ADVERTISEMENT

ಪಿಎಂ ಸ್ವನಿಧಿ ಯೋಜನೆಯ ಸದುಪಯೋಗ ಪಡೆಯಲು ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಮನವಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 4:33 IST
Last Updated 24 ನವೆಂಬರ್ 2023, 4:33 IST
 ಎಸ್.ಎ.ರಾಮದಾಸ್
 ಎಸ್.ಎ.ರಾಮದಾಸ್   

ಮಡಿಕೇರಿ: ಕೋವಿಡ್‌ ಕಾಲದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಇದ್ದ ಪಿಎಂ ಸ್ವನಿಧಿ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರ 23 ಕೆಲಸಗಳನ್ನು ಮಾಡುವ ಅಸಂಘಟಿತ ವಲಯದವರಿಗೆ ವಿಸ್ತರಿಸಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಯೋಜನೆಯ ಸಂಚಾಲಕ ಎಸ್.ಎ.ರಾಮದಾಸ್ ಮನವಿ ಮಾಡಿದರು.

ದೇಶದಲ್ಲಿ ಈವರೆಗೆ 44 ಲಕ್ಷ ಕುಟುಂಬಗಳು ನೋಂದಣಿಯಾಗಿವೆ. 8 ಸಾವಿರ ಕೋಟಿ ಸಾಲ ವಿತರಿಸಲಾಗಿದೆ. 7ನೇ ಸ್ಥಾನದಲ್ಲಿದ್ದ ರಾಜ್ಯವು ಈಗ 4ನೇ ಸ್ಥಾನಕ್ಕೇರಿದೆ. 3 ಲಕ್ಷ ಜನರಿಗೆ ₹ 600 ಕೋಟಿ ಸಾಲ ವಿತರಣೆಯಾಗಿದೆ. ರಾಜ್ಯವನ್ನು ರಾಷ್ಟ್ರದಲ್ಲೇ ಮೊದಲ ಸ್ಥಾನಕ್ಕೇರುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಯಡಿ ಮೊದಲ ಹಂತದಲ್ಲಿ ₹ 10 ಸಾವಿರ ಸಾಲ ನೀಡಲಾಗುತ್ತದೆ. ಇದನ್ನು ಪಾವತಿಸಿದವರಿಗೆ 2ನೇ ಹಂತದಲ್ಲಿ ₹ 20 ಸಾವಿರ, ಇದನ್ನೂ ಪಾವತಿಸಿದವರಿಗೆ 3ನೇ ಹಂತದಲ್ಲಿ ₹ 50 ಸಾವಿರ ನಂತರ 4ನೇ ಹಂತದಲ್ಲಿ ಮುದ್ರಾ ಯೋಜನೆಯಡಿ ₹ 10 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಸಾಲದ ಶೇ 7 ಬಡ್ಡಿ ಹಣವನ್ನು ಸರ್ಕಾರವೇ ಭರಿಸುತ್ತದೆ. ಯಾವುದೇ ಗ್ಯಾರಂಟಿ ಇಲ್ಲದೇ ಸಾಲ ಮಂಜೂರಾಗುತ್ತದೆ. ಪಿಎಂ ಸುರಕ್ಷಾ ವಿಮಾ ಯೋಜನೆಯಡಿ ₹ 2 ಲಕ್ಷ ಅಪಘಾತ ವಿಮೆ, ಅಂಗವಿಕಲತೆಗೆ ₹ 1 ಲಕ್ಷ, ಪಿಎಂ ಸುರಕ್ಷಾ ಜೀವನಜ್ಯೋತಿ ಯೋಜನೆಯಡಿ ಸಹಜ ಸಾವಿಗೆ ₹ 2 ಲಕ್ಷ ಪರಿಹಾರ ನೀಡಲಾಗುವುದು ಎಂದರು.

ಪಿಎಂ ಜನನಿ ಸುರಕ್ಷಾ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿದ ಮಹಿಳೆಯರಿಗೆ ಮಕ್ಕಳ ಜನನದ ನಂತರ ಪಾಲನೆಗೆ ₹ 6 ಸಾವಿರ, ಪಿಎಂ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ₹ 5 ಸಾವಿರ ಹಣ ನೀಡಲಾಗುವುದು. 60 ವರ್ಷದ ನಂತರ ಮಾಸಿಕ ₹ 3 ಸಾವಿರ ಪಿಂಚಣಿ ಸೇರಿದಂತೆ 8 ಯೋಜನೆಗಳನ್ನು ಇದರ ವ್ಯಾಪ್ತಿಗೆ ತಂದು, ಎಲ್ಲ ಯೋಜನೆಗಳ ಸೌಲಭ್ಯಗಳು ಸುಲಭವಾಗಿ ಸಿಗುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

ಅರ್ಜಿ ಸಲ್ಲಿಸಲು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಎನ್‌ಯುಎಲ್‌ಎಂ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇಲ್ಲವೇ ಮೊಬೈಲ್‌ನಲ್ಲೇ ಆನ್‌ಲೈನ್ ಮೂಲಕ ನೇರವಾಗಿಯೂ ಅರ್ಜಿ ಸಲ್ಲಿಸಬಹುದು ಎಂದರು.

ವಿಶ್ವಕರ್ಮ ಯೋಜನೆಯಡಿ ಕೇವಲ ವಿಶ್ವಕರ್ಮರು ಮಾತ್ರವಲ್ಲ ಕೈಯಿಂದ ಕೆಲಸ ಮಾಡುವ 13 ಸಮಾಜದವರಿಗೂ ಸಾಲಸೌಲಭ್ಯ, ತರಬೇತಿ, ಉಚಿತ ಟೂಲ್‌ಕಿಟ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ರಾಬಿನ್ ದೇವಯ್ಯ, ಮುಖಂಡರಾದ ಸುನಿಲ್ ಸುಬ್ರಹ್ಮಣ್ಯ, ನಾಪಂಡ ರವಿ ಕಾಳಪ್ಪ, ಭಾರತೀಶ, ಹುಲ್ಲೂರಿಕೊಪ್ಪ ಮಾದಪ್ಪ ಇದ್ದರು.

