ADVERTISEMENT

ತನ್ನ ಹಕ್ಕು ಪಡೆದುಕೊಳ್ಳಲು ಪುತ್ರ ನ್ಯಾಯಾಲಯಕ್ಕೆ; ಕೆ.ಜೆ.ಜಾರ್ಜ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:17 IST
Last Updated 17 ನವೆಂಬರ್ 2024, 8:17 IST
ಕೆ.ಜೆ.ಜಾರ್ಜ್‌ 
ಕೆ.ಜೆ.ಜಾರ್ಜ್‌    

ಮಡಿಕೇರಿ: ‘ನನ್ನ ಪುತ್ರ ತನ್ನ ಹಕ್ಕು ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾರೆಯೇ ವಿನಹಾ ಸರ್ಕಾರದ ವಿರುದ್ಧ ಅಲ್ಲ’ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಶಂಭುಗೌಡನ ಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತನ್ನ ಖಾಸಗಿ ಜಮೀನುಗಳಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿತವಾಗಿ ಸಂಚರಿಸಲು ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಪುತ್ರ ರಾಣಾ ಜಾರ್ಜ್‌ ಹೈಕೋರ್ಟ್‌ ಮೊರೆ ಹೋಗಿರುವ ಸಂಬಂಧ ಸುದ್ದಿಗಾರರು ಇಲ್ಲಿ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಒಂದು ವೇಳೆ ಸರ್ಕಾರ ಪುತ್ರನ ಬೇಡಿಕೆಗೆ ಅಸ್ತು ಎಂದಿದ್ದರೆ ಮಾಧ್ಯಮಗಳು ಅಧಿಕಾರದ ದುರುಪಯೋಗ ಎಂದು ಹೇಳುತ್ತವೆ. ಹಾಗಾಗಿ, ಪುತ್ರ ನೇರವಾಗಿ ನ್ಯಾಯಾಲಯದಲ್ಲೇ ತಮ್ಮ ಹಕ್ಕಿಗಾಗಿ ಕಾನೂನು ಪ್ರಕಾರವೇ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಸದ್ಯ, ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಹೆಚ್ಚೇನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಹುಚ್ಚಾಸ್ಪತ್ರೆಯಲ್ಲಿರುವವರು ಇದೀಗ ವಿಧಾನಸೌಧದಲ್ಲಿದ್ದಾರೆ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಅವರು ಗೃಹಸಚಿವರಾಗಿದ್ದಾಗ ಹುಚ್ಚಾಸ್ಪತ್ರೆಯಿಂದ ಬಂದಿದ್ದರಾ? ಎಂದು ಮರುಪ್ರಶ್ನಿಸಿದರು.

‘ರಾಜ್ಯದಲ್ಲಿ ‘ಆಪರೇಷನ್ ಕಮಲ’ ಎಂಬುದು ಹೊಸತಲ್ಲ. ಹಿಂದೆಯೂ ರಾಜ್ಯದಲ್ಲಿ ಆಗಿದೆ. ಈಗಲೂ ಬೇರೆ ರಾಜ್ಯದಲ್ಲಿ ಆಗುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಶಾಸಕರೆಲ್ಲರೂ ಒಟ್ಟಾಗಿದ್ದೇವೆ’ ಎಂದು ಹೇಳಿದರು.

‘ಕೋವಿಡ್ ಹಗರಣ ಕುರಿತು ಸರ್ಕಾರ ರಾಜಕೀಯ ಮಾಡಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.