ADVERTISEMENT

ಮಡಿಕೇರಿ: ದಸರೆ ಮುಗಿಯುತ್ತಿದ್ದಂತೆ ಎಲ್ಲರೂ ಮರೆತರು...!

ಮುಂದಿನ ವರ್ಷ ದಸರೆ ಸಮೀಪದಲ್ಲಷ್ಟೇ ಸಿದ್ಧತೆ, ಇಲ್ಲವೇ ಇಲ್ಲ ಪೂರ್ವ ಸಿದ್ಧತೆ

ಕೆ.ಎಸ್.ಗಿರೀಶ್
Published 21 ಅಕ್ಟೋಬರ್ 2024, 7:39 IST
Last Updated 21 ಅಕ್ಟೋಬರ್ 2024, 7:39 IST
ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ
ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ   

ಮಡಿಕೇರಿ: ‘ಬೆಳಕಿನ ದಸರೆ’ ಮುಗಿಯುತ್ತಿದ್ದಂತೆ ಎಲ್ಲರೂ ಮರೆಯುತ್ತಾರೆ. ಮುಂದಿನ ವರ್ಷ ದಸರೆ ಸನ್ನಿಹಿತವಾಗುವವರೆಗೂ ಸುಮ್ಮನಿದ್ದು, ಆಗ ತಡಬಡನೆ ಎದ್ದು, ದಸರಾ ಕಾರ್ಯವನ್ನು ಆರಂಭಿಸುತ್ತಾರೆ. ಅನುದಾನಕ್ಕಾಗಿ ಮೊರೆ ಇಡುತ್ತಾರೆ. ಸರ್ಕಾರವೂ ದಸರೆ ಒಂದೆರಡು ದಿನಗಳಿದ್ದಾಗ ಅನುದಾನ ಘೋಷಿಸುತ್ತದೆ. ಮತ್ತೆ ಯಥಾಪ್ರಕಾರ ಯಾವುದೇ ಪೂರ್ವಸಿದ್ಧತೆಯೇ ಇಲ್ಲದೇ ನಗರದಲ್ಲಿ ದಸರೆ ನಡೆಯುತ್ತದೆ.

ಇದರಿಂದಾಗಿ ಅನೇಕ ಅವ್ಯವಸ್ಥೆಗಳು ದಸರೆಯಲ್ಲಿ ಕಣ್ಣಿಗೆ ಸಿಗುತ್ತವೆ. ಸುವ್ಯವಸ್ಥಿತ ರೀತಿಯಲ್ಲಿ ದಸರೆ ನಡೆಸಲು ಸಾಧ್ಯವಾಗದೇ ಎಲ್ಲರೂ ಬೇಸರಿಸಿಕೊಳ್ಳುವಂತಾಗುತ್ತದೆ.

