ಸೋಮವಾರಪೇಟೆ: ತಾಲ್ಲೂಕಿನ ಕುಮಾರಳ್ಳಿ ಗ್ರಾಮದ ಸಬ್ಬಮ್ಮದೇವಿ ಸುಗ್ಗಿ ಉತ್ಸವ ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಈಚೆಗೆ ಆಚರಿಸಿದರು.
ಸುಗ್ಗಿಕಂಬಕ್ಕೆ ಊಲು ಏರಿಸುವ ಮೂಲಕ ಧಾರ್ಮಿಕ ಆಚರಣೆ ಪ್ರಾರಂಭವಾಗಿ, ಪ್ರಾರಂಭದ ದಿನವೇ ಗ್ರಾಮಸ್ಥರು ಮಳೆಗಾಗಿ ಗ್ರಾಮದೇವತೆಗೆ ಪ್ರಾರ್ಥಿಸಿದರು. ಪ್ರಕೃತಿ ರಕ್ಷಣೆ ಮತ್ತು ವರ್ಷವಿಡಿ ಕೃಷಿಚಟುವಟಿಕೆಯಲ್ಲಿ ನಿರತರಾಗಿರುವ ರೈತರಿಗೆ ವಿಶ್ರಾಂತಿಗೋಸ್ಕರ 8 ದಿನಗಳ ಕಾಲ ಕೆಲಸ ಮಾಡದಂತೆ ಸಂಪ್ರದಾಯದಂತೆ ಅಜ್ಞೆ ನೀಡಲಾಗಿತ್ತು. ಹಸಿ ಮರಗಳನ್ನು ಕಡಿಯುವಂತಿಲ್ಲ. ಒಣಕಡ್ಡಿಗಳನ್ನು ಮುರಿಯುವಂತಿಲ್ಲ. ಮಣ್ಣಿನ ಕೆಲಸ ಮಾಡುವಂತಿಲ್ಲ ಎಂಬ ಪದ್ಧತಿಯನ್ನು ಸುಗ್ಗಿ ಮುಗಿಯುವ ತನಕ ಆಚರಿಸಲಾಯಿತು.
ಸುಗ್ಗಿ ಕೊನೆದಿನ ಸುಗ್ಗಿಕಟ್ಟೆಯಲ್ಲಿ ಬೆಳಗ್ಗಿನ ತನಕ ವಿವಿಧ ಆಚರಣೆಗಳು ನಡೆದವು. ವಾದ್ಯಗೋಷ್ಠಿಯೊಂದಿಗೆ ಸುಗ್ಗಿಕುಣಿತ, ಮಲ್ಲುಬೆಳಗುವುದು, ಕೋಲಾಟ, ಹುಲಿಭಂಗಿ ಕುಣಿತ, ಬಿಲ್ಲು ಪ್ರದರ್ಶನ, ಸೊಡ್ಲುಪೂಜೆ, ಸಾಂಪ್ರಾದಾಯಿಕ ಕಡವೆ ಬೇಟೆ, ಉತ್ಸವ ಮೂರ್ತಿ ಮೆರವಣಿಗೆ, ಅನ್ನಸಂತರ್ಪಣೆ ನಡೆಯಿತು.
ದೇವರ ಒಡೆಕಾರರಾದ ತಮ್ಮಯ್ಯ, ಮನೋಹರ, ಈರಪ್ಪ, ಉದಯ, ಕುಮಾರ್, ಗಣೇಶ, ನಾಗರಾಜು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸುಗ್ಗಿಉತ್ಸವ ಸಮಿತಿ ಅಧ್ಯಕ್ಷ ಯು.ಕೆ.ದೇಶರಾಜ್, ಉಪಾಧ್ಯಕ್ಷ ಎಂ.ಎಸ್.ತಮ್ಮಯ್ಯ, ಕಾರ್ಯದರ್ಶಿ ಕಿರಣ್, ಖಜಾಂಚಿ ನವೀನ್, ಸಹ ಖಜಾಂಚಿಗಳಾದ ಕಾರ್ಯಪ್ಪ, ನಿತಿನ್ ಉತ್ಸವದ ಉಸ್ತುವಾರಿ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.