ADVERTISEMENT

ಅನುದಾನದ ಕೊರತೆ: ಶತಮಾನೋತ್ಸವ ಭವನಕ್ಕೆ ಗ್ರಹಣ

ಸೋಮವಾರಪೇಟೆ: ಜನರ ಸೇವೆಗೆ ಲಭ್ಯವಾಗದ ಭವನ

ಡಿ.ಪಿ.ಲೋಕೇಶ್
Published 15 ನವೆಂಬರ್ 2024, 6:01 IST
Last Updated 15 ನವೆಂಬರ್ 2024, 6:01 IST
ಸೋಮವಾರಪೇಟೆಯಲ್ಲಿ ನಿರ್ಮಿಸುತ್ತಿರುವ ಶತಮಾನೋತ್ಸವ ಭವನದ ಸುತ್ತ ಕಾಡು ಬೆಳೆದಿರುವುದು. ನಿರಾಶ್ರಿತರ ತಾಣವಾಗಿರುವುದು.
ಸೋಮವಾರಪೇಟೆಯಲ್ಲಿ ನಿರ್ಮಿಸುತ್ತಿರುವ ಶತಮಾನೋತ್ಸವ ಭವನದ ಸುತ್ತ ಕಾಡು ಬೆಳೆದಿರುವುದು. ನಿರಾಶ್ರಿತರ ತಾಣವಾಗಿರುವುದು.   

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ 2007ರಲ್ಲಿ ಹಳೇ ವಿದ್ಯಾರ್ಥಿಗಳ ಕನಸಿನ ಕೂಸಾದ ಶತಮಾನೋತ್ಸವ ಭವನ ಕಾಮಗಾರಿ ಅಪೂರ್ಣಗೊಂಡಿದ್ದು, ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. 

ಮುಗಿದಿಲ್ಲ. ಇದರಿಂದಾಗಿ ಇಂದಿಗೂ ಜನರ ಸೇವೆಗೆ ಬಳಕೆಯಾಗಲು ಕಂಕಣ ಕೂಡಿ ಬಂದಿಲ್ಲ.   

ರಾಜಕೀಯ ದ್ವೇಷ ಹಾಗೂ ಮೇಲಾಟದಲ್ಲಿ ಸೂಕ್ತ ಹಣಕಾಸು ನೆರವಿಲ್ಲದೆ 16 ವರ್ಷಗಳಿಂದ ಸುಸಜ್ಜಿತ ಸಭಾಂಗಣ ನಿರ್ಮಾಣವಾಗದೆ, ಪಟ್ಟಣದಲ್ಲಿಯೇ ನಿರಾಶ್ರಿತರು, ಕೂಲಿ ಕಾರ್ಮಿಕರು ಹಾಗೂ ಬೀಡಾಡಿ ದನಗಳಿಗೆ ಆಶ್ರಯ ತಾಣವಾಗಿದೆ.

ADVERTISEMENT

ಮತ್ತೊಂದೆಡೆ ಕಟ್ಟಡ ನಿರ್ಮಾಣಕ್ಕೆ ಬಳಸಿದ್ದ ಕಿಟಿಕಿ ಬಾಗಿಲುಗಳು ಕಳ್ಳಕಾಕರ ಪಾಲಾಗಿವೆ. ಪ್ರಸ್ತುತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 116 ವರ್ಷಗಳು ಸಂದಿದ್ದು, ಈ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. ಬಿ.ಎ. ಜೀವಿಜಯ ಸೇರಿದಂತೆ ರಾಜಕೀಯ ಕ್ಷೇತ್ರದಲ್ಲೂ ಉನ್ನತ ಸ್ಥಾನವನ್ನು ಆಲಂಕರಿಸಿದ್ದಾರೆ. 

ಶಾಲೆ ಶತಮಾನ ಪೂರೈಸಿದ್ದು, ಹಳೇ ವಿದ್ಯಾರ್ಥಿಗಳು ಸೇರಿ, ಅಂದಿನ ಶಾಸಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ, ಬಿ.ಎ. ಜೀವಿಜಯ ಅವರೊಂದಿಗೆ ಚರ್ಚಿಸಿ ಶತಮಾನೋತ್ಸವ ಭವನ ನಿರ್ಮಿಸುವ ನೀಲ ನಕ್ಷೆ ತಯಾರಿಸಲಾಯಿತು. 2007ರಲ್ಲಿ ₹1.25 ಕೋಟಿ ವೆಚ್ಚದ ಭವನ ನಿರ್ಮಿಸಲು ಅಂದಾಜುಪಟ್ಟಿ ತಯಾರಿಸಲಾಯಿತು. ಜೀವಿಜಯ ಅವರು ತಮ್ಮ ಶಾಸಕರ ನಿಧಿಯಿಂದ ₹18 ಲಕ್ಷ ಅನುದಾನ ನೀಡಿದರು.

ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ₹15 ಲಕ್ಷ, ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹4 ಲಕ್ಷ, ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹ 2.5ಲಕ್ಷ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರು ₹3 ಲಕ್ಷ ಒದಗಿಸಿದ್ದರು. ಈ ಹಣದಲ್ಲಿ ಸಾಕಷ್ಟು ಕಾಮಗಾರಿ ಆದರೂ, ನಂತರ ಹಣದ ಕೊರತೆಯಿಂದ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.  

