ನಾಪೋಕ್ಲು: ಲೋಕೋಪಕಾರಿಣಿ, ತೀರ್ಥರೂಪಿಣಿ, ಕಲಿಕಲ್ಮಶ ನಾಶಿನಿ, ಕರುಣಾಪೂರ್ಣ ಮಾನಸಳು, ಕಾಮಿತಾರ್ಥ ಫಲಪ್ರದಾಯಿನಿ, ಜಗನ್ಮಾತೆ ಕಾವೇರಮ್ಮ...ಇದು ಕಾವೇರಿ ಮಾತೆಯನ್ನು ಲೇಖಕ ಎದುರ್ಕಳ ಕೆ.ಶಂಕರನಾರಾಯಣ ಭಟ್ ತಮ್ಮ ಕೃತಿ ‘ಶ್ರೀ ಕಾವೇರಿ ವೈಭವ’ದಲ್ಲಿ ವರ್ಣಿಸಿರುವ ಪರಿ.
ಕಾವೇರಿ ಎಂದರೆ ನದಿ ಸ್ವರೂಪಿಣಿ. ಅವಳನ್ನು ಮಹಾತಾಯಿ ಎಂದು ಅಸಂಖ್ಯಾತ ಮಂದಿ ಭಕ್ತರು ಪೂಜಿಸುತ್ತಾರೆ. ಕಾವೇರಿ ಅತಿ ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದಲ್ಲಿ ಜನಕೋಟಿಗೆ ಜೀವದಾಯಿನಿ. ಭುಕ್ತಿಮುಕ್ತಿ ಪ್ರದಾಯಿನಿ. ತಲಕಾವೇರಿ ಕಾವೇರಿಯ ಉಗಮಸ್ಥಾನ. ತಲಕಾವೇರಿಯಲ್ಲಿರುವ ಮುಖ್ಯ ಆರಾಧನಾ ಸ್ಥಳ ಶ್ರೀ ಕಾವೇರಿಯಮ್ಮನ ಮೂಲ ಸನ್ನಿಧಿ. ಇದಲ್ಲದೇ ಶ್ರೀ ಮಹಾಗಣಪತಿ, ಶ್ರೀ ಅಗಸ್ತ್ತ್ಯೇಶ್ವರ ಎಂಬ ಎರಡು ಆರಾಧನಾ ಸ್ಥಳಗಳೂ ಇಲ್ಲಿವೆ. ಶ್ರೀ ಕಾವೇರಿಯಮ್ಮನ ಮೂಲ ಸನ್ನಿಧಿಗೆ ತೆರಳುವ ಹಾದಿಯಲ್ಲಿ ಬ್ರಹ್ಮ ದೇವನಿಂದ ಆಶೀರ್ವದಿಸಿದ ಬ್ರಹ್ಮ ಕುಂಡಿಕೆ ಇದೆ. ಮೂಲ ಕುಂಡಿಕೆಯಲ್ಲಿ ಜಲರೂಪಿ ಕಾವೇರಿಗೆ ಭಕ್ತರು ಎಲ್ಲಾ ಪೂಜೆ, ಸೇವೆಗಳನ್ನು ಸಮರ್ಪಿಸುತ್ತಾರೆ. ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಇಲ್ಲಿ ನೆರೆಯುವ ಸಹಸ್ರಾರು ಮಂದಿ ಭಕ್ತರು ಇಲ್ಲಿ ತೀರ್ಥಸ್ನಾನ ಮಾಡುತ್ತಾರೆ.
ಕಾವೇರಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರದ ದೇವಾಲಯಗಳು ಭಕ್ತರನ್ನು ಆಕರ್ಷಿಸಿದರೆ ಇತ್ತ ತಲಕಾವೇರಿಯಿಂದ 8 ಕಿ.ಮೀ ತಳದಲ್ಲಿರುವ ಭಾಗಮಂಡಲದ ಭಗಂಡೇಶ್ವರ ದೇವಾಲಯವೂ ಭಕ್ತರ ನೆಚ್ಚಿನ ತಾಣ. ಭಾಗಮಂಡಲವು ಕನ್ನಿಕೆ, ಕಾವೇರಿ, ಸುಜ್ಯೋತಿಗಳ ಸಂಗಮ ತ್ರಿವೇಣಿ ಸಂಗಮದಿಂದ ಪ್ರಸಿದ್ಧವಾಗಿದೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಸನಿಹದ ಭಾಗಮಂಡಲವು ಭಗಂಡೇಶ್ವರ, ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳಿಂದ ಕೂಡಿದೆ. ಕೇರಳದ ಕಲಾಶೈಲಿ ಮಾದರಿಯನ್ನು ಹೋಲುವ ಈ ದೇವಾಲಯಕ್ಕೆ ತಲಕಾವೇರಿ ದರ್ಶನಕ್ಕೆ ಬರುವವರೆಲ್ಲರೂ ಭೇಟಿ ನೀಡುತ್ತಾರೆ. ಹಸಿರು ಹೊದ್ದು ನಿಂತ ಬೆಟ್ಟಗುಡ್ಡಗಳ ಸುಂದರ ಪರಿಸರದ ನಡುವೆ ಇರುವ ಭಾಗಮಂಡಲಕ್ಕೆ ಕಾಲಿಡುವಾಗಲೇ ಕಾವೇರಿ ಕನ್ನಿಕೆಯರ ಸಂಗಮ ಕಾಣುತ್ತದೆ. ಕಾವೇರಿ ನದಿಯು ತಲಕಾವೇರಿಯಿಂದ ಮೂರು ಮೈಲು ಕೂಡಾ ಹರಿದಿಲ್ಲ, ಎನ್ನುವಾಗಲೇ ಕನ್ನಿಕೆ ಜೊತೆಗೂಡುತ್ತಾಳೆ. ಇಲ್ಲಿ ಇನ್ನೊಂದು ನದಿ ಸುಜ್ಯೋತಿ ಗುಪ್ತಗಾಮಿನಿಯಾಗಿ ಬಂದು ಸೇರುತ್ತದೆ. ಸ್ಕಂದ ಪುರಾಣ ಪ್ರಸಿದ್ದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿಯೇ ಈ ಮೂರು ನದಿಗಳ ತ್ರಿವೇಣಿ ಸಂಗಮವಿದೆ. ಈ ಸಂಗಮದಿಂದಾಗಿಯೇ ಭಾಗಮಂಡಲ ‘ದಕ್ಷಿಣದ ಪ್ರಯಾಗ’ ಎಂದು ಪ್ರಖ್ಯಾತಿ.
ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಪ್ರತಿವರ್ಷ ಭಾಗಮಂಡಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಪತ್ತಾಯಕ್ಕೆ ಅಕ್ಕಿ ಹಾಕುವುದು, ಆಜ್ಞಾ ಮುಹೂರ್ತಗಳು, ಅಕ್ಷಯ ಪಾತ್ರೆ ಇರಿಸುವುದು, ಕಾಣಿಕೆ ಡಬ್ಬಿ ಇಡುವುದು ನಿಗದಿತ ದಿನಗಳಂದು ಜರುಗುತ್ತವೆ.
ಭಾಗಮಂಡಲಕ್ಕೆ ‘ಭಗಂಡ ಕ್ಷೇತ್ರ’ ಎಂಬ ಹೆಸರು ಪುರಾಣ ಪ್ರಸಿದ್ದ. ಭಗಂಡೇಶ್ವರ, ಸುಬ್ರಹ್ಮಣ್ಯ ಮತ್ತು ಮಹಾವಿಷ್ಣು ದೇಗುಲಗಳ ಸಂಕೀರ್ಣಗಳಿಂದ ಕೂಡಿರುವ ಭಗಂಡ ಕ್ಷೇತ್ರ ಮೊದಲ ಅಂಕಣದಲ್ಲಿ ಮಹಾಗಣಪತಿ ದೇವಾಲಯವಿದೆ. ಭಗಂಡೇಶ್ವರ ದೇಗುಲ ಕೇರಳದ ವಾಸ್ತುಶಿಲ್ಪದ ಹಾಗೆ ಕಟ್ಟಿರುವ ಗುಡಿ, ಅಗಲವಾದ ಮೆಟ್ಟಿಲುಗಳನ್ನೇರಿ ಹೆಬ್ಬಾಗಿಲನ್ನು ಹಾದು ಒಳಗೆ ಹೋದರೆ ದೊಡ್ಡ ಅಂಗಳ. ಅದರ ನಡುವಿನಲ್ಲಿ ನಾಲ್ಕು ದಿಕ್ಕುಗಳಿಗೂ ಅಗ್ರಸಾಲೆಗಳಿರುವ ಭಗಂಡೇಶ್ವರ ದೇವಾಲಯ ಇದೆ.
