ADVERTISEMENT

ಕೊಡಗು | ಸೊರಗಿದ ನಾಲೆಗಳು; ಪ್ರಯೋಜನಕ್ಕೆ ಬಾರದ ಜಲಾಶಯಗಳು

ಕೊಡಗು ಜಿಲ್ಲೆಯಲ್ಲಿ 2 ಜಲಾಶಯವಿದ್ದರೂ ದೀಪದ ಬುಡದಲ್ಲಿ ಕತ್ತಲು ಎಂಬಂತ ಸ್ಥಿತಿ!

ರಘು ಹೆಬ್ಬಾಲೆ
Published 24 ಜೂನ್ 2024, 5:26 IST
Last Updated 24 ಜೂನ್ 2024, 5:26 IST
ಚಿಕ್ಲಿಹೊಳೆ ಜಲಾಶಯದಿಂದ ಹಾದು ಹೋಗಿರುವ ನಾಲೆ ಹಾನಿಯಾಗಿರುವುದು
ಚಿಕ್ಲಿಹೊಳೆ ಜಲಾಶಯದಿಂದ ಹಾದು ಹೋಗಿರುವ ನಾಲೆ ಹಾನಿಯಾಗಿರುವುದು   

ಕೊಡಗು ಜಿಲ್ಲೆಯಲ್ಲಿ ಜಲಾಶಯಗಳ ನೀರಿನಿಂದ ವ್ಯವಸಾಯ ಮಾಡುವುದು ಅತಿ ಕಡಿಮೆ. ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣತೀರ್ಥ, ಕುಮಾರಧಾರ, ಬರಪೊಳೆ, ಕೀರೆಹೊಳೆ, ಹಟ್ಟಿಹೊಳೆ...ಹೀಗೆ ಹತ್ತಾರು ನದಿ, ಉಪನದಿಗಳು ಜನ್ಮತಳೆದು ಹರಿದರೂ ಇಲ್ಲಿ ಅವುಗಳಿಗೆ ಪ್ರಮುಖ ಜಲಾಶಯಗಳನ್ನು ನಿರ್ಮಿಸಿಲ್ಲ. ಸದ್ಯ, ಹಾರಂಗಿ ಮತ್ತು ಚಿಕ್ಲಿ ಹೊಳೆ ಜಲಾಶಯಗಳು ಮಾತ್ರವೇ ಜಿಲ್ಲೆಯಲ್ಲಿದೆ. ಈ ಎರಡೂ ಜಲಾಶಯಗಳಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಾಗಿಲ್ಲ ಎಂಬ ಕೂಗು ಇದೆ. ಇದರ ನೀರು ಬಹುಪಾಲು ಪಕ್ಕದ ಮೈಸೂರು, ಹಾಸನ ಜಿಲ್ಲೆಗಳಿಗೆ ಹರಿಯುತ್ತದೆ. ಆದಾಗ್ಯೂ, ಈ ಎರಡೂ ಜಲಾಶಯಗಳಿಂದ ಜಿಲ್ಲೆಯಲ್ಲಿ ನೀರು ಹರಿಯುವ ನಾಲೆಗಳ ಸ್ಥಿತಿ ಹೇಗಿದೆ ಎಂಬುದರತ್ತ ಒಂದು ಸ್ಥೂಲ ನೋಟ ಇಲ್ಲಿದೆ.

ಕಾಲುವೆಗಳ ಕೊನೆವರೆಗೆ ನೀರು ಮರೀಚಿಕೆ

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯಗಳು ಮಾತ್ರವೇ ಇದೆ. ಆದರೆ, ಇವುಗಳಿಂದ ಹೊರಡುವ ನಾಲೆಗಳು ಇನ್ನಷ್ಟು ಅಭಿವೃದ್ಧಿಗಾಗಿ ಕಾದಿವೆ. ಚಿಕ್ಲಿಹೊಳೆಗೆ ಹೋಲಿಸಿದರೆ ಹಾರಂಗಿಯ ನಾಲೆಗಳು ತುಸು ಉತ್ತಮ ಗುಣಮಟ್ಟದಿಂದ ಕೂಡಿವೆ.

