ADVERTISEMENT

ಮುದ ನೀಡಿದ ಕೆಸರು ಗದ್ದೆ ಕೃಷಿ ಓಟದ ಕ್ರೀಡಾಕೂಟ

ಬಿಟ್ಟಂಗಾಲದಲ್ಲಿ ಜಬ್ಬೂಮಿ, ರೂಟ್ಸ್ ಆಫ್ ಕೊಡಗು ವತಿಯಿಂದ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 7:39 IST
Last Updated 11 ಆಗಸ್ಟ್ 2024, 7:39 IST
ಗೋಣಿಕೊಪ್ಪಲು ಬಳಿಯ ಬಿಟ್ಟಂಗಾಲದಲ್ಲಿ ಜಬ್ಬೂಮಿ, ರೂಟ್ಸ್ ಆಫ್ ಕೊಡಗು ಹಾಗೂ ಇತರ ಸಂಘಟನೆಗಳು ಬಿಟ್ಟಂಗಾಲದಲ್ಲಿ ಶನಿವಾರ ಆಯೋಜಿಸಿದ್ದ ಕೆಸರು ಗದ್ದೆ ಕೃಷಿ ಕ್ರೀಡಾಕೂಟದಲ್ಲಿ ಪುರುಷರ ಹಗ್ಗಾಟ ತೀವ್ರ ಪೈಪೋಟಿಯಿಂದ ಕೂಡಿತ್ತು.
ಗೋಣಿಕೊಪ್ಪಲು ಬಳಿಯ ಬಿಟ್ಟಂಗಾಲದಲ್ಲಿ ಜಬ್ಬೂಮಿ, ರೂಟ್ಸ್ ಆಫ್ ಕೊಡಗು ಹಾಗೂ ಇತರ ಸಂಘಟನೆಗಳು ಬಿಟ್ಟಂಗಾಲದಲ್ಲಿ ಶನಿವಾರ ಆಯೋಜಿಸಿದ್ದ ಕೆಸರು ಗದ್ದೆ ಕೃಷಿ ಕ್ರೀಡಾಕೂಟದಲ್ಲಿ ಪುರುಷರ ಹಗ್ಗಾಟ ತೀವ್ರ ಪೈಪೋಟಿಯಿಂದ ಕೂಡಿತ್ತು.   

ಗೋಣಿಕೊಪ್ಪಲು: ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಶನಿವಾರ ಬಿಟ್ಟಂಗಾಲದಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ವಿಜೃಂಭಣೆಯಿಂದ ಜರುಗಿತು.

ಬಿಟ್ಟಂಗಾಲದ ನಾಯಡ ಕುಟುಂಬದ ಭತ್ತದ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು, ಪುರುಷರು, ಮಹಿಳೆಯರು ಕೆಸರಿನಲ್ಲಿ ಬಿದ್ದು, ಎದ್ದು, ನೀರಿನಲ್ಲಿ ಮಿಂದು ಕೆಸರಿನೋಕುಳಿಯಲ್ಲಿ ಸಂಭ್ರಮಿಸಿದರು.

ಕೊಡಗಿನ ಕೃಷಿಯೊಂದಿಗೆ ಮಿಳಿತವಾಗಿರುವ ಆದರೆ, ಈಗ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಕೃಷಿ ಪರಂಪರೆ ಕುರಿತು ಯುವ ಜನಾಂಗಕ್ಕೆ ಅರಿವು ಮೂಡಿಸಿ ಪ್ರೇರಣೆ ತುಂಬಲು ಈ ಕೆಸಸು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಆಯೋಜಕರು ಹೇಳಿದರು.

ADVERTISEMENT

ಕ್ರೀಡಾಕೂಟದಲ್ಲಿ 6 ವರ್ಷದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ನಾಟಿ ಗದ್ದೆಯಲ್ಲಿ ಭಾಗವಹಿಸಿ ಸಂತಸಪಟ್ಟರು.

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರು ಬಾಯಲ್ಲಿ ಚಮಚ ಕಚ್ಚಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವ ದೃಶ್ಯ ರೋಚಕವಾಗಿತ್ತು.

ಆರಂಭದಲ್ಲಿ ಸಾಂಪ್ರದಾಯಿಕವಾಗಿ ಬೆಕ್ಕೆಸೊಡ್ಲೂರಿನ ಗೆಜ್ಜೆತಂಡ್ ಎದುರು ಪುಡಿಯೊಕ್ಕಡ ಹರೀಶ್ ಅವರ ಮೂಲಕ ತಪ್ಪಡ್ಕಕಟ್ಟಿ ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥಿಸಲಾಯಿತು. ಕೊಡಗಿನ ಪ್ರಕೃತಿ, ಜೀವ ಜಲ, ಪರಂಪರೆಯ ಗತವೈಭವ ಮರುಕಳಿಸಲಿ, ಅದರ ಸಂರಕ್ಷಣೆ ಆಗಲಿ ಎಂದು ಹಾರೈಸಲಾಯಿತು.

