ಸೋಮವಾರಪೇಟೆ: ಸಿ ಮತ್ತು ಡಿ ಭೂಮಿಯಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ತುಂಡರಿಸಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ ಮರ ಮತ್ತು ಮರವನ್ನು ತುಂಡರಿಸಲು ಬಳಸಿದ್ದ ಕಟ್ಟಿಂಗ್ ಯಂತ್ರವನ್ನು ತಾಲ್ಲೂಕು ರೈತ ಸಂಘ ಮತ್ತು ತಾಲ್ಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಮರಳಿ ರೈತರಿಗೆ ಕೊಡಿಸಿದರು.
ಇಲ್ಲಿಗೆ ಸಮೀಪದ ಮಸಗೋಡು ಗ್ರಾಮದ ಹೇಮಂತ್ ಎಂಬುವರ ತಮ್ಮ ಕಾಫಿ ತೋಟದಲ್ಲಿ ಸಿಲ್ವರ್ ಮರಗಳನ್ನು ಬೆಳೆದಿದ್ದು, ಅವುಗಳನ್ನು ಮಾರಾಟ ಮಾಡಲು ಈಚೆಗೆ ತುಂಡರಿಸಲಾಗಿತ್ತು. ಈ ಸಂದರ್ಭ ಅರಣ್ಯ ಇಲಾಖೆಯ ಫಾರೆಸ್ಟರ್ ನಾರಾಯಣ್ ಮೂಲ್ಯ ಸ್ಥಳಕ್ಕೆ ಬಂದು, ಕಡಿದ ಮರಗಳು ಮತ್ತು ಮರವನ್ನು ಕತ್ತರಿಸಲು ಬಳಸಿದ್ದ ಕಟ್ಟಿಂಗ್ ಯಂತ್ರ ವಶಕ್ಕೆ ಪಡೆದಿದ್ದರು.
ವಿಷಯ ತಿಳಿದ ರೈತ ಸಂಘ ಮತ್ತು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಇದನ್ನು ತಡೆದರು.
ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ‘ಜಮೀನಿನಲ್ಲಿ ರೈತರು ಗಿಡಗಳನ್ನು ನೆಟ್ಟು ಬೆಳೆಸಿರುವ ಮರವನ್ನು ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಅರಣ್ಯ ಇಲಾಖೆಗೆ ಹಕ್ಕಿಲ್ಲ’ ಎಂದು ತಿಳಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್, ‘ಈಗಾಗಲೇ ರೈತರ ನಿಯೋಗ ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದು, ಸದ್ಯಕ್ಕೆ ಅರಣ್ಯ ಇಲಾಖೆಯವರು ರೈತರ ಜಮೀನಿಗೆ ಪ್ರವೇಶಿಸದಂತೆ ಆದೇಶ ನೀಡಿದ್ದಾರೆ. ಆದರೆ, ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವುದು ತಪ್ಪು’ ಎಂದು ಹೇಳಿದರು.
ವಕೀಲ ಬಿ.ಜೆ. ದೀಪಕ್ ಮಾತನಾಡಿ, ‘ಒತ್ತುವರಿ ಕೃಷಿ ಭೂಮಿಯನ್ನು ಜಂಟಿ ಸರ್ವೆ ಮಾಡಿಸಲು ಅರಣ್ಯ ಸಚಿವರು ತೀರ್ಮಾನಿಸಿದ್ದಾರೆ. ಜಂಟಿ ಸರ್ವೆ ಮಾಡಿಸಿ ಗಡಿ ಗುರುತಿಸುವ ತನಕ ಅರಣ್ಯಾಧಿಕಾರಿಗಳು ರೈತರಿಗೆ ತೊಂದರೆ ಕೊಡಬಾರದು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.