ADVERTISEMENT

ಮಡಿಕೇರಿ | 5 ತಿಂಗಳಿಂದ ಪಾವತಿಯಾಗದ ವೇತನ: ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 4:09 IST
Last Updated 2 ಮಾರ್ಚ್ 2024, 4:09 IST
ಎಫ್‌ಎಂಸಿ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಶುಕ್ರವಾರ ಕಾಲೇಜಿನ ಮುಂದೆ 5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಎಫ್‌ಎಂಸಿ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಶುಕ್ರವಾರ ಕಾಲೇಜಿನ ಮುಂದೆ 5 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಬಾಕಿ ಉಳಿದಿರುವ ಕಳೆದ 5 ತಿಂಗಳ ವೇತನ ಹಾಗೂ ಕೋವಿಡ್‌ ಕಾಲದಲ್ಲಿ ಬಾಕಿ ಉಳಿಸಿಕೊಂಡಿರುವ 3 ತಿಂಗಳ ವೇತನವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ 43 ಮಂದಿ ಅತಿಥಿ ಉಪನ್ಯಾಸಕರು ಶುಕ್ರವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ತರಗತಿ ಬಹಿಷ್ಕರಿಸಿ ಕಾಲೇಜಿನ ಮುಂಭಾಗ ಯಾರ ವಿರುದ್ಧವೂ ಘೋಷಣೆ ಕೂಗದೇ ಮೌನವಾಗಿಯೇ ಕುಳಿತು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕರೊಬ್ಬರು, ‘ಕಳೆದ ಅಕ್ಟೋಬರ್‌ನಿಂದ 5 ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಕೋವಿಡ್‌ ಕಾಲದ 3 ತಿಂಗಳ ವೇತನವನ್ನೂ ನೀಡಿಲ್ಲ. ಒಟ್ಟು 8 ತಿಂಗಳ ಕಾಲ ವೇತನ ಪಾವತಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಕ್ಕಳ ಹಿತದೃಷ್ಟಿಯಿಂದ ನಾವು ಕಳೆದ ಸೆಮಿಸ್ಟರ್ ಪೂರ್ಣ ಮೌಲ್ಯಮಾಪನ ಮಾಡಿದ್ದೇವೆ. ಪರೀಕ್ಷಾ ಮೇಲ್ವಿಚಾರಣಾ ಕಾರ್ಯ ಮಾಡಿದ್ದೇವೆ. ಪಾಠ ಪ್ರವಚನ ಮುಗಿಸಿದ್ದೇವೆ. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದರೂ ನಮಗೆ ವೇತನ ನೀಡಿಲ್ಲ’ ಎಂದು ದೂರಿದರು.

‘ನಿರಂತರವಾಗಿ ಒಟ್ಟು 5 ತಿಂಗಳ ವೇತನವನ್ನು ನೀಡದೇ ಇರುವುದರಿಂದ ಜೀವನ ನಿರ್ವಹಣೆ ತೀರಾ ಕಷ್ಟದಾಯಕವಾಗಿದೆ. ನಮಗೂ ಹೆಂಡತಿ, ಮಕ್ಕಳು ಇದ್ದಾರೆ. ವಯಸ್ಸಾದ ತಂದೆ, ತಾಯಿಯರು ಇದ್ದಾರೆ. ಔಷಧೋಪಚಾರಗಳಿಗೆ ಹಣ ಬೇಕಿದೆ. ಮಂಗಳೂರು ವಿಶ್ವವಿದ್ಯಾನಿಲಯದವರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿರುವುದು ಸರಿಯಲ್ಲ’ ಎಂದು ಖಂಡಿಸಿದರು.

ಮತ್ತೊಬ್ಬ ಅತಿಥಿ ಉಪನ್ಯಾಸಕ ಮಾತನಾಡಿ, ‘ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಸೇರುವ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿ ಮಾಡಲಾಗಿದೆ. ಕೊಡಗಿನ ಎಫ್‌ಎಂಸಿ ಕಾಲೇಜಿನ ಉಪನ್ಯಾಸಕರಿಗೆ ಮಾತ್ರವೇ ವೇತನ ಪಾವತಿಸಿಲ್ಲ. ಇದು ವಿಶ್ವವಿದ್ಯಾನಿಲಯ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

ಮತ್ತೊಬ್ಬ ಅತಿಥಿ ಉಪನ್ಯಾಸಕ ಮಾತನಾಡಿ, ‘ನಾವು ನಮ್ಮ ನ್ಯಾಯಬದ್ಧವಾದ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ. ಬಾಕಿ ವೇತನ ಪಾವತಿಸಿದ ತಕ್ಷಣವೇ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಮಂಗಳೂರು ವಿಶ್ವವಿದ್ಯಾನಿಲಯದ ಘನತೆಗೆ ಕಳಂಕ ತರುವ ಉದ್ದೇಶ ನಮ್ಮದ್ದಲ್ಲ’ ಎಂದು ಹೇಳಿದರು.

‘ಕಳೆದ 5 ತಿಂಗಳಿಂದಲೂ ಇಲ್ಲಿಂದ ಎಲ್ಲರೂ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋಗಿ ಸಂಬಳ ಕೊಡಿ ಎಂದು ಬೇಡಿಕೊಂಡಿದ್ದೇವೆ. ನಾಲ್ಕಾರು ಬಾರಿ ಅಷ್ಟು ದೂರ ಹೋಗುವುದಕ್ಕೆ ಹಣ ಸಾಕಷ್ಟು ಖರ್ಚಾಗಿದೆ. ಮೊನ್ನೆ ಹೋದಾಗ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ಹೆಚ್ಚಿನ ಸ್ಪಂದನೆ ವ್ಯಕ್ತವಾಗಲಿಲ್ಲ. ಹೀಗಾಗಿ, ನಾವು ನಿರಾಶರಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

5 ತಿಂಗಳಿಂದ ನಿರಂತರವಾಗಿ ಬಾಕಿ ಉಳಿದ ವೇತನ ಕೋವಿಡ್ ಕಾಲದ ಮೂರು ತಿಂಗಳ ವೇತನವೂ ಇಲ್ಲ‌ ಬೇಸರಗೊಂಡ ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ
ಒಂದು ತಿಂಗಳ ವೇತನ ಪಾವತಿಸಿದ್ದೇವೆ; ಕುಲಪತಿ
ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನೆ ಕುರಿತು ‘ಪ್ರಜಾವಾಣಿ’ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಜಯರಾಜ್ ಅಮಿನ್ ಅವರನ್ನು ಸಂಪರ್ಕಿಸಿದಾಗ ಅವರು ‘ಬಾಕಿ ಉಳಿದಿರುವ ವೇತನದ ಪೈಕಿ ಈಗ ಒಂದು ತಿಂಗಳ ವೇತನ ನೀಡಿದ್ದೇವೆ. ಇನ್ನುಳಿದ ತಿಂಗಳ ವೇತನವನ್ನು ಆದಷ್ಟು ಬೇಗ ಪಾವತಿಸಲು ಪ್ರಯತ್ನಪಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.