ಇತ್ತೀಚೆಗೆ ಸಾಂಸ್ಕೃತಿಕ ಸಮಿತಿಯ ನಿತ್ಯದ ಕಾರ್ಯಕ್ರಮಗಳೂ ಸವಕಲು ನಾಣ್ಯದಂತಾಗುತ್ತಿದೆ. ಪ್ರತಿನಿತ್ಯವೂ ವೇದಿಕೆಯ ಆ ತುದಿಯಂದ ಈ ತುದಿಯವರೆಗೂ ಕುರ್ಚಿಯನ್ನಿರಿಸಿ ‘ಭಾಷಣಗೋಷ್ಠಿ’ ಮಾಡಲಾಗುತ್ತಿದೆ. ವೇದಿಕೆ ಸಿಕ್ಕ ಕೂಡಲೇ ಗಣ್ಯರೂ ಸಮಯದ ಪರಿವೇ ಇಲ್ಲದೇ ಭಾಷಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಅಕ್ಷರಶಃ ಭಾಷಣದ ಕಾರ್ಯಕ್ರಮವಾಗುತ್ತಿದೆ. ಇವರ ಭಾಷಣ ಯಾವ ಸಮಯಕ್ಕೆ ನಿಲ್ಲಿಸುತ್ತಾರೋ ಎಂದು ಬಣ್ಣ ಹಚ್ಚಿಕೊಂಡ ಕಲಾವಿದರು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ವೇದಿಕೆಯ ಮೇಲೆ ಭಾಷಣ ಮಾಡುವವರು ಒಂದು ಬಾರಿ ಸಭಿಕರ ಸಾಲಿನಲ್ಲಿ ಕೂತು ಸಭಿಕರು ಆಡುವ ಮಾತುಗಳನ್ನಾಡಿದರೆ ಬಹುಶಃ ಇನ್ನೆಂದೂ ಅವರು ವೇದಿಕೆಯನ್ನೇರುವುದಿಲ್ಲವೇನೋ? ಆದರೆ, ನಿತ್ಯವೂ ವೇದಿಕೆಯಲ್ಲಿ ಭಾಷಣಗಳು ಕೇಳಿ ಬಂದು, ಸ್ವಾಗತ, ವಂದನಾರ್ಪಣೆಗೆ ವೇದಿಕೆಯ ಮೇಲಿರುವವರ ಹೆಸರುಗಳನ್ನು ಹೇಳುವವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಿಯರು ಮನದಲ್ಲೇ ಶಪಿಸಿಕೊಂಡಿರುತ್ತಾರೆ.

ADVERTISEMENT

ಇಂತಹ ಪರಿಪಾಠ ಬೇಡ. ಕೇವಲ ಉದ್ಘಾಟನೆ ಹಾಗೂ ಸಮಾರೋಪಕ್ಕಷ್ಟೇ ವೇದಿಕೆ ಕಾರ್ಯಕ್ರಮ ಇರಲಿ. ನಿತ್ಯವೂ ಉದ್ಘಾಟನೆ, ಭಾಷಣ ಬೇಡವೇ ಬೇಡ ಎಂದು ಈಚೆಗೆ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿದ್ವಿಲಾಸ್ ಅವರು ವೇದಿಕೆಯ ಮೇಲಿಂದಲೇ ಹೇಳಿದ್ದರು. ಇಷ್ಟಾದರೂ ಭಾಷಣ ಮಾಡುವ ಪರಂಪರೆ ಮಾತ್ರ ನಿಲ್ಲಲಿಲ್ಲ.

ಶಬ್ದಮಾಲಿನ್ಯ ಉಂಟು ಮಾಡಿದ ಆರೋಪದ ಮೇರೆಗೆ ಈಚೆಗಷ್ಟೇ 40 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಕೀಲರಾದ ಅಮೃತೇಶ್ ಸಹ ಅಧಿಕ ಶಬ್ದ ಉಂಟು ಮಾಡುವ ಡಿ.ಜೆ ಬಳಕೆ ಮಾಡಬಾರದು ಎಂದು ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ಬಾರಿಯೂ ಹಿರಿಯರು, ಮಹಿಳೆಯರು, ಮಕ್ಕಳು, ಅಂಗವಿಕಲರು ಶೋಭಾಯಾತ್ರೆಯಿಂದ ದೂರ ಉಳಿಯಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.

ಏನೂ ತಿಳಿಯದೇ ತಿರುಗಾಡಿದ ಜನರು!

ದಶಮಂಟಪಗಳ ಶೋಭಾಯಾತ್ರೆಗಾಗಿ ಬಂದ ಜನರು ಈ ಬಾರಿಯೂ ಏನೂ ತಿಳಿಯದೇ ಸುಮ್ಮನೇ ಓಡಾಡಿದರು. ಎಲ್ಲೂ ಶೋಭಾಯಾತ್ರೆ ನಡೆಯುವ ಮಾರ್ಗವಾಗಲಿ, ಮಂಟಪಗಳ ಪ್ರದರ್ಶನದ ಮಾಹಿತಿಯಾಗಲಿ, ಯಾವ ಯಾವ ಮಂಟಪಗಳು, ಯಾವ ಯಾವ ಕಥೆಯನ್ನು ಪ್ರದರ್ಶಿಸುತ್ತಿದೆ ಎಂಬ ಫಲಕಗಳಾಗಲಿ ಎಲ್ಲೂ ಇರಲಿಲ್ಲ. ‘ಏನಂದರಿಯರು, ಎಂತೆಂದರಿಯರು... ‘ಜನ ಮರುಳೋ ಜಾತ್ರೆ ಮರುಳೋ...’ ಎಂಬಂತೆ ಜನರು ಸುತ್ತಿದರು.

