ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆದಾರರಿಂದ ಅ.23ರಂದು ಟೆಂಡರ್ ಕರೆದು ಅಂತಿಮಗೊಳಿಸಲು ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು, ಸಿಬ್ಬಂದಿ ತೆರಿಗೆ ಮತ್ತು ಕಂದಾಯ ವಸೂಲಿ ಸಂದರ್ಭ ಕಡ್ಡಾಯ ರಶೀದಿ ನೀಡಿ ಹಣ ಪಡೆಯಬೇಕು ಎಂದು ಪಂಚಾಯಿತಿ ಸದಸ್ಯರು ಸೂಚಿಸಿದರು.
ಸಭೆಯಲ್ಲಿ ಸದಸ್ಯ ಶುಭಾಕರ್ ಹಣ ವಸೂಲಿ ಮಾಡುವ ಕೆಲ ನೌಕರರ ವಿರುದ್ಧ ಆರೋಪ ಮಾಡಿದರು. ಹಣ ಕೊಟ್ಟವರು ಲಿಖಿತವಾಗಿ ತಮಗೆ ದೂರು ನೀಡಿದರೆ, ಅಂತಹ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.
ಪಂಚಾಯಿತಿಯಲ್ಲಿ ಲಂಚ ವ್ಯವಹಾರ ನಡೆಯುತ್ತಿದ್ದರೆ, ಅದನ್ನು ಮುಖ್ಯಾಧಿಕಾರಿಗಳು ಸಿಬ್ಬಂದಿ ಸಭೆ ಕರೆದು ಸರಿಪಡಿಸಬೇಕು ಎಂದು ಸದಸ್ಯರಾದ ಮೃತ್ಯುಂಜಯ, ಬಿ.ಸಂಜೀವ ಹೇಳಿದರು.
ಪಂಚಾಯಿತಿಯಲ್ಲಿ ಸಾರ್ವಜನಿಕರನ್ನು ಸತಾಯಿಸದೆ, ಅವರ ಕೆಲಸ ಮಾಡಿಕೊಡಲು ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಸರ್ವ ಸದಸ್ಯರು ಮುಖ್ಯಾಧಿಕಾರಿಗೆ ಸೂಚಿಸಿದರು.
ಪಂಚಾಯಿತಿ ವ್ಯಾಪ್ತಿಯ ವರ್ತಕರು ವ್ಯಾಪಾರ ಪರವಾನಗಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆದರೆ, ಕೆಲವರು ಲೈಸೆನ್ಸ್ ಪಡೆಯದೆ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.
ಕೃಷ್ಣ ಜನ್ಮಾಷ್ಠಮಿ ದಿನ, ಮಾಂಸ ಮಾರಾಟ ಮಾಡಿದ್ದಾರೆ. ನಿಯಮ ಮೀರಿದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಪ್ರಶ್ನಿಸಿದ ಅರೋಗ್ಯಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದಾರೆ. ಅಂತಹವರ ವಿರುದ್ದ ಮುಖ್ಯಾಧಿಕಾರಿಗಳು ಕ್ರಮಕೈಗಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.