ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ : ಗುಣಾತ್ಮಕ ಫಲಿತಾಂಶದಲ್ಲಿ ಕೊಡಗಿಗೆ ಮೊದಲ ಸ್ಥಾನ; ಬಿಇಒ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 5:03 IST
Last Updated 24 ಜೂನ್ 2024, 5:03 IST
ಕುಶಾಲನಗರ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಸಭೆಯನ್ನು ಬಿಇಓ ಎಸ್.ಭಾಗ್ಯಮ್ಮ ಉದ್ಘಾಟಿಸಿದರು. ಸಹಾಯಕ ನಿರ್ದೇಶಕ ಕಾಳನಾಯಕ್, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಬಿ.ಆರ್.ಸಿ., ಜಿ.ಎಂ.ಹೇಮಂತ್, ಸಿ.ಟಿ.ಸೋಮಶೇಖರ್, ಬಿ.ಎನ್.ಪುಷ್ಪ, ಮಂಜೇಶ್, ಸದಾಶಿವಯ್ಯ ಪಲ್ಲೇದ್ ಇತರರು ಇದ್ದಾರೆ.
ಕುಶಾಲನಗರ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಸಭೆಯನ್ನು ಬಿಇಓ ಎಸ್.ಭಾಗ್ಯಮ್ಮ ಉದ್ಘಾಟಿಸಿದರು. ಸಹಾಯಕ ನಿರ್ದೇಶಕ ಕಾಳನಾಯಕ್, ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಬಿ.ಆರ್.ಸಿ., ಜಿ.ಎಂ.ಹೇಮಂತ್, ಸಿ.ಟಿ.ಸೋಮಶೇಖರ್, ಬಿ.ಎನ್.ಪುಷ್ಪ, ಮಂಜೇಶ್, ಸದಾಶಿವಯ್ಯ ಪಲ್ಲೇದ್ ಇತರರು ಇದ್ದಾರೆ.   

ಕುಶಾಲನಗರ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕೊಡಗು ಜಿಲ್ಲೆಯು ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿ ಉತ್ತಮ ಸಾಧನೆ ತೋರಿದ್ದು, ಇದಕ್ಕಾಗಿ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿ- ಪೋಷಕ ವೃಂದವನ್ನು ಅಭಿನಂದಿಸುತ್ತೇನೆ ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಭಾಗ್ಯಮ್ಮ ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಶೈಕ್ಷಣಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಗುಣಾತ್ಮಕ ಫಲಿತಾಂಶ ಗಳಿಸುವಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ. ಗುಣಾತ್ಮಕ ಫಲಿತಾಂಶಕ್ಕೆ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪರಿಶ್ರಮ ಬಹಳ ಮುಖ್ಯವಾಗಿದೆ’ ಎಂದರು.

ADVERTISEMENT

‘ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಉತ್ತಮ ಸ್ಥಾನ ಗಳಿಸುವಲ್ಲಿ ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಸಮನ್ವಯತೆಯಿಂದ ಶ್ರಮಿಸಬೇಕು ಎಂದು ಬಿಇಓ ಭಾಗ್ಯಮ್ಮ ಸಲಹೆ ನೀಡಿದರು.

‌‌‘ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು- ಸಂಯಮದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳನ್ನು ಕಲಿಸಬೇಕು’ ಎಂದರು.

ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕಾಳನಾಯಕ್ ಮಾತನಾಡಿ, ‘ಶಾಲೆಗಳಲ್ಲಿ ಮಕ್ಕಳಿಗೆ  ಪೌಷ್ಟಿಕಾಂಶವುಳ್ಳ ಆಹಾರ ನೀಡುವುದು ಸೇರಿದಂತೆ ಸ್ವಚ್ಛತೆ, ನೈರ್ಮಲ್ಯ ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ‘ಎಲ್ಲರೂ ಒಗ್ಗಟ್ಟಿನಿಂದ ಸೇರಿ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದರು.

ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮಹದೇವಸ್ವಾಮಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್, ಶಿಕ್ಷಣ ಇಲಾಖೆಯ ವಿವಿಧ ಶೈಕ್ಷಣಿಕ ಮಾಹಿತಿಗಳನ್ನು ನೀಡಿದರು.

ಶಾಲೆಯ ಉಪ ಪ್ರಾಂಶುಪಾಲ ವೈ.ಜೆ. ಪರಮೇಶ್ವರಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್. ಪಲ್ಲೇದ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಎನ್.ಪುಷ್ಪ, ಎಂ.ವಿ. ಮಂಜೇಶ್, ಬಿಆರ್‌ಪಿ ಎಸ್.ಎಸ್.ಶಿವಕುಮಾರ್, ಇಸಿಒ ಶೇಖರ್ ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಇದ್ದರು. ಇತ್ತೀಚೆಗೆ ನಿವೃತ್ತರಾದ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್ ಅವರನ್ನು ಬಿಇಒ ಭಾಗ್ಯಮ್ಮ ಸನ್ಮಾನಿಸಿದರು. ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.