ADVERTISEMENT

ದೇಸಿ ಸಾಧಕರು | ಒಡೆದ ಮನಸ್ಸು ಕಟ್ಟುವ ಕಲಾವಿದರು

ಕೊಡಗಿನಲ್ಲಿ ಎಲೆಮರೆಯ ಕಾಯಿಯಂತಿರುವ ‘ಮಾನವತಾ’ ಕಲಾ ತಂಡ

ಕೆ.ಎಸ್.ಗಿರೀಶ್
Published 16 ಅಕ್ಟೋಬರ್ 2024, 4:35 IST
Last Updated 16 ಅಕ್ಟೋಬರ್ 2024, 4:35 IST
<div class="paragraphs"><p>ಕೊಡಗಿನ ಮಾನವತಾ ಕಲಾತಂಡದ ಕಲಾವಿದರು</p></div>

ಕೊಡಗಿನ ಮಾನವತಾ ಕಲಾತಂಡದ ಕಲಾವಿದರು

   

ಮಡಿಕೇರಿ: ಕಟ್ಟುತ್ತೇವ ನಾವು, ಕಟ್ಟುತ್ತೇವೆ ನಾವು ಕಟ್ಟೇ ಕಟ್ಟುತ್ತೇವೆ, ಒಡೆದ ಮನಸುಗಳ, ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ, ನಾವು ಮನಸ ಕಟ್ಟುತ್ತೇವ...

ವೇದಿಕೆಯ ಬದಿಯಿಂದ ಈ ಹಾಡುಗಳು ಕೇಳಿ ಬರುತ್ತಿದ್ದರೆ ಸಭಾಂಗಣದಲ್ಲಿ ಅದುವರೆಗೂ ಕೇಳಿ ಬರುತ್ತಿದ್ದ ಗುಸುಗುಸುವಿನ ಸದ್ದಡಗುತ್ತದೆ. ವೇದಿಕೆಯ ಮೇಲಿನ ಗಣ್ಯರು ಬರುವುದನ್ನೇ ನಿರೀಕ್ಷಿಸುತ್ತಿದ್ದ ಕಣ್ಣುಗಳು ಇವರತ್ತ ಹೊರಳುತ್ತವೆ. ಹಾಡು, ವಾದನ ಮುಂದುವರಿಯುತ್ತಿದ್ದಂತೆ ತಾನೇ ತಾನಾಗಿ ನೋಡುಗರ ಬಾಯಿಯೂ ಅವರಿಗೆ ಸಾಥ್ ನೀಡುತ್ತದೆ.

ADVERTISEMENT

ಹೀಗೆ, ಸೂಜಿಗಲ್ಲಿನಂತೆ ಸೆಳೆಯುವ ಕೊಡಗಿನ ಅಪರೂಪದ ತಂಡ ‘ಮಾನವತಾ’ ಕಲಾ ತಂಡ. ಇದರ ನೇತೃತ್ವ ವಹಿಸಿರುವ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಡಿ.ಎಚ್.ಶಾಂತು ಅವರು ತಬಲಾ ಮತ್ತು ಡೋಲಕ್ ವಾದಕರು.

ದೊಡ್ಡಕೊಡ್ಲಿ ಗ್ರಾಮದ ಹುಲುಕೋಡಯ್ಯ ಮತ್ತು ಲಕ್ಷ್ಮಿ ದಂಪತಿಯ ಪುತ್ರರಾದ ಇವರು ಓದಿರುವುದು ಪಿಯುಸಿ ಮಾತ್ರ. ಕಳೆದ 15 ವರ್ಷಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ದಿವಂಗತ ಡಿ.ಸಿ.ನಿರ್ವಾಣಪ್ಪ ಅವರಿಂದ ಕ್ರಾಂತಿ ಗೀತೆಗಳನ್ನು ಕಲಿತರು. ಮೊದಲಿಗೆ ದಮ್ಮಡಿ ಹೇಳಿಕೊಟ್ಟ ನಿರ್ವಾಣಪ್ಪ ಮಾರ್ಗದರ್ಶನ ನೀಡಿದರು. ಇವರೇ ಸ್ಥಾಪಿಸಿದ ಮಾನವತಾ ಕಲಾ ತಂಡಕ್ಕೆ ಶಾಂತು ಸಹ ಸೇರಿದರು. ಆಗ 8 ಮಂದಿ ಇದ್ದ ಕಲಾತಂಡದಲ್ಲಿ ಈಗ 6 ಮಂದಿ ಕಲಾವಿದರು ಇದ್ದಾರೆ.

ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜಿನ ಉಪನ್ಯಾಸಕರಾದ ಯೋಗೇಂದ್ರ, ಕೊಡ್ಲಿಪೇಟೆಯ ಪದವಿಪೂರ್ವ ಕಾಲೇಜಿನ ಸಹಶಿಕ್ಷಕ ಕಿರಣ್‌ಕುಮಾರ್, ಹೋರಾಟಗಾರರಾದ ಡಿ.ವಿ.ಜಗದೀಶ್, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ವಿನಯ್, ಅಭಿಷೇಕ್, ಪಕ್ಕವಾದ್ಯದಲ್ಲಿ ದಮ್ಮಡಿ ವಾದಕ ಮಂಜುನಾಥ್‌ ತಂಡದ ಸದಸ್ಯರಾಗಿದ್ದಾರೆ.

ಸೆ. 22ರಂದು ಮಡಿಕೇರಿಯಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಇವರ ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೊಂದು ಮೆರುಗು ತುಂಬಿತ್ತು. ಈ ವೇಳೆ ‘ಪ್ರಜಾವಾಣಿ’ಯೊಂದಿಗೆ ಕೆಲಹೊತ್ತು ಅವರು ಮಾತಿಗಿಳಿದರು.

‘ಸುಮಾರು 50ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಕ್ರಾಂತಿಗೀತೆಗಳನ್ನು ಹಾಡಿದ್ದೇವೆ. ವಿವಿಧ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಜಾನಪದ ಗೀತೆಗಳ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದೇವೆ. ಮಡಿಕೇರಿಯ ಆಕಾಶವಾಣಿಗೆ ಜಾನಪದ ವೈವಿಧ್ಯ ಕಾರ್ಯಕ್ರಮ ನೀಡಿದ್ದೇವೆ. ಹಲವು ಶಾಲೆಗಳಲ್ಲಿ ಜಾ‍ನಪದ ಗೀತೆಗಳ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದೇವೆ. ಹಾಸನ ಜಿಲ್ಲೆಯ ಆಲೂರು, ಕೆ.ಹೊಸಕೋಟೆಗಳಲ್ಲೂ ಕಾರ್ಯಕ್ರಮ ನೀಡಿದ್ದೇವೆ. ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಶನಿದೇವರ ಕಥೆ ಓದಿಸುವಂತಹ 15 ಕಾರ್ಯಕ್ರಮಗಳಲ್ಲಿ ತಬಲಾ ನುಡಿಸಿರುವೆ’ ಎಂದು ಅವರು ತಾವು ಇದುವರೆಗೂ ಪ್ರಸ್ತುತಪತಡಿಸಿದ ಕಾರ್ಯಕ್ರಮಗಳ ಪಟ್ಟಿಯನ್ನೇ ನೀಡುತ್ತಾರೆ.

ಇದೇ ವೇಳೆ ಅವರು ಇದುವರೆಗೂ ಒಂದೂ ಪ್ರಶಸ್ತಿಯೂ ನಮಗೆ ದಕ್ಕಿಲ್ಲ ಎಂಬ ಸಂಗತಿಯನ್ನು ಬೇಸರದ ಭಾವದಿಂದ ಹೇಳುತ್ತಿದ್ದಂತೆ, ‘ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಲುಮರದ ತಿಮ್ಮಕ್ಕ ಅವರ ಎದುರಿನಲ್ಲಿ ಹಾಡು ಹಾಡಿದ್ದು ನಮ್ಮ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಒಂದು’ ಎಂದು ಖುಷಿಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.