ನಾಪೋಕ್ಲು: ‘ಕೊಡವ ಜನಾಂಗ ಅನಾದಿ ಕಾಲದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಢಿಸಿಕೊಂಡು ಬಂದಿದ್ದು ಕೊಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅಗತ್ಯ’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಹೇಳಿದರು.
ನಾಲ್ ನಾಡು ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ಚೆರಿಯ ಪರಂಬುವಿನ ಕೆ.ಎಸ್.ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೋವಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಈ ದೇಶ ನಾನಾ ಜನಾಂಗ ಧರ್ಮ ಸಂಸ್ಕೃತಿಯ ಬೀಡು. ಎಲ್ಲರಿಗೂ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. ಕೊಡವರ ಬಗ್ಗೆ ಕೀಳು ಭಾವನೆಯನ್ನು ಬೆಳೆಸಿಕೊಳ್ಳಬಾರದು. ಜನಾಂಗದ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದರಷ್ಟೇ ಸರ್ಕಾರದ ಗಮನಸೆಳೆಯಲು ಸಾಧ್ಯ, ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸಬೇಕು. ಪ್ರಕೃತಿಯಲ್ಲಿ ಹೇಗೆ ವೈವಿಧ್ಯತೆ ಇದೆಯೋ ಅದೇ ರೀತಿ ಜನಾಂಗದಲ್ಲೂ ವೈವಿಧ್ಯತೆ ಇದೆ. ಇಲ್ಲಿನ ಭೂಮಿ, ನೆಲ, ಜಲ, ಕೋವಿಗಳನ್ನು ಪೂಜಿಸುವುದರ ಮೂಲಕ ಕೊಡವರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದು ಒಂದು ಕಿರಿಯ ಜನಾಂಗದ ಸಂಸ್ಕೃತಿಗೆ ರಕ್ಷಣೆ ಕೊಡುವಂತಹ ಕೆಲಸ ಆಗಬೇಕಿದೆ. ಇಲ್ಲಿನ ವೈವಿಧ್ಯಮಯ, ಆಚಾರ, ವಿಚಾರ, ಸಂಸ್ಕೃತಿಯನ್ನು ಕೊಡವರಿಗೆ ಪ್ರಕೃತಿದತ್ತವಾದ ಕೊಡುಗೆಯಾಗಿದ್ದು ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ’ ಎಂದರು.
ಉದ್ಯಮಿ ಚಿಳ್ಳುವಂಡ ದರ್ಶನ್ ತೆಂಗಿನಕಾಯಿ ಗುಂಡು ಹೊಡೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ಲಾಂಟರ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಕುಂಜಿಲದ ಕಾಫಿ ಬೆಳೆಗಾರರಾದ ಬಾಚಮಂಡ ವಿಠಲ ಕಾವೇರಪ್ಪ, ನಂಬುಡಮಂಡ ಶಂಭು ಅಪ್ಪಯ್ಯ, ಬಲ್ಲಮಾವಟಿಯ ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ಶ್ಯಾಮ್ ಕಾಳಯ್ಯ, ಪ್ಲಾಂಟರ್ಸ್ ಕ್ಲಬ್ ನಿರ್ದೇಶಕ ಬಡಕಡ ಸುರೇಶ್ ಬೆಳ್ಳಿಯಪ್ಪ ಉಪಸ್ಥಿತರಿದ್ದರು.
ಕ್ಲಬ್ ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಳಿಯಪ್ಪ, ನಿರ್ದೇಶಕರಾದ ಶಿವಚಾಳಿಯಂಡ ಅಂಬಿ ಕಾರಿಯಪ್ಪ, ಬೊಳ್ಳಚೆಟ್ಟೀರ ಸುರೇಶ್, ಚೋಕಿರ ಎಸ್.ರೋಷನ್, ಕುಂಡ್ಯೋಳಂಡ ಬೋಪಣ್ಣ, ಕೇಟೋಳಿರ ಶಮ್ಮಿ ಪಾಲ್ಗೊಂಡಿದ್ದರು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 0.22, 12 ಬೋರ್ ಹಾಗೂ ಏರ್ ಗನ್ ಸ್ಪರ್ಧೆಗಳು ಪ್ರತ್ಯೇಕವಾಗಿ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.