ಸೋಮವಾರಪೇಟೆ: ‘ರಾಜ್ಯದಲ್ಲಿ ಅನ್ಯಭಾಷೆಗಳ ನಡುವೆ ಅನ್ನ ಕೊಡುವ ಮಾತೃಭಾಷೆ ಕನ್ನಡವನ್ನು ಉಳಿಸುವುದು ಸವಾಲಿನ ಕೆಲಸವಾಗಿದೆ. ಶಿಕ್ಷಕರು ಕನ್ನಡದ ಕಟ್ಟಾಳುಗಳಾಗುವ ಮೂಲಕ, ಮಕ್ಕಳಿಗೆ ಮಾತೃ ಭಾಷೆ ಕನ್ನಡದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದಲ್ಲಿ ಭಾಷಾ ಬೆಳವಣಿಗೆ ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಸಾಹಿತ್ಯೋತ್ಸವ- 2024ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯ ಮೂಲಕ ಕನ್ನಡವನ್ನು ಗಟ್ಟಿಯಾಗಿ ನೆಲೆಗೊಳಿಸುವ ಕೆಲಸವಾದಲ್ಲಿ ಭಾಷಾ ಬೆಳವಣಿಗೆ ಸುಲಭ. ಇಂದಿನ ದಿನಮಾನಗಳಲ್ಲಿ ಕೋಳಿ ಕೂಗುವ ಮುನ್ಸವೇ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗುವಂತಹ ಸ್ಥಿತಿ ಬಂದಿದೆ. ಪೂರ್ವ ಪ್ರಾಥಮಿಕ ತರಗತಿಯಿಂದ ಇಂಗ್ಲೀಷ್ ಹೇರಲಾಗುತ್ತಿದೆ. ಕೆಲ ಖಾಸಗಿ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಅಸಡ್ಡೆ ತೋರಿಸಲಾಗುತ್ತಿದೆ ಎಂದು ದೂರಿದರು.
ಇಂಗ್ಲೀಷ್ ಕಲಿಕೆಯಿಂದ ಮಾತ್ರ ನೌಕರಿ ಎಂದು ಜನರ ಮನದಲ್ಲಿ ಬೇರೂರಿದ್ದು, ಬಹುತೇಕ ಪೋಷಕರು ಕೂಡ ಮಕ್ಕಳಿಗೆ ಕನ್ನಡ ಪ್ರೀತಿ ಬೆಳೆಸುತ್ತಿಲ್ಲ. ಮಕ್ಕಳಲ್ಲಿ ಕನ್ನಡ ಬಗ್ಗೆ ತಿರಸ್ಕಾರ ಭಾವನೆ ಮೂಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿದವರಲ್ಲಿ ಕನ್ನಡವೇ ಉಸಿರಾಗಬೇಕು. ಕನ್ನಡ ಕಲಿತರೆ, ಅನ್ಯಭಾಷೆಗಳನ್ನು ಸಲೀಸಾಗಿ ಕಲಿಯಬಹುದು. ಎರಡು ಸಾವಿರ ವರ್ಷಗಳ ಇತಿಹಾಸವಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಎಲ್ಲರಿಗೂ ಆದರ್ಶವಾಗಬೇಕು. ಅಂತಹವರ ಕವಿತೆ, ಸಾಹಿತ್ಯಗಳನ್ನು ಓದಿಕೊಂಡರೆ, ಕನ್ನಡ ಪಾಂಡಿತ್ಯ ಪಡೆಯಬಹುದು ಎಂದರು.
ಓ.ಎಲ್.ವಿ.ಚರ್ಚ್ ಧರ್ಮಗುರು ಎಚ್.ಎನ್.ಅವಿನಾಶ್, ಹೊಸೂರು ಮುಹಿಯದ್ದಿನ್ ಜುಮಾ ಮಸ್ಜಿದ್ ಧರ್ಮಗುರು ಶಾಫೀ ಸಅದಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸಾಂಧಿಪನಿ ಶಾಲೆಯ ವ್ಯವಸ್ಥಾಪಕ ಎಂ.ಟಿ.ದಾಮೋಧರ್, ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಎಐಟಿಯುಸಿ ಎಚ್.ಎಂ.ಸೋಮಪ್ಪ, ಸಾಹಿತಿ ಜಲಜಾ ಶೇಖರ್, ಕವಯತ್ರಿ ಜಲಾ ಕಾಳಪ್ಪ, ಬಳಗುಂದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರಿತಶ್ರೀ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಹೋಬಳಿ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್, ಸಿ.ಎಸ್.ನಾಗರಾಜ್, ಬಿ.ಟಿ.ನಾಗರಾಜ್, ಲೇಖಕಿ ಶ.ಗ.ನಯನತಾರಾ ಭಾಗವಹಿಸಿದ್ದರು.
ಶಾಲೆಗಳಲ್ಲಿ ಕನ್ನಡ ಬೋಧನೆಗೆ ಅಸಡ್ಡೆ ಮಾತೃ ಭಾಷೆ ಕುರಿತು ಮಕ್ಕಳಲ್ಲಿ ತಿರಸ್ಕಾರ ಭಾವನೆ ಸಾಹಿತ್ಯ ಓದಿನಿಂದ ಕನ್ನಡ ಪಾಂಡಿತ್ಯ ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.