ADVERTISEMENT

ಹುಲುಗುಂದ ಗ್ರಾಮದಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ 67 ಮೀಟರ್‌ ಎತ್ತರದ ಅಣೆಕಟ್ಟೆ ಕಟ್ಟಲಾಗಿದ್ದು, ಇದು ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ. ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಕೆ.ಆರ್.ನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸೇರಿದಂತೆ 1.5 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರು ಪೂರೈಸಲಾಗುತ್ತಿದೆ.

ಜಲಾಶಯದ ಎಡದಂಡೆ ನಾಲೆಯನ್ನು ಸುಮಾರು ₹ 50 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದೆ. ಆದರೆ, ಉಪ ಕಾಲುವೆಗಳ ಅಭಿವೃದ್ಧಿ ಸಮರ್ಪಕವಾಗಿ ನಡೆದಿಲ್ಲ. ಉಪ ಕಾಲುವೆ ಹಾಗೂ ಕಿರು ಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕಟ್ಟಕಡೆಯ ರೈತರ ಜಮೀನುಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ರೈತರ ಪಾಲಿಗೆ ದೂರವಾದ ಜಲಾಶಯ 

ಕಳೆದ ನಾಲ್ಕು ದಶಕಗಳ ಹಿಂದೆ ಸ್ಥಾಪನೆಗೊಂಡ ಚಿಕ್ಲಿಹೊಳೆ ಜಲಾಶಯ ರೈತರ ಪಾಲಿಗೆ ಉಪಯೋಗಕ್ಕೆ ಇಲ್ಲದಂತೆ ಆಗಿದೆ.

ಈ ಜಲಾಶಯವನ್ನು ಕೃಷಿ ಉದ್ದೇಶದಿಂದ 1982ರಲ್ಲಿ ನಿರ್ಮಿಸಲಾಗಿದೆ. ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಕಾವೇರಿ ನೀರಾವರಿ ನಿಗಮ ವ್ಯಾಪ್ತಿಗೆ ಈ ಜಲಾಶಯ ಸೇರಿದ್ದು, 404 ಮೀಟರ್ ಉದ್ದ ಹಾಗೂ 29.3 ಮೀಟರ್ ಎತ್ತರದ ಅಣೆಕಟ್ಟೆಯಲ್ಲಿ ಸುಮಾರು ಅರ್ಧ ಟಿಎಂಸಿ ನೀರು ಸಂಗ್ರಹವಾಗುತ್ತದೆ.

ಇದರ ಕಾಲುವೆಗಳು ಗಿಡ, ಮುಳ್ಳಿನ ಕಂಟಿಗಳಿಂದ ತುಂಬಿವೆ. ಕಾಂಕ್ರೀಟ್ ಕಿತ್ತುಹೋಗಿದೆ. ಮೆಟ್ಟಿಲುಗಳು ಒಡೆದ ಕಂದಕಗಳು ಸೃಷ್ಟಿಯಾಗಿವೆ. ಜೂನ್ ಅಂತ್ಯ ಬಂದರೂ ಕಾಲುವೆಗಳಲ್ಲಿ ಬೆಳೆದಿರುವ ಗಿಡ–ಗಂಟಿ ತೆರವುಗೊಳಿಸಿಲ್ಲ. ಹಲವೆಡೆ ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ಮುಚ್ಚಿ ಹೋಗಿವೆ. ನೀರು ನಿಲ್ಲಿಸಿದ ಸಂದರ್ಭದಲ್ಲಿ ದುರಸ್ತಿ ಮಾಡಿಸುವ ಇಚ್ಛಾಶಕ್ತಿ ತೋರದ ಕಾರಣ ನೀರು ಬಿಡುವ ವೇಳೆ ನಿತ್ಯ ಹರಿಸುವ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಿನಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.  ಅಷ್ಟೇ ಅಲ್ಲ ಈ ಜಲಾಶಯ ಸುತ್ತಮುತ್ತಲಿನ ವಿರೂಪಾಕ್ಷಪುರ, ರಸೂಲ್ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಸುಮಾರು 2 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿತ್ತು. ರೈತರ ಕೃಷಿ ಭೂಮಿಗೆ ನೀರೊದಗಿಸುವ ಉದ್ದೇಶದಿಂದ ಜಲಾಶಯವನ್ನು ನಿರ್ಮಿಸಲಾಗಿದ್ದರೂ, ರೈತರ ಕೃಷಿ ಭೂಮಿಗೆ ಅದು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಸಕಾಲದಲ್ಲಿ ನಾಲೆಗಳಿಗೆ ನೀರು ಹರಿಸದೇ ರೈತರು ಪ್ರತಿವರ್ಷ ನೀರಾವರಿ ಇಲಾಖೆ ಮೇಲೆ ಒತ್ತಡ ಹಾಕಿ ನೀರು ಪಡೆಯುವಂತಹ ಸ್ಥಿತಿ ಇದೆ. ಈ ಜಲಾಶಯ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆ ಆಗುತ್ತಿಲ್ಲ ಎಂಬ ದೂರು ರೈತರಿಂದ ಕೇಳಿ ಬರುತ್ತಿದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್ ಗೇಟ್ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ಹರಿದು ಹೋಗುತ್ತದೆ. ಮಳೆ ಸುರಿದು ಜಲಾಶಯ ತುಂಬಿದಾಗ ಹೆಚ್ಚಾದ ನೀರು ವೃತ್ತಾಕಾರದ ಬಾವಿಯಲ್ಲಿ ಧುಮ್ಮುಕ್ಕತ್ತದೆ.

