ ಜವಾಬ್ದಾರಿ ದುರಾದೃಷ್ಟವಶಾತ್ ಇಲ್ಲಿಯವರೆಗೂ ಕರ್ನಾಟಕದಲ್ಲಿ ಆಡಳಿತವನ್ನು ಮಾಡಿರುವ ಯಾವ ಸರ್ಕಾರಗಳು ಸರ್ಕಾರಿ ಶಾಲಾ-ಕಾಲೇಜುಗಳ ವಿಷಯ ಬಂದಾಗ ಇಬ್ಬಗೆ ನೀತಿಯನ್ನು ತೋರಿಸುತ್ತಾ ಬಂದಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಸರ್ಕಾರಗಳ ಜವಾಬ್ದಾರಿ ಆಗಿದ್ದರೂ ಸಹಾ ಮಲತಾಯಿ ಧೋರಣೆಯನ್ನು ಮಾಡುತ್ತಲೇ ಬಂದಿವೆ. ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ. ಕೊನೆಯ ಪಕ್ಷ ಈಗಿರುವಂತಹ ಶಾಲೆಗಳ ಕಟ್ಟಡಕ್ಕೆ ಬಣ್ಣವನ್ನು ಹೊಡೆಯುವ ಜೊತೆಗೆ ಗೋಡೆಗಳ ಮೇಲೆ ಕಾಂಪೌಂಡಿನ ಮೇಲೆ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದಂತಹ ಮಹಾನ್ ವ್ಯಕ್ತಿಗಳಾದ ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ಮುಂತಾದ ಮಹಾನ್ ಸಮಾಜದ ಏಳಿಗೆಗಾಗಿ ಕೆಲಸ ಮಾಡಿದಂತಹ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸಿ ಮಕ್ಕಳನ್ನು ಆಕರ್ಷಿಸಬೇಕಾಗುತ್ತದೆ.

ಅಭಿಷೇಕ್

ಅಪಾಯಕಾರಿ ಸ್ಥಳದಲ್ಲಿ ಪಾಠ ಹೇಳುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ತೀರಾ ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕೊಠಡಿಗಳು ಇಲ್ಲ. ತುಂಬಾ ಶಿಥಿಲವಾಗಿರುವ ಕೊಠಡಿಯಲ್ಲಿ ಪಾಠ ಹೇಳುತ್ತಿಲ್ಲ. ಅಂತಹ ಕೊಠಡಿಗಳ ಬದಲಿಗೆ ಬೇರೆ ಸುಸ್ಥಿತಿಯಲ್ಲಿರುವ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಸರ್ಕಾರಕ್ಕೆ ದುರಸ್ತಿಗಾಗಿ ಪ್ರಸ್ತಾವವನ್ನು ಸಲ್ಲಿಸಲಾಗಿದೆ

ಚಂದ್ರಕಾಂತ್ ಡಿಡಿಪಿಐ.

ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದೆರಡು ಶಾಲೆಗಳ ಕಟ್ಟಡಗಳು ಹಳೆಯದಾಗಿರುವುದರಿಂದ ದುಸ್ಥಿತಿಯಲ್ಲಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದ್ದು ಸದ್ಯದಲ್ಲೆ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ತರಗತಿ ನಡೆಸಲು ಸಾಕಷ್ಟು ಕೊಠಡಿಗಳು ಕೂಡ ಲಭ್ಯವಿದೆ.

ಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿ ವಿರಾಜಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.