ADVERTISEMENT

ಸೋಮವಾರಪೇಟೆ: ಸಂಕ್ರಾಂತಿಯ ಮರುದಿನ ಜಾತ್ರೋತ್ಸವದ ಸಡಗರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:04 IST
Last Updated 17 ಜನವರಿ 2024, 6:04 IST
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥಬೀದಿಯಲ್ಲಿ ರಥವನ್ನು ಎಳೆಯಲಾಯಿತು.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥಬೀದಿಯಲ್ಲಿ ರಥವನ್ನು ಎಳೆಯಲಾಯಿತು.   

ಸೋಮವಾರಪೇಟೆ: ಸಂಕ್ರಾಂತಿಯ ಮರುದಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ಜಾತ್ರೋತ್ಸವದ ಸಡಗರ ಮೇಳೈಸಿತ್ತು. ಇಲ್ಲಿಗೆ ಸಮೀಪದ ಶಾಂತಳ್ಳಿಯಲ್ಲಿ ಕುಮಾರಲಿಂಗೇಶ್ವರ ದೇವಾಲಯದಲ್ಲಿ ರಥೋತ್ಸವ ನಡೆದರೆ, ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿ ಬಾಣಂತಮ್ಮ ಮತ್ತು ಆಕೆಯ ಪುತ್ರ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಕೂತಿ ಗ್ರಾಮದ ಚಾವಡಿಯಲ್ಲಿ ವಿಶೇಷ ಪೂಜೆ ನೆರವೇರಿತು. ಜೊತೆಗೆ, ಗೊದ್ದು ಗ್ರಾಮದಲ್ಲೂ ಕುಮಾರಲಿಂಗೇಶ್ವರ ಹಾಗೂ ದೊಡ್ಡಯ್ಯನ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಿತು.

ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ಜಾತ್ರೋತ್ಸವದಲ್ಲಿ 65ನೇ ರಥೋತ್ಸವ ಮಂಗಳವಾರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ರಥಬೀದಿಯಲ್ಲಿ ಬೆತ್ತದಿಂದ ರಥವನ್ನು ಶ್ರದ್ಧಾಭಕ್ತಿಯಿಂದ ಎಳೆಯಲಾಯಿತು. ಗ್ರಾಮ ನಿವಾಸಿಗಳು ತಮ್ಮ ಮನೆಯ ಮುಂದೆ ರಥ ಬರುತ್ತಿದ್ದಂತೆ ರಸ್ತೆಯನ್ನು ನೀರಿನಿಂದ ತೊಳೆದು, ರಂಗೋಲಿ ಬಿಡಿಸಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಕೀಲು ಕುದುರೆ ಮತ್ತು ಬೊಂಬೆ ಕುಣಿತ ಜನರನ್ನು ಆಕರ್ಷಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ನಿಂತು ರಥೋತ್ಸವವನ್ನು ವೀಕ್ಷಿಸಿದರು.

ADVERTISEMENT

ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ವಿಶೇಷ ತರಕಾರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿದರು. ವಿಶೇಷ ಜೇನು, ಹಣ್ಣು, ಸೇರಿದಂತೆ ಹಲವು ಕಸೂತಿ ವಸ್ತುಗಳು ಮಾರಾಟಕ್ಕೆ ಇಡಲಾಯಿತು.

ಕೊಡಗು ರಾಜರ ಆಳ್ವಿಕೆ ಕಾಲದಿಂದ ಆಚರಣೆಯಲ್ಲಿರುವ ಪದ್ಧತಿಯಂತೆ ಕೊತ್ತನಳ್ಳಿ, ಕುಡಿಗಾಣ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿನಾಡು, ತೋಳುನಾಡು, ಯಡೂರು, ತಲ್ತಾರೆಶೆಟ್ಟಳ್ಳಿ ಗ್ರಾಮಗಳ ಗ್ರಾಮಸ್ಥರು ವಾದ್ಯಗೋಷ್ಠಿಯಿಂದ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದೇವರಿಗೆ ಫಲತಾಂಬೂಲ ಅರ್ಪಿಸಿ, ಊರಿನ ಸಮೃದ್ಧಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು.

