ADVERTISEMENT

ನಕಲಿ ವೈನ್, ಜೇನು ಮಾರಾಟ ನಿಲ್ಲಿಸಿ: ಪ್ರವಾಸೋದ್ಯಮದ ಪಾಲುದಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 4:24 IST
Last Updated 25 ಅಕ್ಟೋಬರ್ 2024, 4:24 IST
ಮಡಿಕೇರಿ ಹೊರವಲಯದ ಕ್ಲಬ್ ಮಹೇಂದ್ರ ರೆಸಾರ್ಟ್‌ನಲ್ಲಿ ಗುರುವಾರ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಸಂವಾದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು.
ಮಡಿಕೇರಿ ಹೊರವಲಯದ ಕ್ಲಬ್ ಮಹೇಂದ್ರ ರೆಸಾರ್ಟ್‌ನಲ್ಲಿ ಗುರುವಾರ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಸಂವಾದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು.   

ಮಡಿಕೇರಿ: ನಕಲಿಯಾಗಿರುವ ವೈನ್, ಸಾಂಬಾರ ಪದಾರ್ಥಗಳು, ಜೇನು ಹಾಗೂ ಇನ್ನಿತರ ಪದಾರ್ಥಗಳ ಮಾರಾಟದಿಂದ ಕೊಡಗಿಗೆ ಕೆಟ್ಟ ಹೆಸರು ಬರುತ್ತಿದ್ದು, ಇಂತಹ ನಕಲಿ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬ ಒಕ್ಕೊರಲ ಒತ್ತಾಯ ಜಿಲ್ಲೆಯ ಪ್ರವಾಸೋದ್ಯಮದ ಪಾಲುದಾರರಿಂದ ವ್ಯಕ್ತವಾಯಿತು.

ಇಲ್ಲಿನ ಹೊರವಲಯದ ಕ್ಲಬ್ ಮಹೇಂದ್ರ ರೆಸಾರ್ಟ್‌ನಲ್ಲಿ ಗುರುವಾರ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ಮಂದಿ ಇದೇ ಒತ್ತಾಯ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಹಾಗೂ ಸಂಬಂಧಪ‍ಟ್ಟ ಇನ್ನಿತರ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವ ನಕಲಿ ಪದಾರ್ಥಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ, ‘ಕೊಡಗಿನ ಪ್ರವಾಸೋದ್ಯಮದಲ್ಲಿ ಪರಿಸರವೇ ಪ್ರಧಾನ ಆಕರ್ಷಣೆ. ಪರಿಸರವನ್ನು ಉಳಿಸಿಕೊಂಡೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ಒಂದು ವೇಳೆ ಪರಿಸರ ನಾಶ ಮಾಡಿ ಇಲ್ಲವೇ ಧಕ್ಕೆ ತಂದು ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ಅದು ತಿರುಗುಬಾಣವಾದೀತು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಒಬ್ಬರೇ ವ್ಯಕ್ತಿ ಹಾಗೂ ಒಂಟಿ ಮಹಿಳೆಯ ಪ್ರವಾಸಕ್ಕೆ ಹೊರಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಒಬ್ಬರೇ ಬರುವ ಪ್ರವಾಸಿಗರಿಗೆ ಭದ್ರತೆ ಒದಗಿಸುವ ಕೆಲಸ ಮಾಡಬೇಕು ಎಂದರು.

ಪ್ರತಿ 60 ಕಿ.ಮೀ ಒಂದು ಶೌಚಾಲಯ, ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಮಿನಿಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗೂಗಲ್‌ ಸರ್ಚ್‌ನಲ್ಲಿ ಕೊಡಗಿಗೆ 3ನೇ ಸ್ಥಾನ ಇದೆ. ಇದರ ಮಹತ್ವ ಅರಿತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಇಲ್ಲಿ ರೂಪಿಸಬೇಕು ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ‘ಕಾಫಿ ಟೇಬಲ್ ಬುಕ್’ನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲೆ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ವೆಬ್‍ಸೈಟ್ ಮೂಲಕ ಮಾಹಿತಿ ದೊರೆಯಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.