ದಸರೆ ಮುಗಿಯುತ್ತಿದ್ದಂತೆ ಮತ್ತೊಂದು ದಸರೆಗೆ ಸಿದ್ಧತೆಗಳನ್ನು ಆರಂಭಿಸಬೇಕು. ಸರ್ಕಾರ ಬಜೆಟ್‌ನಲ್ಲೇ ಅನುದಾನ ಘೋಷಿಸಬೇಕು. ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಎಲ್ಲರದ್ದಾಗಿದೆ. ಕಳೆದ ವರ್ಷವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶೋಭಾಯಾತ್ರೆ ಕುರಿತು ತಮ್ಮ ಆತಂಕವನ್ನು ಹೊರಹಾಕಿದ್ದರು. ಇದಕ್ಕೊಂದು ಸ್ಪಷ್ಟ ರೂಪರೇಷೆ ರೂಪಿಸಬೇಕು ಎಂದೂ ಒತ್ತಾಯಿಸಿದ್ದರು. ಜಿಲ್ಲಾಕ್ರೀಡಾಂಗಣದಂತಹ ದೊಡ್ಡ ಮೈದಾನದಲ್ಲಿ ಎಲ್ಲ ಮಂಟಪಗಳನ್ನು ಕಟ್ಟಿ, ಅಲ್ಲಿಯೇ ಪ್ರದರ್ಶನ ನೀಡುವಂತಹ ವ್ಯವಸ್ಥೆ ರೂಪಿಸುವ ಕುರಿತು ಸಲಹೆಗಳನ್ನು ನೀಡಿದ್ದರು.

ಆಯಾಯಾ ದೇವಸ್ಥಾನಗಳ ಮುಂದೆಯೇ ನಿಗದಿತ ಸಮಯಕ್ಕೆ ಮಂಟ‍ಪಗಳು ಪ್ರದರ್ಶನ ನೀಡಬೇಕು ಎಂಬ ಅಭಿಪ್ರಾಯ ಕೆಲವರದ್ದಾಗಿದೆ. ಮತ್ತೆ ಕೆಲವರು ಮಂಟಪಗಳ ಗಾತ್ರ, ಎತ್ತರ, ಅಗಲ, ಬಳಕೆ ಮಾಡುವ ಕಲಾಕೃತಿಗಳು ಹಾಗೂ ಧ್ವನಿ, ಬೆಳಕಿನ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂಬುದು ಕೆಲವರ ಆಗ್ರಹವಾಗಿದೆ.

ಮಡಿಕೇರಿಯಲ್ಲಿ ದಸರಾ ದಶಮಂಟಪ‍ಗಳ ಶೋಭಾಯಾತ್ರೆ ಮುಗಿದ ಬಳಿಕ ಎಲ್ಲಿ ನೋಡಿದರಲ್ಲಿ ಅಪಾರ ಪ್ರಮಾಣದ ಕಸದ ರಾಶಿಯೇ ಕಂಡು ಬಂತು
ದಶಮಂಟಪಗಳ ಶೋಭಾಯಾತ್ರೆಯ ವೇಳೆ ಗಗನಕ್ಕೆ ಚಿಮ್ಮಿದ ಬಾನಬಿರುಸುಗಳು
ದಶಮಂಟಪಗಳ ಶೋಭಾಯಾತ್ರೆಯ ವೇಳೆ ಗಗನಕ್ಕೆ ಚಿಮ್ಮಿದ ಬಾನಬಿರುಸುಗಳು ಬಾನಂಗಳದಲ್ಲಿ ಬಿಡಿಸಿದ ಬೆಳಕಿನ ಚಿತ್ತಾರ