ಅಸಮರ್ಪಕ ನಿರ್ವಹಣೆ

ಕಾಲುವೆಯ ಕಾಂಕ್ರೀಟ್ ಸಂಪೂರ್ಣ ಹಾಳಾಗಿದೆ. ಕಾಲುವೆಯ ಅಲ್ಲಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಕಾಲುವೆಗಳ ಪಕ್ಕದಲ್ಲಿ ಹೇರಳವಾಗಿ ಗಿಡಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೊನೆಯ ಹಂತದ ರೈತರ ಜಮೀನುಗಳಿಗೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಕಿರುನಾಲೆ ಅಥವಾ ಉಪ ಕಾಲುವೆಗಳನ್ನು ನಿಯಮಿತ ಹಾಗೂ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ರೈತರು ಮಳೆಯನ್ನೇ ಆಶ್ರಯಿಸಬೇಕಾದ ಅಥವಾ ನೀರು ಇದ್ದಲ್ಲಿ ಪಂಪ್‌ಸೆಟ್ ಬಳಸಬೇಕಾದ ಅನಿವಾರ್ಯತೆ ಇದೆ ಎಂದು ರೈತ ಗಣೇಶ್ ಹೇಳಿದರು.

ನಾಲ್ಕು ದಶಕಗಳ ಹಿಂದೆಯೇ ಜಲಾಶಯ ಅಧಿಕೃತವಾಗಿ ಕಾರ್ಯಾರಂಭ ಮಾಡಿದರೂ, ನಿಗದಿತ ಪ್ರದೇಶಕ್ಕೆ ಇನ್ನೂ ಕೂಡ ನೀರು ತಲುಪಿಸಲು ಸಾಧ್ಯವಾಗಿಲ್ಲ ಎಂದು ರೈತರು ದೂರುತ್ತಾರೆ.

ಜಾಣಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳು

ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯ ನಾಲೆಗಳು ನಾಲ್ಕು ದಶಕ ಕಳೆದರೂ ದುರಸ್ತಿ ಭಾಗ್ಯ ಕಂಡಿಲ್ಲ.

ಉಪನಾಲೆಗೆ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದುವರೆಗೂ ಯಾವೊಬ್ಬ ಜನಪ್ರತಿನಿಧಿಗಳೂ ನಾಲೆಗಳನ್ನು ದುರಸ್ತಿ ಮಾಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿದ್ದಾರೆ.

