ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಿವೃತ್ತ ಯೋಧರಿಗೆ ಗೌರವ ಸಲ್ಲಿಸಲಾಯಿತು, ಹುತಾತ್ಮ ಯೋಧರ ಬಲಿದಾನವನ್ನು ನೆನೆಯಲಾಯಿತು. ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಜಿಲ್ಲೆಯ ಎಲ್ಲೆಡೆ ನಡೆದ ಈ ಕುರಿತ ವೈವಿಧ್ಯಮಯ ಕಾರ್ಯಕ್ರಮದಲ್ಲಿ ದೇಶಭಕ್ತಿ ಉಕ್ಕಿ ಹರಿಯಿತು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಂಜೆ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ‘ದೀಪನಮನ’ ಕಾರ್ಯಕ್ರಮವು ಭಾವನಾತ್ಮಕ ಸ್ಪರ್ಶ ನೀಡಿತು. ವಿದ್ಯಾರ್ಥಿನಿಯರ ಕಂಠದಿಂದ ಹೊರಹೊಮ್ಮಿದ ದೇಶಭಕ್ತಿ ಗೀತೆಗಳು, ಗಾಯಕ ಜಿ.ಚಿದ್ವಿಲಾಸ್ ಅವರು ಹಾಡಿದ ಹಾಡುಗಳು, ‘ಏ ಮೇರೆ ವತನ್ ಕೇ ಲೋಗೋ’ ಎಂಬ ಹಿನ್ನೆಲೆ ಹಾಡಿನ ಸಂಗೀತದಲ್ಲಿ ಹೊತ್ತಿಸಿದ ದೀಪಗಳು ಸಭಿಕರಲ್ಲಿ ದೇಶಭಕ್ತಿಯನ್ನು ಹೊಮ್ಮಿಸಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಯೋಧ ಕಾರುಗುಂದದ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಸುಂಟಿಕೊಪ್ಪದ ಶ್ರೀಜಾ ಸೈನಿಕರಿಗೆ ‘ನುಡಿ ನಮನ’ ಮಾಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಸಂಸ್ಥೆಯ ಅನಂತಶಯನ, ಕಟ್ಟೆಮನೆ ಸೋನಜಿತ್, ಎಚ್.ಟಿ.ಅನಿಲ್ ಭಾಗವಹಿಸಿದ್ದರು.
‘ರೋಟರಿ ವುಡ್ಸ್’ನಿಂದ ಮಾಜಿ ಸೈನಿಕರಿಗೆ ಸನ್ಮಾನ: ಇಲ್ಲಿನ ರೋಟರಿ ಸಭಾಂಗಣದಲ್ಲಿ ಶುಕ್ರವಾರ ರೋಟರಿ ವುಡ್ಸ್ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾಪ್ಟನ್ ಜಿ.ಎಸ್.ರಾಜಾರಾಮ್, ಎನ್.ಚಂದ್ರನ್, ಸಿ.ಪ್ರಮೋದ್ ಕುಮಾರ್, ಬಾಬು ಪ್ರಸಾದ್ ರೈ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್.ರಾಜಾರಾಮ್, ‘ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ಕಾರ್ಗಿಲ್ ಯುದ್ಧ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರಾಕೃತಿಕ ಸೌಂದರ್ಯದ ಜತೆಗೇ ಸೈನಿಕರ ಕಠಿಣ ಜೀವನ ಶೈಲಿ, ಪರಿಶ್ರಮ, ತ್ಯಾಗವನ್ನು ಕಾಣಬೇಕು’ ಎಂದು ಸಲಹೆ ನೀಡಿದರು.
ಸನ್ಮಾನಿತರಾದ ಎನ್.ಚಂದ್ರನ್ ಮಾತನಾಡಿ, ‘ಕಾರ್ಗಿಲ್ ವಿಜಯ ದಿವಸ್ ದಿನ ಮಾತ್ರ ಸೈನಿಕರನ್ನು ಸ್ಮರಿಸಿಕೊಳ್ಳುವಂತಾಗಬಾರದು. ಹಗಲಿರುಳು ಪರಿಶ್ರಮದಿಂದ ಗಡಿಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಸೈನಿಕರನ್ನು ಸ್ಮರಿಸಿಕೊಂಡು ಯೋಧರನ್ನು ಗೌರವಿಸುವ ಕಾರ್ಯ ಸಮಾಜ ಬಾಂಧವರಿಂದ ಆಗಬೇಕು’ ಎಂದರು.
ಸನ್ಮಾನಿತರಾದ ಸಿ.ಪ್ರಮೋದ್ ಕುಮಾರ್ ಮಾತನಾಡಿ, ‘ಯೋಗೀಂದ್ರ ಸಿಂಗ್ ಯಾದವ್ ಎಂಬ ಯೋಧರು 9 ಬುಲೆಟ್ ದೇಹದೊಳಕ್ಕೆ ನುಗ್ಗಿದರೂ, ಹೋರಾಡಿ ಶತ್ರು ಸೈನಿಕರ ಸದೆಬಡಿಯುವ ಕಾರ್ಯಾಚರಣೆಯ ಮುಂಚೂಣಿತನ ವಹಿಸಿ ಜೀವಂತವಾಗಿ ಇಂದಿಗೂ ಇದ್ದಾರೆ’ ಎಂದು ಸ್ಮರಿಸಿದರು.
ಸನ್ಮಾನಿತರಾದ ಬಾಬು ಪ್ರಸಾದ್ ರೈ ಮಾತನಾಡಿ, ‘ಶತ್ರುಗಳು ಆಕ್ರಮಣ ಮಾಡುವುದೇ ರಾತ್ರಿ ವೇಳೆ. ಹಾಗಾಗಿ, ಹಗಲಿರುಳೂ ಪ್ರತಿಯೊಬ್ಬ ಯೋಧರೂ ಜಾಗೃತರಾಗಿ ದೇಶ ಕಾಯುತ್ತಿರುತ್ತಾರೆ’ ಎಂದು ತಿಳಿಸಿದರು. ಇದಕ್ಕೂ ಮುನ್ನ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಲಾಯಿತು.
ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್, ವಲಯ ಸೇನಾನಿ ಅನಿತಾ ಪೂವಯ್ಯ, ಅರಣ್ಯಾಧಿಕಾರಿ ಮಯೂರ್, ರೋಟರಿ ಪ್ರಮುಖರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್, ಎಸ್.ಎಸ್.ಸಂಪತ್ ಕುಮಾರ್, ಕಿಗ್ಗಾಲು ರಂಜಿತ್, ರವಿಕುಮಾರ್, ಚಂದ್ರಶೇಖರ್, ಪ್ರವೀಣ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.