ಕುಮಾರಳ್ಳಿ, ಜಕ್ಕನಳ್ಳಿ, ಇನಕನಹಳ್ಳಿ, ಕೊತ್ತನಳ್ಳಿ ಗ್ರಾಮಸ್ಥರು ಹಾಗು ದೇವರ ವಡೇಕಾರರು ಬರಿಗಾಲಿನಲ್ಲಿ 10 ಕಿ.ಮೀ.ದೂರದಲ್ಲಿರುವ ಪುಷ್ಪಗಿರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರಸ್ವಾಮಿಯ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಪೂಜೆ ಸಲ್ಲಿಸಿದರು. ಜಾತ್ರೋತ್ಸವ ಮೂರು ದಿನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಈ ಭಾಗದ ಆರಾಧ್ಯ ದೇವರಾಗಿದ್ದು, ಎಲ್ಲರ ಮನೆಯಲ್ಲೂ ಕುಮಾರಲಿಂಗೇಶ್ವರನನ್ನೇ ಪೂಜೆ ಮಾಡುತ್ತಾರೆ. ವರ್ಷಂಪ್ರತಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.

ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಸಂಸದ ಪ್ರತಾಪ್ ಸಿಂಹ, ಶಾಸಕ ಡಾ.ಮಂತರ್ ಗೌಡ, ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚು ರಂಜನ್, ಎಸ್.ಜಿ.ಮೇದಪ್ಪ, ಕಾಂಗ್ರೆಸ್ ವೀಣಾ ಅಚ್ಚಯ್ಯ, ಮೈಸೂರು ಗೋಪಾಲಗೌಡ ಆಸ್ಪತ್ರೆಯ ಮಾಲೀಕ ಡಾ.ಶುಶ್ರೂತ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಜ.17ರಂದು ಸಮಾರೋಪ ಸಮಾರಂಭ ಮಧ್ಯಾಹ್ನ 3ಕ್ಕೆ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ತಲ್ತಾರೆಶೆಟ್ಟಳ್ಳಿ ಗ್ರಾಮದ ಕೆ.ಎ.ಅನನ್ಯಾ, ಕೆಎಸ್ಆರ್‌ಟಿಸಿ ನಿವೃತ್ತ ಡಿಸಿಎಂ ಕೆ.ಎ.ರವೀಂದ್ರ, ಜೀಪು ಚಾಲಕ ಡಿ.ಬಿ.ನವೀನ್ ಅವರುಗಳನ್ನು ಸನ್ಮಾನಿಸಲಾಗುತ್ತದೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಗೊಂಬೆಗಳ ಕುಣಿತ ಜನರನ್ನು ರಂಜಿಸಿತು.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹಿಳೆಚಿುರು ಬಳೆ ಖರೀದಿಗೆ ಮುಂದಾಗಿರುವುದು
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ವಸ್ತು ಪ್ರದರ್ಶನದಲ್ಲಿ ತರಕಾರಿಗಳು ಗಮನ ಸೆಳೆದವು.
ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿ ಸಂಕ್ರಾಂತಿಯ ಮರುದಿನ ಮಂಗಳವಾರ ನಡೆದ ತಾಯಿ ಬಾಣಂತಮ್ಮ ಹಾಗೂ ಆಕೆಯ ಪುತ್ರ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿ ಸಂಕ್ರಾಂತಿಯ ಮರುದಿನ ಮಂಗಳವಾರ ನಡೆದ ತಾಯಿ ಬಾಣಂತಮ್ಮ ಹಾಗೂ ಆಕೆಯ ಪುತ್ರ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಡೆಯನ್ನು ಭಕ್ತರು ಹೊತ್ತು ತಂದರು

ಬೆಳಿಗ್ಗೆ ತಾಯಿ ಜಾತ್ರೆ ಮಧ್ಯಾಹ್ನದ ನಂತರ ಮಗನ ಜಾತ್ರೆ!