ಅನುದಾನವನ್ನು ಬಜೆಟ್‌ನಲ್ಲೇ ಸೇರಿಸಬೇಕು ಪ್ರತಿ ವರ್ಷವೂ ಮಡಿಕೇರಿ ದಸರೆಗಾಗಿ ಅನುದಾನ ಕೊಡಿ ಎಂದು ಸರ್ಕಾರವನ್ನು ಕೇಳಬೇಕಾಗಿದೆ. ಮೈಸೂರು ದಸರೆಯಂತೆ ಐತಿಹಾಸಿಕ ದಸರೆಯಾಗಿರುವ ಮಡಿಕೇರಿ ದಸರೆಗೆ ಪ್ರತಿ ವರ್ಷ ಬಜೆಟ್‌ನಲ್ಲೇ ಅನುದಾನ ನಿಗದಿ ಮಾಡಬೇಕು. ಮುಂದಿನ ದಸರೆ ಹೊಸ ಬೈಲ ಪ್ರಕಾರ ನಡೆಯಲಿದೆ. ಮುಖ್ಯಸಮಿತಿಯಿಂದ ಪ್ರತಿ ಉಪಸಮಿತಿಗೂ ಒಬ್ಬರು ನೇಮಕವಾಗುತ್ತಾರೆ. ಶಿಸ್ತುಬದ್ಧವಾಗಿ ನಿಯಮಗಳ ಚೌಕಟ್ಟಿಯನಲ್ಲಿ ಮುಂದಿನ ದಸರೆ ನಡೆಯಲಿದೆ

- ಚಿದ್ವಿಲಾಸ್ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಗೌರವ ಸಲಹೆಗಾರ.

ಬೈಲಾ ರಚನಾ ಕಾರ್ಯ ನಡೆದಿದೆ ಮಡಿಕೇರಿ ದಸರೆಗೆ ಸಂಬಂಧಿಸಿದಂತೆ ಬೈಲಾ ರಚನಾ ಕಾರ್ಯ ಭರದಿಂದ ನಡೆದಿದೆ. ಸದ್ಯದಲ್ಲೇ ಅದಕ್ಕೊಂದು ಅಂತಿಮ ರೂಪ ನೀಡಿ ದಸರಾ ಸಮಿತಿಯ ಮುಂದೆ ಮಂಡಿಸಲಾಗುವುದು. ಹಿರಿಯರು ಅಂಗವಿಕಲರು ಮಹಿಳೆಯರು ಮಕ್ಕಳು ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಶೋಭಾಯಾತ್ರೆ ನಡೆಸಬೇಕು. ಇದು ಹೇಗೆ ಎಂಬುದನ್ನು ಕುರಿತು ಎಲ್ಲ ಹಿರಿಯರು ಹಾಗೂ ಪ್ರಮುಖರು ಕುಳಿತು ಚರ್ಚೆ ಮಾಡಿ ಸೂಕ್ತ ಎನಿಸುವ ತೀರ್ಮಾನಗಳನ್ನು ಕೈಗೊಳ್ಳಬೇಕು

- ಟಿ.ಪಿ.ರಮೇಶ್ ದಸರಾ ಬೈಲಾ ರಚನಾ ಸಮಿತಿಯ ಸದಸ್ಯರು.

