ADVERTISEMENT

ಜೂನ್ 15, 16ರಂದು ಬೆಂಗಳೂರಿನಲ್ಲಿ ‘ದಕ್ಷಿಣ ಭಾರತ ಉತ್ಸವ’: ನಾಗೇಂದ್ರ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 0:23 IST
Last Updated 9 ಜೂನ್ 2024, 0:23 IST
ಬಿ.ಆರ್.ನಾಗೇಂದ್ರಪ್ರಸಾದ್
ಬಿ.ಆರ್.ನಾಗೇಂದ್ರಪ್ರಸಾದ್   

ಮಡಿಕೇರಿ: ‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜೂನ್ 15 ಮತ್ತು 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ದಕ್ಷಿಣ ಭಾರತ ಉತ್ಸವ, ಸಮ್ಮೇಳನ ಮತ್ತು ವಸ್ತುಪ್ರದರ್ಶನ’ವನ್ನು ಆಯೋಜಿಸಿದೆ’ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ತಿಳಿಸಿದರು.

‘ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭಾಗವಹಿಸಲಿದ್ದಾರೆ. ಪ್ರವಾಸೋದ್ಯಮ ವಲಯ ಸೇರಿದಂತೆ ಇತರೆ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುವುದು ಪ್ರಧಾನ ಉದ್ದೇಶವಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬಂಡವಾಳ ಹೂಡಿಕೆದಾರರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಹೂಡಿಕೆದಾರರು ಭಾಗವಹಿಸಬಹುದು. ಸರ್ಕಾರಕ್ಕೆ ಸುಮಾರು ₹ 1 ಸಾವಿರ ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ₹ 500 ಕೋಟಿ ಮೊತ್ತದ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡುವ ವಿಶ್ವಾಸವಿದೆ’ ಎಂದರು.

ADVERTISEMENT

‘ದಕ್ಷಿಣದ ರಾಜ್ಯಗಳನ್ನು ಪ್ರವೇಶಿಸಲು ಪ್ರವಾಸಿ ವಾಹನಗಳಿಗೆ ಏಕರೂಪ ದರ ನಿಗದಿ ಮಾಡುವುದು, ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನೂ ಸರ್ಕಾರದ ಮುಂದೆ ಮಂಡಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.