ಶನಿವಾರಸಂತೆ: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಜಾತ್ರೆ ಮಧ್ಯಾಹ್ನದ ನಂತರ ಸಂಜೆಯವರೆಗೆ ಮಗನ ಜಾತ್ರೆಯಂತಹ ಅಪರೂಪದ ಜಾತ್ರಾ ಉತ್ಸವವೊಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಂಬಳೂರು ಗ್ರಾಮದಲ್ಲಿ ಸಂಕ್ರಾಂತಿಯ ಮರುದಿನ ನಡೆಯಿತು.

ತಾಯಿ ಬಾಣಂತಮ್ಮ ಜಾತ್ರೆ ಬೆಳಿಗ್ಗೆ ನಡೆದರೆ ಆಕೆಯ ಪುತ್ರ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ಮಧ್ಯಾಹ್ನದ ನಂತರ ನಡೆಯಿತು. ಅಪ್ಪಟ್ಟ ಜಾನಪದ ಸೊಗಡಿನ ಈ ಜಾತ್ರೆಯಲ್ಲಿ ನೂರಾರು ಮಂದಿ ಜಾತಿ ಬೇಧವಿಲ್ಲದೆ ಭಾಗಿಯಾದರು. ಬೆಂಬಳೂರು ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರೂ ಒಂದಾಗಿ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ ಎನಿಸಿದೆ. ಗ್ರಾಮದ ಸುಮಾರು 5 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜಾತ್ರೆ ನೆರವೇರಿತು. ನಂತರ ಸಂಜೆಯವರೆಗೆ ಕುಮಾರಲಿಂಗೇಶ್ವರನ ಜಾತ್ರೆಯೂ ನಡೆಯಿತು.

ಗ್ರಾಮಸ್ಥರ ಮನೆಗಳಿಂದ ಸಂಗ್ರಹವಾದ ದವಸ ಧಾನ್ಯ ಹಣ್ಣು ತರಕಾರಿಗಳನ್ನು 12 ಎಕರೆಯಷ್ಟು ವಿಸ್ತೀರ್ಣವುಳ್ಳ ಬಾಣಂತಮ್ಮ ಕೆರೆಯ ದಡದಲ್ಲಿ ಅಡುಗೆ ಒಲೆ ನಿರ್ಮಿಸಿ ಅಲ್ಲಿ ದೇವರ ನೈವೇದ್ಯಕ್ಕೆ ಅಡುಗೆ ಸಿದ್ಧಪಡಿಸಿದರು. ಇಲ್ಲಿ ಸಿದ್ಧವಾದ ಪ್ರಸಾದವನ್ನು ಮಣ್ಣಿನ ಮಡಕೆಗಳಲ್ಲಿ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯೊಂದಿಗೆ ಮೆರವಣಿಗೆ ಮೂಲಕ ಬಾಣಂತಮ್ಮ ಜಾತ್ರಾ ಮೈದಾನದ ಗುಡಿಯಲ್ಲಿರಿಸಿ ನೈವೇದ್ಯವನ್ನು ದೇವರಿಗೆ ಅರ್ಪಿಸಿದರು. ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಿ ಪ್ರಸಾದ ವಿನಿಯೋಗ ನಡೆಸಲಾಯಿತು.

ಮಧ್ಯಾಹ್ನದ ನಂತರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ತಂದು ಜಾತ್ರಾ ಮೈದಾನದ ಶ್ರೀ ಕುಮಾರಲಿಂಗೇಶ್ವರ ಗುಡಿಯಲ್ಲಿ ಪೂಜಿಸಿ ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಈಡುಗಾಯಿ ಒಡೆಯುವ ಮೂಲಕ ಮತ್ತು ಬಾಣಂತಮ್ಮ ಕೆರೆಗೆ ಬೆಲ್ಲ ಅರ್ಪಿಸುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಆಗಮಿಸಿದ್ದ ಎಲ್ಲ ಭಕ್ತರಿಗೆ ಅನ್ನಸಂತರ್ಪಣ ವ್ಯವಸ್ಥೆಯನ್ನು ಬೆಂಬಳೂರು ಗ್ರಾಮಸ್ಥರು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.