ಸೋಮವಾರಪೇಟೆ: 8 ಜನರ ಅಂತರರಾಷ್ಟ್ರೀಯ ಒಳಾಂಗಣ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಗ್ರಾಮೀಣ ಪ್ರತಿಭೆ ನಗರೂರು ಗ್ರಾಮದ ನಿವಾಸಿ ಎ.ಆಶಿಕ್ ಕ್ರಿಸ್ಟಿ ಮಿಂಚುತ್ತಿದ್ದು, ಐಪಿಎಲ್ ಟೂರ್ನಿಯಲ್ಲಿ ಆಟವಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ತಮ್ಮ ಹಿರಿಯ ಸೋದರ ಅವಿನಾಶ್ ಮತ್ತು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ಸಾಗಿದ್ದು, ಇತ್ತೀಚೆಗೆ ವೃತ್ತಿಪರ ಒಳಾಂಗಣ ಕ್ರಿಕೆಟ್ ಆಡಲು ಪ್ರಾರಂಭಿಸಿದರು. 2022-23ರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅವರ ಉನ್ನತ ಮಟ್ಟದ ಪ್ರದರ್ಶನದಿಂದ ಒಳಾಂಗಣ ತಂಡದಿಂದ ಆಯ್ಕೆಯಾದರು. ಇತ್ತೀಚೆಗೆ ನಡೆದ ಏಷ್ಯಾ ಕಪ್ 2023ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ನ್ಯೂಜಿಲೆಂಡ್ ತಂಡದ ವಿರುದ್ಧ ಮೊದಲ ಅಂತರರಾಷ್ಟ್ರೀಯ ಪಂದ್ಯವಾಡುವ ಮೂಲಕ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಗಮನ ಸೆಳೆಯುವ ಆಟವಾಡಿದ್ದಾರೆ.
1996ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ 8 ಜನ ಆಟಗಾರರ ಒಳಾಂಗಣ ಕ್ರಿಕೆಟ್ ಪ್ರಾರಂಭವಾಯಿತು. ಈ ಪಂದ್ಯದ ನಿಯಮಗಳು ಹೊರಾಂಗಣ ಕ್ರಿಕೆಟ್ ಪಂದ್ಯಕ್ಕಿಂತ ಭಿನ್ನವಾಗಿದೆ. ಹಲವು ಅಂತರರಾಷ್ಟ್ರೀಯ ಕ್ರಿಕೇಟ್ ಆಟಗಾರರು ಮೊದಲು ಇಂತಹ ಪಂದ್ಯದಲ್ಲಿ ಆಡಿದ ನಂತರ, ಸಾಮಾನ್ಯ ಕ್ರಿಕೆಟ್‌ನಲ್ಲಿ ತಮ್ಮ ದೇಶಕ್ಕಾಗಿ ಆಡಿದ್ದಾರೆ. ಸ್ಟೀವ್ ವಾ, ಮಾರ್ಕ್ ವಾ, ಮೈಕೆಲ್ ಕ್ಲಾರ್ಕ್, ಕೈಲ್ ರಿಚರ್ಡ್ ಸನ್, ಜೆಸ್ಸಿ ರೈಡರ್ ಅವರಲ್ಲಿ ಪ್ರಮುಖರು.
ಭಾರತದಲ್ಲಿ 2009ರಲ್ಲಿ ಮೊದಲ ಬಾರಿಗೆ ಈ ಕ್ರೀಡೆ ಆರಂಭವಾಯಿತು. ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದರೊಂದಿಗೆ ಏಷ್ಯಕಪ್ ಸಹ ನಡೆಯುತ್ತಿದೆ. ಇನ್ನೇನು ಒಂದೆರಡು ವರ್ಷಗಳಲ್ಲಿ ಐಪಿಎಲ್ ಮಾದರಿಯಲ್ಲಿ ಈ ಪಂದ್ಯಗಳನ್ನು ನಡೆಸಲು ಉದ್ದೇಶಿಸಿದ್ದು, ಪ್ರಾರಂಭಗೊಂಡಲ್ಲಿ ದೇಶದ ಸಾಕಷ್ಟು ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತದೆ.
ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕ್ರೀಡೆ ಜನಪ್ರಿಯತೆ ಕಾಣುತ್ತಿದ್ದು, ರಾಷ್ಟ್ರೀಯ ತಂಡದಲ್ಲೂ ಈ ರಾಜ್ಯದ ಆಟಗಾರರೇ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಒಎಲ್ವಿ ಹಾಗೂ ಸಂತ ಜೊಸೇಫರ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಾಡಿದ್ದು, ಪಿಯುಸಿಯನ್ನು ಮೈಸೂರಿನಲ್ಲಿ ಹಾಗೂ ಎಂಬಿಎ ಅನ್ನು ಬೆಂಗಳೂರಿನ ಬಿಜಿಎಸ್ ಕಾಲೇಜಿನಲ್ಲಿ ಇವರು ಮುಗಿಸಿದ್ದಾರೆ. ಈಗ ಬೆಂಗಳೂರಿನ ಟಾರ್ಗೆಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಶಿಕ್ ಕ್ರಿಸ್ಟಿ ಸಮೀಪದ ನಗರೂರು ಗ್ರಾಮದ ಎ.ಎಸ್. ಅಲೆಕ್ಸಾಂಡರ್ ಮತ್ತು ಥೆರೆಸಾ ಪುಷ್ಪಾ ಅವರ ಕಿರಿಯ ಮಗ. ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಸ್ಥಾನ ಪಡೆದು ಮಿಂಚುವ ಮಹಾದಸೆಯನ್ನಿರಿಸಿಕೊಂಡಿದ್ದು, ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಥಾನ ಗಳಿಸುವ ಮಹತ್ವಕಾಂಕ್ಷೆ ಹೊಂದಿದ್ದು ಅದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದೇನೆ.
–ಎ.ಆಶಿಕ್ ಕ್ರಿಸ್ಟಿ ಕ್ರೀಡಾ ಸಾಧಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.