ಶಾಸಕ ಬಿ.ಎ. ಜೀವಿಜಯ ಉತ್ಸಾಹದಿಂದ ಭವನ ನಿರ್ಮಾಣಕ್ಕೆ ಚಾಲನೆ ನೀಡಿ, ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿ, ಹಣ ಸಂಗ್ರಹದಲ್ಲಿ ತೊಡಗಿದ್ದ ಸಂದರ್ಭ, ಎದುರಾದ ವಿಧಾನಸಭೆ ವಿಸರ್ಜನೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ನಂತರದ ವಿಧಾನಸಭೆಯಲ್ಲಿ ಜೀವಿಜಯ ಪರಾಭವಗೊಂಡಿದ್ದರಿಂದ ಶತಮಾನ ಭವನಕ್ಕೆ ಅನುದಾನಕ್ಕೆ ಗ್ರಹಣ ಹಿಡಿಯಿತು.

ಸೋಮವಾರಪೇಟೆಯಲ್ಲಿ ನಿರ್ಮಿಸುತ್ತಿರುವ ಶತಮಾನೋತ್ಸವ ಭವನದ ನೆಲ ಅಂತಸ್ತಿನಲ್ಲಿ ಬೀಡಾಡಿ ದನಗಳು ಮರದ ಒಟ್ಟು ರಾಶಿ ಹಾಕಲು ಹಾಗೂ ಪುಂಡ ಪೋಕರಿಗಳಿಗೆ ಆಶ್ರಯ ತಾಣವಾಗಿದೆ. 

ಅಷ್ಟೊತ್ತಿಗಾಗಲೆ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿತು. ನಂತರದ ಜನಪ್ರತಿನಿಧಿಗಳು ಶತಮಾನೋತ್ಸವ ಭವನದ ಕಡೆ ತಿರುಗಿಯೂ ನೋಡಲಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು, ಭವನ ಪೂರ್ಣಗೊಳಿಸಲು ವಿಶೇಷ ಅನುದಾನ ಕಲ್ಪಿಸಲಿಲ್ಲ. ಶಾಲೆಯ ಪಕ್ಕದಲ್ಲೇ ಭವನ ನಿರ್ಮಾಣಕ್ಕೆ 30ಸೆಂಟ್ ಜಾಗದಲ್ಲಿ 80 ಚದರ ವಿಸ್ತೀರ್ಣದ  ಬೃಹತ್ ಭವನದಲ್ಲಿ 2000 ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ಆಡುಗೆ ಮನೆ ಮತ್ತು ಊಟದ ಸಭಾಂಗಣಕ್ಕೆ ವ್ಯವಸ್ಥೆ ಮಾಡಲಾಗಿದೆ. 5 ವರ್ಷಗಳ ಹಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭ ಮತ್ತೊಮ್ಮೆ ಜೀವಿಜಯ ಅವರು ಭವನ ನಿರ್ಮಾಣಕ್ಕೆ ನೂತನ ನಕ್ಷೆ ಮಾಡಿಸಿದರೂ, ಅಷ್ಟೊತ್ತಿಗಾಗಲೇ ಸರ್ಕಾರವೇ ಬಿದ್ದು ಹೋಯಿತು.

ಭವನದ ಕಿಟಕಿ ಬಾಗಿಲುಗಳು ಕಳ್ಳತನವಾಗಿವೆ. ಕಾಮಗಾರಿ ಪೂರ್ಣಗೊಳಿಸಲು ಈಗ ₹4 ಕೋಟಿ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಸುಂದರ ಶತಮಾನೋತ್ಸವ ಭವನದ ಲೋಕಾರ್ಪಣೆಗಾಗಿ ಹಳೆ ವಿದ್ಯಾರ್ಥಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಇಂದಿಗೂ ಸೂಕ್ತ ಸಭಾಂಗಣ ಇಲ್ಲ. ಜನಪರ ಕಾರ್ಯಕ್ರಮಗಳಿಗೆ ಈ ಭವನದ ಅವಶ್ಯಕತೆ ಇದೆ. ಈ ಶತಮಾನೋತ್ಸವ ಭವನ  ಪೂರ್ಣಗೊಳಿಸುವ ಪ್ರಬಲ ಇಚ್ಛಾಶಕ್ತಿ, ರಾಜಕೀಯ ರಹಿತ ಕಾರ್ಯದಕ್ಷತೆ, ಜನಪ್ರತಿನಿಧಿಗಳಿಗೆ ಬರಲಿ ಎಂದು ಸ್ಥಳೀಯರು ಕಾಯುತ್ತಿದ್ದಾರೆ.

ಸೋಮವಾರಪೇಟೆ ಶತಮಾನೋತ್ಸವ ಭವನದ ನೂತನ ನೀಲ ನಕ್ಷೆಯನ್ನು ತಯಾರಿಸಿರುವುದು.
₹ 2 ಕೋಟಿ ಸಿಗುವ ಭರವಸೆ
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅದರ ನೆನಪಿಗಾಗಿ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ, ಭವನದ ಕಾಮಗಾರಿ ಮುಗಿಸಿ ಜನರ ಬಳಕೆಗೆ ಬರಲು ಸಾಧ್ಯವಾಗದಿರುವುದು ವಿಪರ್ಯಾಸ. ಈಗಾಗಲೇ ಭವನದ ಉಳಿದ ಕಾಮಗಾರಿಗೆ ಹಣಕ್ಕಾಗಿ ಸರ್ಕಾರದೊಂದಿಗೆ ಚರ್ಚಿಸಿ ₹4 ಕೋಟಿಗೆ ಬೇಡಿಕೆ ಇಡಲಾಗಿದೆ. ತಕ್ಷಣಕ್ಕೆ ₹2 ಕೋಟಿ ಹಣ ಸಿಗುವ ಭರವಸೆಯನ್ನು ಸರ್ಕಾರ ನೀಡಿದ್ದು, ಹಣ ಬಿಡುಗಡೆಯಾದ ಬಳಿಕ ಭವನದ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.