ಪುಚ್ಚಿಮಂಡ ಬಬ್ಬುಲು, ಮಾಚೇಟ್ಟಿರ ಸುನಿಲ್ ತಂಡ ಕೋವಿಯಲ್ಲಿ 12 ಸುತ್ತಿನ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗದ್ದೆಯಲ್ಲಿ ನಾಟಿಗೆ ನಾಯಡ ಶ್ಯಾಮ್ ಸೋಮಣ್ಣ ಅವರೊಂದಿಗೆ ಜಬ್ಬೂಮಿ ಸಂಘಟನೆ ಮತ್ತು ರೂಟ್ಸ್ ಆಫ್ ಕೊಡಗು ಪ್ರಮುಖರು ಚಾಲನೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಮಚ್ಚಮಾಡ ಅನೀಶ್ ಮಾದಪ್ಪ, ಮಾಚಂಗಡ ಸಚಿನ್, ಉಳುವಂಗಡ ಲೋಹಿತ್ ಭೀಮಯ್ಯ, ಮಲ್ಲಪನೆರ ವಿನು ಚಿಣ್ಣಪ್ಪ, ಪಾಲೆಂಗಡ ಅಮಿತ್ ಭೀಮಯ್ಯ,, ಗುಡಿಯಂಗಡ ನಿಖಿಲ್, ಚೇಂದಂಡ ಶಮ್ಮಿ ಮಾದಯ್ಯ, ಅಚ್ಚಾಠಡಿರ ಕುಶಾಲಪ್ಪ, ಅಪ್ಪಂಡೇರಂಡ ಯಶವಂತ್, ಮಾಚೇಟ್ಟಿರ ಸುನಿಲ್, ಪುಚ್ಚಿಮಂಡ ಬಬುಲ್ ಅಪ್ಪಯ್ಯ ಹಾಜರಿದ್ದರು.

ಮಕ್ಕಳ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕೆಸರು ಎರಚುತ್ತಾ ಭರದಿಂದ ಓಡಿದರು.

ಉಳುವಂಗಡ ಲೋಹಿತ್ ಭೀಮಯ್ಯ ಅವರು ಜಬ್ಬೂಮಿ ಗೀತೆ ಹಾಡಿದರು. ಮಹಿಳೆಯರು, ಪುರುಷರಿಗೆ, ಶಾಲಾ ಮಕ್ಕಳ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕೆಸರು ಗದ್ದೆ ನಡಿಗೆ, ಕೈಪುಳಿ ಹಾಗೂ ಕೈಕಣೆ ನಡಿಗೆ ಗಮನ ಸೆಳೆದವು. ರಾಜಪೇಟೆ ಪ್ರಗತಿ ಶಾಲಾ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಾಡಿದ ಗದ್ದೆ ನಾಟಿ ಖುಷಿ ನೀಡಿತು.

ಹಗ್ಗ ಜಗ್ಗಾಟದಲ್ಲಿ ಪುರುಷರು ತೀವ್ರ ಪೈಪೋಟಿ ಒಡ್ಡಿದರು. ಇವರ ಜಗ್ಗಾಟಕ್ಕೆ ದಡದಲ್ಲಿ ನಿಂತಿದ್ದ ಪ್ರೇಕ್ಷಕರು ಹುರಿದುಂಬಿಸಿ ಮತ್ತಷ್ಟು ಮೆರಗು ನೀಡಿದರು. ಇದರಿಂದ ಎದುರಾಳಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.  ಹಿರಿಯರ ಓಟದ ಸ್ಪರ್ಧೆ ಹಾಗೂ ಮಹಿಳೆಯರ ಸ್ಪೂನ್ ನಿಂಬೆ ಹಣ್ಣಿನ ಓಟವು ಕೂಡ ಖುಷಿ ತಂದಿತು.

ಪೆರುವನಾಡ್‌ಗೆ ಸಂಬಂಧಪಟ್ಟ ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ಬುಟ್ಟಿಯಂಡ ಪಟ್ಟು ಅಯ್ಯಪ್ಪ, ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಪುಚ್ಚಿಮಂಡ ಈಶ್ವರ ಮುತ್ತಪ್ಪ, ಬೊಪ್ಪಂಡ ರವಿ, ಪೊನ್ನಕಚ್ಚಿರ ಕುಶ ಬಿದ್ದಪ್ಪ, ಕುಪ್ಪಂಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಶಾಲೆ ಹಾಗೂ ಇತರ ಭಾಗಗಳಿಂದ ಪೈಪೋಟಿಯಲ್ಲಿ ಭಾಗವಹಿಸಿದ್ದರು. ಮಾಳೇಟೀರ ಶ್ರೀನಿವಾಸ್, ಕೊಡಗು ಜಾವಾ ಎಸ್ಡಿ ಮೋಟಾರ್ ಸೈಕಲ್ ಕ್ಲಬ್, ವಿರಾಜಪೇಟೆಯ ಪ್ರಗತಿ ಶಾಲೆ, ಕೊಡವಾಮೆರ ಕೊಂಡಾಟ, ತಿಂಗಕೊರ್ ಮೊಟ್ಟ್ ತಲಕಾವೇರಿ, ಮೈಸೂರು ಕೊಡವ ಸ್ಟೂಡೆಂಟ್ಸ್ ಅಸೋಸಿಷನ್, ಕನೆಕ್ಟಿಂಗ್ ಕೊಡವಾಸ್, ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಬಾಳೆಹೊನ್ನೂರುವಿನ ಮಹಾಲಕ್ಷ್ಮಿ ಕಾಫಿ ಟ್ರೇಡರ್ಸ್, ದಿಯನ್ ಎಂಟರ್‌ ಪ್ರೈಸೆಸ್, ಕೊಡವ ನಾಡ್, ಕೆಫೆ ಹೆ ಶೇಕ್ ಪಾಲ್ಗೊಂಡಿದ್ದರು.

ಹಿರಿಯರು ಓಡಿ ಆನಂದಿಸಿದರು. ಹಿರಿಯರು ಓಡಿ ಆನಂದಿಸಿದರು.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟದ ರೋಚಕ ಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.