ADVERTISEMENT

ವಿರಾಜಪೇಟೆ | ಶಾಲಾ ಬಸ್ ಚಾಲಕನಿಗೆ ಹೃದಯಾಘಾತ: ತಪ್ಪಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:29 IST
Last Updated 19 ಜೂನ್ 2024, 14:29 IST
ವಿರಾಜಪೇಟೆ ಗಾಂಧಿನಗರದಲ್ಲಿ ಬುಧವಾರ ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಶಾಲಾ ಬಸ್‌ ಒಂದು ನಿಯಂತ್ರಣ ಕಳೆದುಕೊಂಡು ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆಯಿತು
ವಿರಾಜಪೇಟೆ ಗಾಂಧಿನಗರದಲ್ಲಿ ಬುಧವಾರ ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಶಾಲಾ ಬಸ್‌ ಒಂದು ನಿಯಂತ್ರಣ ಕಳೆದುಕೊಂಡು ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆಯಿತು    

ವಿರಾಜಪೇಟೆ: ಚಾಲಕನಿಗೆ ಹೃದಯಾಘಾತವಾದ ಪರಿಣಾಮ ಶಾಲಾ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ಪಟ್ಟಣದ ಗಾಂಧಿನಗರದಲ್ಲಿ ಬುಧವಾರ ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.

ಪಟ್ಟಣದ ತ್ರಿವೇಣಿ ಶಾಲೆಯ ಬಸ್ ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಅಪಘಾತದ ಸಂದರ್ಭ ಬಸ್‌ನಲ್ಲಿದ್ದ ಸುಮಾರು 20 ಮಕ್ಕಳು ಹಾಗೂ ಶಿಕ್ಷಕರು ಅಪಾಯದಿಂದ ಪಾರಾಗಿದ್ದಾರೆ.

ಗಾಂಧಿನಗರದಲ್ಲಿನ ಕೃಷಿ ಇಲಾಖೆಯ ಕಚೇರಿಯ ಮುಂಭಾಗ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಚಾಲಕನಿಗೆ ಹಠಾತ್‌ ಆಗಿ ಹೃದಯಾಘಾತವಾಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಕಾರಿಗೆ ಡಿಕ್ಕಿಯಾಗಿ ಕೆಲವು ಮೀಟರ್‌ಗಳಷ್ಟು ದೂರ ಕಾರನ್ನು ಎಳೆದುಕೊಂಡು ಹೋಗಿದೆ. ಬಳಿಕ ಸಮೀಪದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಗುದ್ದಿ ನಿಂತಿದೆ. ಸಮೀಪದಲ್ಲೇ ವಿದ್ಯುತ್ ಪರಿವರ್ತಕ ಇದ್ದು ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿ ನಿಂತಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ADVERTISEMENT

ಆಂಬುಲೆನ್ಸ್ ಇಲ್ಲದೇ ಪರದಾಟ: ಬಸ್ ಚಾಲಕ ಹಾಗೂ ಕಾರಿನ ಚಾಲಕರಿಗೆ ತೀವ್ರ ಗಾಯಗಳಾಗಿದ್ದು ಗಾಯಾಳುಗಳಿಗೆ ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಸಂದರ್ಭ ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಇಲ್ಲದೆ ಪರದಾಡುವಂತಾಯಿತು. ಆಸ್ಪತ್ರೆಯಲ್ಲಿನ ಎರಡು ಅಂಬುಲೆನ್ಸ್‌ಗಳಲ್ಲಿ ಒಂದು ದುರಸ್ತಿಗೆ ಹಾಗೂ ಮತ್ತೊಂದು ಕೆಲ ದಿನಗಳ ಹಿಂದೆ ಅಪಪಘಾತಕ್ಕೀಡಾಗಿ ಪೊಲೀಸ್ ಇಲಾಖೆಯ ವಶದಲ್ಲಿದೆ. ಈ ಬಗ್ಗೆ ಶಾಸಕರು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಈ ಸಂದರ್ಭ ಒತ್ತಾಯಿಸಿದರು.

ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.