‘ಜಲಾಶಯ ನಿರ್ವಹಣೆ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂಪಾಯಿ ಹಣ ಇಲ್ಲಿ ಖರ್ಚು ಮಾಡಿದರೂ ಅಭಿವೃದ್ಧಿ ಮಾತ್ರ ಆಗಿಲ್ಲ. ಎದ್ದು ಕಾಣುವಂತೆ ಸುಣ್ಣ ಬಣ್ಣ ಹೊಡೆಯುವುದನ್ನು ಬಿಟ್ಟರೆ ಬೇರೇನೂ ಇಲ್ಲಿ ನಡೆದಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಕಚೇರಿ ಸ್ಥಳಾಂತರ ಅಭಿವೃದ್ಧಿಗೆ ಹಿನ್ನೆಡೆ 

ಈ ಹಿಂದೆ ಜಲಾಶಯದ ಪಕ್ಕದಲ್ಲಿಯೇ ಕಾವೇರಿ ನೀರಾವರಿ ನಿಗಮದ ಕಚೇರಿ ಇದ್ದುದ್ದರಿಂದ ಎಲ್ಲವೂ ಸಮರ್ಪಕವಾಗಿ ನಡೆಯುತ್ತಿತ್ತು. ಆದರೆ, 2006ರಲ್ಲಿ ಚಿಕ್ಲಿಹೊಳೆ ಜಲಾಶಯಕ್ಕೆ ಸಂಬಂಧಿಸಿದ ಎಲ್ಲಾ ಕಚೇರಿಗಳನ್ನು ಹಾರಂಗಿ ಜಲಾಶಯದ ಬಳಿಗೆ ವರ್ಗಾಯಿಸಲಾಯಿತು. ಹಾಗಾಗಿ, ಅಧಿಕಾರಿಗಳಿಗೆ ಇಲ್ಲಿನ‌ ಸಮಸ್ಯೆ ಅರ್ಥವಾಗುತ್ತಲೇ ಇಲ್ಲ. ಜೊತೆಗೆ ನಾಲೆಗಳು ಕೂಡ ದುಸ್ಥಿತಿಯಲ್ಲಿದ್ದು, ಅವುಗಳನ್ನು ದರಸ್ತಿ ಪಡಿಸದ ಕಾರಣದಿಂದ‌ ನೀರು ಪೋಲಾಗುತ್ತಿದೆ. ಹೀಗೆ ಹತ್ತು ಹಲವು ಸಮಸ್ಯೆಗಳ ಅಗರವಾಗಿರುವ ಜಲಾಶಯದತ್ತ ಸಂಬಂಧಿಸಿದವರು ಗಮನಹರಿಸಿ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು.

ರಂಗಸಮುದ್ರ ಬಳಿಯ ನಾಲೆಯಲ್ಲಿ ಹೂಳು ಹಾಗೂ ಗಿಡಗಂಟೆಗಳು ಬೆಳೆದಿರುವುದು
ಗೊಂದಿಬಸವನಹಳ್ಳಿಗೆ ಹೋಗುವ ಕಾಲುವೆಯಲ್ಲಿ ಹೂಳು ತುಂಬಿರುವುದು
ಹಾರಂಗಿ ನಾಲೆ ಆಧುನೀಕರಣ ಕಾಮಗಾರಿ ಕೈಗೊಂಡಿರುವುದು

ಪ್ರತಿಕ್ರಿಯೆಗಳು ಚಿಕ್ಲಿಹೊಳೆ ಜಲಾಶಯದಿಂದ ಪ್ರಯೋಜನ ಇಲ್ಲ ಚಿಕ್ಲಿಹೊಳೆ ಜಲಾಶಯದಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲವಾಗಿದೆ. ಮಳೆಗಾಲದಲ್ಲೇ ಈ ಭಾಗದ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಇನ್ನೂ ಬೇಸಿಗೆ ಬೆಳೆಗೆ ನೀರು ಕನಸಿನ ಮಾತಾಗಿದೆ. ನಿರ್ವಹಣೆ ಇಲ್ಲದೆ ಕಾಲುವೆಗಳು ಹಾಳಾಗಿ ಹೋಗಿವೆ. ಈ ನೀರಾವರಿ ಯೋಜನೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

-ಆರ್.ಕೆ.ಚಂದ್ರು ಗ್ರಾಮ ಪ‍ಂಚಾಯಿತಿ ಸದಸ್ಯ ರಂಗಸಮುದ್ರ.