ಪಿಎಂ ಸ್ವನಿಧಿ ಯೋಜನೆ ವ್ಯಾಪ್ತಿಯಲ್ಲಿರುವವರು

  • ಬೀದಿಬದಿ ವ್ಯಾಪಾರಿಗಳು

  • ತಳ್ಳುಗಾಡಿ ವ್ಯಾಪಾರಿಗಳು

  • ತಿಂಡಿ ತಿನಿಸು ಚಹಾ ಇನ್ನಿತರ ವ್ಯಾಪಾರ ಮಾಡುವವರು

  • ದಿನಪತ್ರಿಕೆ ಹಾಲು ಹಾಕುವವರು ಮನೆಮನೆಗೆ ಊಟ ತಲುಪಿಸುವವರು

  • ಬಾರ್‌ ಬೆಂಡಿಂಗ್ ಮಾಡುವವರು

  • ಹಳೆ ಕಬ್ಬಿಣ ಪ್ಲಾಸ್ಟಿಕ್ ಪೇಪರ್ ಸಂಗ್ರಾಹಕರು

  • ಸ್ಕೂಟರ್ ಸೈಕಲ್ ಪಂಚರ್‌ ಹಾಕುವವರು

  • ಎಳನೀರು ವ್ಯಾಪಾರಿಗಳು ಬೆತ್ತ ಬಿದಿರಿನ ವ್ಯಾಪಾರಿಗಳು

  • ಚಪ್ಪಲಿ ರಿಪೇರಿ

  • ಇಸ್ತ್ರಿ ಮಾಡುವವರು ಟೈಲರಿಂಗ್

  • ಮನೆಮನೆಗೆ ಪದಾರ್ಥಿಗಳನ್ನು ವಿತರಿಸುವ ಡಿಲಿವರಿ ಸದಸ್ಯರು

  • ಛಾಯಾಚಿತ್ರಗಾರರು

  • ಕೇಬಲ್ ಸೇವೆ ನೀಡುವವರು

  • ಹೂಕಟ್ಟುವವರು ಹೂವಿನ ಅಲಂಕಾರ ಮಾಡುವವರು

  • ವ್ಯಾಪಾರ ಮಾಡುತ್ತಿರುವ ತೃತೀಯ ಲಿಂಗಿಗಳು

  • ಮಡಿಕೆ ಬೊಂಬೆ ಕರಕುಶಲ ಕೆಲಸ ಮಾಡುವವರು

ಜನರ ಗಮನ ಬೇರೆಡೆ ಸೆಳೆಯುವ ಕ್ರಮ

ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015 ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ (ಜಾತಿ ಜನಗಣತಿ) ದತ್ತಾಂಶ ಆಧರಿಸಿ ಸಿದ್ಧಪಡಿಸಿದ್ದ ವರದಿಯ ಮೂಲ ಪ್ರತಿ (ಹಸ್ತಪ್ರತಿ) ಆಯೋಗದ ಕಚೇರಿಯಿಂದ ನಾಪತ್ತೆಯಾಗಿಲ್ಲ ಬದಲಾಗಿ ಬಚ್ಚಿಡಲಾಗಿದೆ. ಇದು ಜನರ ಗಮನವನ್ನು ಬೇರೆಡೆ ಸೆಳೆಯುವ ಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಮತ್ತು ವಿಶ್ವಕರ್ಮ ಯೋಜನೆಯ ಸಂಚಾಲಕ ಎಸ್.ಎ.ರಾಮದಾಸ್ ತಿಳಿಸಿದರು.

ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ವರದಿಯಲ್ಲಿದ್ದ ಲೋಪದೋಷಗಳ ಕಾರಣದಿಂದಲೆ ಜಾರಿಗೆ ತಂದಿರಲಿಲ್ಲ. ಈಗ ನಾಪತ್ತೆಯಾಗಿದೆ ಎಂದು ಹೇಳುವುದು ದಿಕ್ಕುತಪ್ಪಿಸುವ ಕ್ರಮ ಎಂದು ಸುದ್ದಿಗಾರರಿಗೆ ಹೇಳಿದರು.

ವಿಜಯೇಂದ್ರ ಅವರು ಜಮೀರ್‌ ಅಹಮ್ಮದ್ ಅವರನ್ನು ವಿಧಾನಸಭೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿರುವುದು ದೈಹಿಕವಾಗಿ ಅಲ್ಲ. ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದವರು ವಿಧಾನಸಭೆ ಪ್ರವೇಶಿಸಬಾರದು ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

‘ನನಗೂ ಪಕ್ಷ ಕೈಗೊಂಡ ಕೆಲವು ನಿರ್ಧಾರಗಳಿಂದ ಅಸಮಾಧಾನವಾಗಿತ್ತು. ಇದು ಎಲ್ಲರಿಗೂ ಅನುಭವಕ್ಕೆ ಬರುತ್ತದೆ. ಹಾಗೆಂದು ಪಕ್ಷವನ್ನೇ ಬಿಟ್ಟು ಹೋಗದೇ ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಇಂತಹ ತೀರ್ಮಾನವನ್ನೇ ವಿ.ಸೋಮಣ್ಣ ಹಾಗೂ ಅರವಿಂದ ಲಿಂಬಾವಳಿ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅವರು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದರು ಎಂಬ ಕಾರಣಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.