ಭಾಗಮಂಡಲ ಭಗಂಡೇಶ್ವರ ಪುರಾತನ ದೇವಾಲಯವಾಗಿದ್ದರೂ, ಅದರ ನಿರ್ವಹಣೆ ಅಚ್ಚುಕಟ್ಟಾಗಿದೆ. ಗಣಪತಿ ದೇಗುಲದ ಬಳಿ ಇರುವ ದೀಪಸ್ತಂಭ ಅತ್ಯಾಕರ್ಷಕ. ತುದಿಯಲ್ಲಿ ಸುಂದರ ವಿಗ್ರಹ. ಮೂರು ಸುತ್ತುಗಳಲ್ಲಿ ದೀಪಗಳ ಸಾಲುಗಳಿದ್ದು ಮನಸೆಳೆಯುತ್ತದೆ. ಮುಖ್ಯ ಗರ್ಭಗುಡಿಯಲ್ಲಷ್ಟೇ ಅಲ್ಲದೆ ಇತರ ಉಪ ಪುಟ್ಟ ಗುಡಿಗಳಲ್ಲೂ ಮರದ ಸುಂದರ ಶಿಲ್ಪಗಳು ಕಂಡು ಬರುತ್ತದೆ. ವಸಂತ ಮಂಟಪ ಎಂದು ಕರೆಯಲಾಗುವ ಆಕರ್ಷಕ ಮಂಟಪವೊಂದನ್ನು ಈ ದೇವಾಲಯ ಸಂಕೀರ್ಣವು ಹೊಂದಿದೆ.
ಕೊಡಗಿನ ಪ್ರಮುಖ ಹಬ್ಬ ಹುತ್ತರಿಯ ಸಂದರ್ಭದಲ್ಲಿ ದೇವಾಲಯದ ಹೊಲದಿಂದ ಭತ್ತದ ಕದಿರನ್ನು ತಂದು ವಸಂತ ಮಂಟಪದ ಮುಂದಿಟ್ಟು, ಜನ ಆ ಮೂಲಕ ಧಾನ್ಯ ಲಕ್ಷ್ಮಿಯ ಪೂಜೆ ಮಾಡುತ್ತಾರೆ. ಅಕ್ಷಯ ಪಾತ್ರೆ ಭಗಂಡೇಶ್ವರ ದೇವಾಲಯದ ಮತ್ತೊಂದು ವೈಶಿಷ್ಟ್ಯ. ಮರದ ವಿಶಾಲವಾದ ತೊಟ್ಟಿಯಾಗಿರುವ ಅಕ್ಷಯ ಪಾತ್ರೆಗೆ ತುಲಾ ಸಂಕ್ರಮಣದ ದಿನ ಮತ್ತು ಅದರ ಹಿಂದಿನ ದಿನ ಕೊಡಗಿನ ಭಕ್ತಜನ ಪಡಿಯಕ್ಕಿಯನ್ನು ತಂದು ಹಾಕುತ್ತಾರೆ. ಅಲ್ಲದೆ, ದೇವಾಲಯಕ್ಕೆ ಭೇಟಿ ನೀಡುವ ಇತರ ಮಂದಿ ಅಕ್ಷಯ ಪಾತ್ರೆಯಿಂದ ಪಡಿಯಕ್ಕಿಯನ್ನು ಭಕ್ತಿಭಾವದಿಂದ ತಮ್ಮ ಮನೆಗಳಿಗೆ ಕೊಂಡೊಯ್ದು ಸಂತೃಪ್ತಿಯ ಭಾವನೆ ಹೊಂದುತ್ತಾರೆ. ತಲಕಾವೇರಿಯ ತೀರ್ಥೋದ್ಭವದ ದಿನ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಮಿಂದು ಭಗಂಡೇಶ್ವರನ ದರ್ಶನ ಮಾಢಿ ಅನಂತರ ತಲಕಾವೇರಿಯತ್ತ ಸಾಗುತ್ತಾರೆ.
ಕಾವೇರಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮ ತಾಣವಾಗಿರುವ ಭಾಗಮಂಡಲ ಭಗಂಡ ಮಹರ್ಷಿ ತಪಸ್ಸು ಮಾಡಿದ ಪುಣ್ಯ ಸ್ಥಳವೆಂದು ಹೆಸರುವಾಸಿ. ಭಗಂಡ ಋಷಿಯು ಈ ಸ್ಥಳದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣದಿಂದ ಇಲ್ಲಿಗೆ ಭಗಂಡೇಶ್ವರ ಎಂಬ ಹೆಸರು ಬಂತೆಂದೂ ಕಾಲಾಂತರದಲ್ಲಿ ಅದು ಭಾಗಮಂಡಲ ಎಂದಾಯಿತು ಎಂದು ಪ್ರತೀತಿ. ಟಿಪ್ಪು ಸುಲ್ತಾನನು ಭಾಗಮಂಡಲಕ್ಕೆ 1790ರಲ್ಲಿ ಮುತ್ತಿಗೆ ಹಾಕಿ ಭಾಗಮಂಡಲವನ್ನು ಅಬಜಲಬಾದ್ ಎಂದು ಹೆಸರಿಸಿದ್ದನು. ಅನಂತರ ಕೊಡಗಿನ ಅರಸನಾಗಿದ್ದ ದೊಡ್ಡವೀರರಾಜೇಂದ್ರರು ಟಿಪ್ಪುವಿನಿಂದ ಭಾಗಮಂಡಲವನ್ನು ಮರಳಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.