ನಿರ್ಲಕ್ಷ್ಯದಿಂದ ಅಭಿವೃದ್ಧಿ ಇಲ್ಲ ಚಿಕ್ಲಿಹೊಳೆ ಜಲಾಶಯ ಕೃಷಿಕರಿಗಂತೂ ಪ್ರಯೋಜನ ಇಲ್ಲದಂತಾಗಿದೆ. ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಲು ಅವಕಾಶವಿದ್ದರೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಜಲಾಶಯದಲ್ಲಿ ತುಂಬಿರುವ ಹೂಳು ತೆಗೆದು ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಎರಡು ಬೆಳೆಗೆ ನೀರು ಪೂರೈಸಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಲಾಶಯದ ಅಭಿವೃದ್ಧಿಯೂ ಇಲ್ಲ ರೈತರ ಅಭಿವೃದ್ಧಿಯೂ ಇಲ್ಲದಂತೆ ಆಗಿದೆ.

-ಕುಡೆಕಲ್ ಚಿದಾನಂದ ಗುಡ್ಡೆಹೊಸೂರು.

ಕೊನೆ ಭಾಗಕ್ಕೆ ಸರಿಯಾಗಿ ಹರಿಯದ ನೀರು ಚಿಕ್ಲಿಹೊಳೆ ಜಲಾಶಯದಿಂದ ಮಳೆಗಾಲದಲ್ಲಿ ಒಂದು ಬೆಳೆಗೂ ಸರಿಯಾಗಿ ನೀರು ಪೂರೈಸುತ್ತಿಲ್ಲ. ನಂಜರಾಯಪಟ್ಟಣದ ಕೊನೆ ಭಾಗದ ರೈತರು ನೀರಿನ ಕೊರತೆಯಿಂದ ಕೃಷಿ ಮಾರುಕಟ್ಟೆ ಮಾಡಲು ತೊಂದರೆ ಉಂಟಾಗಿದೆ. ಕೊನೆ ಭಾಗದ ರೈತರ ಜಮೀನಿಗೆ ಈಗಾಗಲೂ ನೀರು ಸರಿಯಾಗಿ ಹರಿಯುತ್ತಿಲ್ಲ. ಕಳೆದ ವರ್ಷ ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಪಂಚಾಯತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯಲಾಯಿತು. ಈ ವರ್ಷ ರಂಗಸಮುದ್ರ ವ್ಯಾಪ್ತಿಯಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಇಲಾಖೆ ವತಿಯಿಂದ ನೀರು ಬಿಡುವ ಸಮಯದಲ್ಲಿ ಹೂಳು ತೆಗೆಯಲು ಮುಂದಾಗುತ್ತಾರೆ. ಆದರೆ ಗುತ್ತಿಗೆದಾರ ಅಲ್ಪಸಲ್ಪ ಹೂಳು ತೆಗೆದು ಕೆಲಸ‌ ಮುಗಿಸುತ್ತಾರೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದ ಕಾಲುವೆಗಳು ಕೂಡ ಅಭಿವೃದ್ಧಿ ಕಾಣದಂತೆ ಆಗಿವೆ.

-ಸಿ.ಎಲ್.ವಿಶ್ವ ಅಧ್ಯಕ್ಷ ನಂಜರಾಯಪಟ್ಟಣ ಗ್ರಾಮ ಪಂಚಾಯತಿ.

ಹೂಳು ತೆಗೆಯಲಾಗುವುದು ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯ ನಾಲೆಗಳ ಹೂಳು ತೆಗೆಯಲು ಹಾಗೂ ಗಿಡಗಂಟೆ ತೆರವುಗೊಳಿಸಲು ₹ 6 ಲಕ್ಷ ಅನುದಾನ ಮಂಜೂರು ಆಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಜುಲೈ ಮೊದಲ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಜಲಾಶಯದಿಂದ ನೀರು ಬಿಡುವ ಮುನ್ನ ನಾಲೆಗಳ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿ ಬಗ್ಗೆ ಹಿಂದಿನ ಅಧೀಕ್ಷಕ ಎಂಜಿನಿಯರ್ ಅವರ ಮೇಲೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ನಾಲೆಗಳ ಅಭಿವೃದ್ಧಿಗೆ ಸ್ವಲ್ಪ ಹಿನ್ನೆಡೆಯಾಗಿದೆ.

-ಪುಟ್ಟಸ್ವಾಮಿ ಕಾರ್ಯಪಾಲಕ ಎಂಜಿನಿಯರ್ ನೀರಾವರಿ ಇಲಾಖೆ ಹಾರಂಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.