ADVERTISEMENT

ಕೊಡಗಿನ ಗಿರಿಜನರನ್ನು ವಾಲ್ಮೀಕಿ ಜನಾಂಗದಿಂದ ಬೇರ್ಪಡಿಸಿ: ವೈ.ಕೆ.ಗಪ್ಪು

ಪೊನ್ನಂಪೇಟೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:52 IST
Last Updated 17 ಅಕ್ಟೋಬರ್ 2024, 12:52 IST
ವಾಲ್ಮೀಕಿ ಜಯಂತಿ ಅಂಗವಾಗಿ ಪೊನ್ನಂಪೇಟೆಯಲ್ಲಿ ಗುರುವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು ಹಾಗೂ ಅತಿಥಿಗಳು
ವಾಲ್ಮೀಕಿ ಜಯಂತಿ ಅಂಗವಾಗಿ ಪೊನ್ನಂಪೇಟೆಯಲ್ಲಿ ಗುರುವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು ಹಾಗೂ ಅತಿಥಿಗಳು   

ಗೋಣಿಕೊಪ್ಪಲು: ‘ಕೊಡಗಿನ ಗಿರಿಜನರನ್ನು ವಾಲ್ಮೀಕಿ ಜನಾಂಗದಿಂದ ಬೇರ್ಪಡಿಸಿ ನಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು’ ಎಂದು ಕೊಡಗು ಬುಡಕಟ್ಟು ಕೃಷಿಕ ಕಾರ್ಮಿಕ ಸಂಘದ ಅಧ್ಯಕ್ಷ ವೈ.ಕೆ.ಗಪ್ಪು ಒತ್ತಾಯಿಸಿದರು.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಆಡಳಿತ ಜಂಟಿಯಾಗಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ‘ಕೊಡಗಿನ ಬುಡಕಟ್ಟು ಜನಾಂಗದವರಾದ ನಮಗೆ ಇತರ ಬುಡಕಟ್ಟು ಜನಾಂಗದವರಿಗಿಂತ ಪ್ರತ್ಯೇಕ ಭಾಷೆ ಪದ್ಧತಿ, ಪರಂಪರಗಳಿವೆ. ಇವುಗಳನ್ನು ರಾಜ್ಯದ ಇತರ ಭಾಗಗಳ ವಾಲ್ಮೀಕಿ ಜನಾಂಗದೊಂದಿಗೆ ಸೇರಿಸಿ ಕೊಡಗಿನ ನೈಜ ಗಿರಿಜನರಿಗೆ ಅನ್ಯಾಯವಾಗಬಾರದು. ಕೊಡಗಿನ ಗಿರಿಜನ ಆಶ್ರಮ ಶಾಲೆಗಳು (ಗಿರಿಜನ ಆಶ್ರಮ ಶಾಲೆಗಳು) ಮೂಲ ಹೆಸರಿನಲ್ಲಿಯೇ ಉಳಿಯಬೇಕು’ ಎಂದು ಪ್ರತಿಪಾದಿಸಿದರು.

‘ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ಮತ್ತು ನಮ್ಮ ಅಸ್ಮಿತೆ ಉಳಿಸಿಕೊಳ್ಳುವ ಉದ್ದೇಶದಿಂದ ನ. 15ರಂದು ಬಿರ್ಸಾಮುಂಡಾ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅದೇ ನಮ್ಮ ನಿಜವಾದ ಹಬ್ಬ’ ಎಂದು ಹೇಳಿದರು.

ADVERTISEMENT

ಗಿರಿಜನ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್.ಪಂಕಜಾ ಮಾತನಾಡಿ, ‘ಆದಿವಾಸಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅವರ ಪ್ರಗತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಕೊಡಗಿನ 12 ಬುಡಕಟ್ಟು ಜನಾಂಗದ ಮುಖಂಡ ಸಿದ್ದಪ್ಪ ಮಾತನಾಡಿ, ‘ಕೊಡಗಿನ ಆದಿವಾಸಿಗಳನ್ನು ಅಲೆಮಾರಿ ಜನಾಂಗದ ಪಟ್ಟಿಗೆ ಸೇರಿಸಿರುವುದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ  ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ‘ತಮ್ಮ ಹಿಂದಿನ ಪ್ರವೃತ್ತಿಗಳನ್ನು ಕೈಬಿಟ್ಟು ಬದಲಾವಣೆ ಹೊಂದಿದ ವಾಲ್ಮೀಕಿ, ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದರು. ಇದು ದೇಶದ ಮೊದಲ ಮಹಾಕಾವ್ಯವಾಗಿದೆ. ಜತೆಗೆ ವಾಲ್ಮೀಕಿ ಕೂಡ ಮೊದಲ ಮಹಾಕವಿಯಾಗಿದ್ದಾರೆ. ಇವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆ ಬೆಳೆಯಲು ಮುಂದಾಗಬೇಕು’ ಎಂದು ಹೇಳಿದರು.

ಲೇಖಕ ಜೆ.ಸೋಮಣ್ಣ ಮುಖ್ಯಭಾಷಣ ಮಾಡಿದರು. ತಾಲ್ಲೂಕು ಗಿರಿಜನ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಮುತ್ತುರಾಜ್, ತಿತಿಮತಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಮಣಿಕುಂಜಿ, ಉಪಾಧ್ಯಕ್ಷೆ ಪುಷ್ಪಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಲಿರ ರಶೀದ್, ಅರಣ್ಯ ಹಕ್ಕು ಸಮಿತಿ ಸದಸ್ಯ ರಾಮು, ನಾಗರಹೊಳೆ ಗಿರಿಜನ ಅಮ್ಮಳ ಕಲಾ ತಂಡದ ಜೆ.ಕೆ.ರಮೇಶ್, ಶಿಕ್ಷಕರಾದ ಪ್ರಶಾಂತ್, ಬಸವರಾಜು, ಟಿ.ಎಸ್.ಮಹೇಶ್ ಹಾಜರಿದ್ದರು.

ತೋರ ಗ್ರಾಮದ ಕುಡಿಯರ ಗೋಪಮ್ಮ ತಂಡದಿಂದ ಉರುಟಿಕೊಟ್ ಪಾಟ್ ನೃತ್ಯ, ನಾಗರಹೊಳೆ ಅಮ್ಮಾಳ ತಂಡದ ಗಿರಿಜನ ನೃತ್ಯ ಸುಂದರ ವಾಗಿತ್ತು.

ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನವರೆಗೆ ಕಲಾತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು.

ಪೊನ್ನಂಪೇಟೆಯಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ತೋರ ಗ್ರಾಮದ ಗೋಪಮ್ಮ ತಂಡದವರು ಕುಡಿಯರ ಉರುಟಿಕೋಟ್ ಪಾಟ್ ನೃತ್ಯ ನಡೆಸಿಕೊಟ್ಟರು
ಪೊನ್ನಂಪೇಟೆಯಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ನಾಗರಹೊಳೆ ಗಿರಿಜನ ಯುವತಿಯರ ಗಿರಿಜನ ನೃತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.