ಮಡಿಕೇರಿ ದಸರೆಯನ್ನು ಬ್ರಾಂಡಿಂಗ್ ಮಾಡಬೇಕು ಮುಖ್ಯವಾಗಿ ಮಡಿಕೇರಿ ದಸರೆಯನ್ನು ಬ್ರಾಂಡಿಂಗ್ ಮಾಡಬೇಕಿದೆ. ಉತ್ತರ ಕರ್ನಾಟಕ ಉತ್ತರ ಭಾರತದಲ್ಲಿ ಹಲವು ದೊಡ್ಡ ಉತ್ಸವಗಳು ನಡೆಯುತ್ತಿವೆ. ಅಲ್ಲಿ ಆಗದ ಸಮಸ್ಯೆಗಳು ಮಡಿಕೇರಿಯಲ್ಲಿ ಮಾತ್ರವೇ ಏಕೆ ಆಗುತ್ತದೆ ಎಂಬುದರ ಕುರಿತೂ ಚಿಂತನೆ ನಡೆಸಬೇಕು. ಒಂದು ದಸರೆ ಮುಗಿಯುತ್ತಿದ್ದಂತೆ ಮತ್ತೊಂದು ದಸರೆಗೆ ತಯಾರಾಗಬೇಕು. ಆದರೆ ಮಡಿಕೇರಿಯಲ್ಲಿ ದಸರೆಗೆ ಇನ್ನು 10 ದಿನ ಇರುವಂತೆ ತಯಾರಾಗುತ್ತಿದ್ದೇವೆ. ಯೋಜನಾಬದ್ದವಾಗಿ ಚಿಂತಿಸಿದರೆ ಖಂಡಿತವಾಗಿಯೂ ದಸರೆಯನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದು

- ಎಚ್.ಟಿ.ಅನಿಲ್ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ.

ಎಲ್‌ಇಡಿ ಪರದೆಗಳನ್ನು ಹಾಕಿರಿ ದಸರೆಯಲ್ಲಿ ಈ ಬಾರಿ ಜನಜಂಗುಳಿ ಹೆಚ್ಚಾಗಿತ್ತು. ನೂಕುನುಗ್ಗುಲು ಉಂಟಾಗಿತ್ತು ಎಂಬುದಕ್ಕೆ ಇಲ್ಲಿ ಸಿಕ್ಕಿದ ಪಾದರಕ್ಷೆಗಳೇ ಸಾಕ್ಷಿ. ಹಳೆಯ ಬಸ್‌ನಿಲ್ದಾಣ ಸೇರಿದಂತೆ ನಗರದ ಆಯಕಟ್ಟಿನ ಸ್ಥಳದಲ್ಲಿ ಎಲ್‌ಇಡಿ ಪರದೆಗಳನ್ನು ಹಾಕಿ ಪ್ರದರ್ಶನಗಳನ್ನು ನೇರ ಪ್ರಸಾರ ಮಾಡಬೇಕು. ಬನ್ನಿ ಕಡಿದ ನಂತರವೇ ಫಲಿತಾಂಶ ಘೋಷಣೆ ಮಾಡಬೇಕು.

- ಎಂ.ಪಿ.ಕೃಷ್ಣರಾಜು ದಸರಾ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ.

ಐತಿಹಾಸಿಕ ದಸರೆ ಇಂದು ಮೈಸೂರು ದಸರೆಯಂತೆ ಮಡಿಕೇರಿ ದಸರೆಯೂ ಐತಿಹಾಸಿಕ ದಸರೆ. ಇದು ಬೆಳಕಿನ ದಸರೆ. ಇದಕ್ಕೆ ಕುಂದುಂಟಾಗದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕಲಾತಂಡಗಳು ವಾದ್ಯಗೋಷ್ಠಿಗಳನ್ನು ಬಳಕೆ ಮಾಡಲಾಗಿದೆ. ನಮ್ಮ ಸಂಪ್ರದಾಯ ಆಚರಣೆಗಳಿಗೆ ಯಾವುದೇ ತೊಂದರೆ ಕೊಡಬಾರದು. ನಾಡಹಬ್ಬ ಜರುಗಲೇ ಬೇಕು.

- ಜಿ.ಸಿ.ಜಗದೀಶ್ ದಸರಾ ದಶಮಂಟಪಗಳ ಸಮಿತಿ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.