ನಾಪೋಕ್ಲು: ಗುಡ್ಡಗಾಡು ಓಟ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಸೋಬಾನೆ ಹೇಳುವ ಸ್ಪರ್ಧೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ… ಇವು ಗ್ರಾಮೀಣ ಪ್ರದೇಶವಾದ ಚೆಯ್ಯಂಡಾಣೆಯಲ್ಲಿ ಭಾನುವಾರ ಕಂಡು ಬಂದ ದೃಶ್ಯಗಳು.
ಒಂದೆಡೆ ಹತ್ತು ಹಲವು ಕ್ರೀಡಾಕೂಟಗಳು ಅರೆಭಾಷೆ ಜನಾಂಗದವರ ಮನರಂಜಿಸಿದರೆ, ಮತ್ತೊಂದೆಡೆ ಗೌಡ ಸಂಸ್ಕೃತಿಯನ್ನು ಸಾರುವ ದಿರಿಸು ಧರಿಸಿದ ಜನಾಂಗದ ಮೆರವಣಿಗೆ, ಸಂಜೆ ನಡೆದ ಹಾಡು, ನೃತ್ಯ ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮ ಗ್ರಾಮೀಣ ಜನರನ್ನು ಆಕರ್ಷಿಸಿದವು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ , ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅರೆಭಾಷೆ ಗಡಿನಾಡ ಉತ್ಸವ ಕಲಾಸಕ್ತರ ಮನಸೆಳೆದವು. ಉತ್ಸವದ ಕ್ರೀಡಾಕೂಟವನ್ನು ಉದ್ಗಾಟಿಸಿದ ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಮಾತನಾಡಿ, ಮಕ್ಕಳಿಗೆ ಅರೆ ಭಾಷೆ ಕಲಿಸಿದರೆ ಅಭಿವೃದ್ಧಿ ಸಾಧ್ಯ. ಭಾಷೆ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು ಎಂದರು.
ನಿವೃತ್ತ ಶಿಕ್ಷಕಿ ಮಂಞಂಡ್ರ ರೇಖಾ ಉಲ್ಲಾಸ್ ಮಾತನಾಡಿ, ಆಟದಲ್ಲಿ ಸಕಾರಾತ್ಮಕ ಭಾವನೆ ಇರಬೇಕು. ಒಂದು ಭಾಷೆಯನ್ನು ಪ್ರೀತಿಸುವುದರೊಂದಿಗೆ ಇನ್ನೊಂದು ಭಾಷೆಯನ್ನು ಕೂಡ ಬಳಸಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಮಾತನಾಡಿ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ಕೊಡಗಿನಲ್ಲಿ ಪ್ರಥಮ ಬಾರಿಗೆ ನಡೆದಿದೆ. ಮಕ್ಕಳಿಗೆ ಮಾತೃಭಾಷೆ, ಸಂಸ್ಕೃತಿ, ಸಂಸದ ಸಂಪ್ರದಾಯಗಳನ್ನು ಕಲಿಸಲು ಹಿರಿಯರು ಮರೆಯಬಾರದು ಎಂದರು.
ಗಡಿನಾಡ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟಕ್ಕೆ ಕಡಂಗ ಗಣಪತಿ ದೇವಸ್ಥಾನದ ಎದುರು ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಪುರುಷರು ಮತ್ತು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಓಟದಲ್ಲಿ ಭಾಗವಹಿಸಿದ್ದರು. ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಪೆಮ್ಮಂಡ ಕೌಶಿ ಕಾವೇರಮ್ಮ ಧ್ವಜಾರೋಹಣ ನೆರವೇರಿಸಿದರು. ಮಞಂಡ್ರ ರೇಖಾ ಉಲ್ಲಾಸ್, ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿ ಚಾಲನೆ ನೀಡಿದರು.
ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ, ಉತ್ಸವದ ಸಂಚಾಲಕ ವಿನೋದ್ ಮೂಡಗದ್ದೆ, ಚಂದ್ರಾವತಿ ಬಡ್ಡಡ್ಕ, ಅಕಾಡೆಮಿ ಸದಸ್ಯರಾದ ಪಿ. ಎಸ್. ಕಾರ್ಯಪ್ಪ, ಲತಾಪ್ರಸಾದ್ ಕುದ್ಪಾಜೆ, ಅಯ್ಯಪ್ಪ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಕ್ರೀಡಾಕೂಟಗಳು ಮತ್ತು ಸ್ಪರ್ಧೆಗಳು ನಡೆದವು. ಮಧ್ಯಾಹ್ನ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಅಕಾಡೆಮಿಯಿಂದ ಪುಸ್ತಕ ಮಾರಾಟ ನಡೆಯಿತು.
ಸಮಾರೋಪ ಸಮಾರಂಭ
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅರೆಭಾಷೆ ಸಮುದಾಯದ ಮೂಲಕ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಅರೆ ಭಾಷೆ ಹಾಗೂ ಸಂಸ್ಕೃತಿಯನ್ನು ಬೆಳೆಸುವುದರೊಂದಿಗೆ ರಾಜ್ಯ ದೇಶದ ಸಂಸ್ಕೃತಿಯನ್ನು ಗೌರವಿಸಿದಾಗ ಭವಿಷ್ಯದಲ್ಲಿ ಭಾರತೀಯತೆ ಬೆಳೆಯಲು ಸಾಧ್ಯ ಎಂದರು. ದೇಶದ ಪ್ರತಿ ಗ್ರಾಮ ನಾಡು ಜಿಲ್ಲೆಗಳಲ್ಲಿ ವೈವಿಧ್ಯ ಇದ್ದು ದೇಶದ ಶಕ್ತಿ ಆಗಬೇಕು ಎಂದರು. ಬಿಜೆಪಿ ಮುಖಂಡ ಕೆ. ಜಿ. ಬೋಪಯ್ಯ ಮಾತನಾಡಿ ಅರೆ ಭಾಷೆ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ ಸಮಾಜವನ್ನು ಕಟ್ಟುವ ಕೆಲಸ ಉತ್ಸವದಿಂದ ಸಾಧ್ಯವಾಗಿದೆ. ಊರಿನ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವಂತಹ ಉದ್ದೇಶದಿಂದ ಅರೆಭಾಷೆ ಗಡಿನಾಡ ಉತ್ಸವವನ್ನು ಆಯೋಜಿಸಲಾಗಿದೆ. ನಾಡು ಊರು ಅಭಿವೃದ್ಧಿ ಆಗಬೇಕಾದರೆ ಆಚಾರ ವಿಚಾರ ಸಂಸ್ಕೃತಿ ಬೆಳೆಯಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.