ಸಂವಾದ ಸಂದರ್ಭದಲ್ಲಿ ಮಾತನಾಡಿದ ಮೋಂತಿ ಗಣೇಶ್ ಅವರು, ಕೊಡಗು ಜಿಲ್ಲೆಯಲ್ಲಿ 2003ರಲ್ಲಿ ಹೋಂಸ್ಟೇಗಳ ಪರಿಕಲ್ಪನೆ ಆರಂಭವಾಯಿತು. ಜಿಲ್ಲೆಯಲ್ಲಿ 2,200 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿವೆ ಎಂದರು.

ಮಡಿಕೇರಿಯಲ್ಲಿ ನೆಹರು ಮಂಟಪ, ಗದ್ದಿಗೆ, ವ್ಯೂ ಪಾಯಿಂಟ್‍ಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕು. ರಸ್ತೆ ಬದಿ ಕಸ ಬಿಸಾಡುವುದನ್ನು ತಡೆಯಬೇಕು. ಮಾಂದಲ್ ಪಟ್ಟಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಬೇಕು ಎಂದರು.

ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಕೆ.ಶ್ಯಾಮರಾಜ್, ಕರ್ನಾಟಕ ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷ ಜಿ.ಕೆ.ಶೆಟ್ಟಿ, ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಸದಸ್ಯ ಅಯ್ಯಪ್ಪ ಸೋಮಯ್ಯ, ಬೆಂಗಳೂರು ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಸಂಸ್ಥೆಯ ಸಲಹೆಗಾರ ಜಿ.ಚಿದ್ವಿಲಾಸ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಸಂಸ್ಥೆಯ ಕಾರ್ಯದರ್ಶಿ ನಾಜೀರ್, ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಸಂಸ್ಥೆಯ ಅಧ್ಯಕ್ಷ ವಸಂತ, ಛಾಯಾ ನಂಜಪ್ಪ, ಕರ್ನಾಟಕ ಪ್ಲಾಂಟರ್ ಅಸೋಷಿಯೇಷನ್‍ನ ಸದಸ್ಯ ಮೋಹನ್ ದಾಸ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮಾಲೋಚಕ ಜತಿನ್ ಬೋಪಣ್ಣ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಭಾಗವಹಿಸಿದದರು.

ಮಡಿಕೇರಿ ಹೊರವಲಯದ ಕ್ಲಬ್ ಮಹೇಂದ್ರ ರೆಸಾರ್ಟ್‌ನಲ್ಲಿ ಗುರುವಾರ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರವಾಸೋದ್ಯಮ ಪಾಲುದಾರರು
ಸಂವಾದ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಭಿಕರು ಕೊಡಗಿನಲ್ಲಿ ಜವಾಬ್ದಾರಿ ಪ್ರವಾಸೋದ್ಯಮಕ್ಕೆ ಸರ್ವರ ಒತ್ತಾಯ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಾಹಿತಿ ಕೇಂದ್ರ ತೆರೆಯಬೇಕು. ಪ್ರವಾಸಿಗರ ಸಂಚಾರಕ್ಕೆ ಮಿನಿಬಸ್‌ಗಳನ್ನು ಒದಗಿಸಬೇಕು
ಜಿ.ಚಿದ್ವಿಲಾಸ್ ಜಿಲ್ಲಾ ಹೋಟೆಲ್ ಅಸೋಸಿಯೇಷನ್‌ನ ಸಲಹೆಗಾರ.
ಕೊಡಗು ಜಿಲ್ಲೆಗೆ ವಾರಾಂತ್ಯದಲ್ಲಿ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಸಜ್ಜಿತವಾದ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು
ನಾಗೇಂದ್ರ ಪ್ರಸಾದ್ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ.
ಕೊಡಗಿನ ಪ್ರವಾಸೋದ್ಯಮವನ್ನು ಒಂದು ಬ್ರಾಂಡಿಂಗ್ ಮಾಡಬೇಕು. ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಮಾಹಿತಿ ದೊರೆಯಬೇಕು
ಎಚ್.ಟಿ. ಅನಿಲ್ ಪ್ರವಾಸೋದ್ಯಮ ಸಂಘದ ಗೌರವ ಸಲಹೆಗಾರ.
ಕೊಡಗಿನ ಕರಕುಶಲನ ವಸ್ತುಗಳನ್ನು ಮಾರಾಟ ಮಾಡುವಂತಹ ‘ಕೊಡಗು ಹಾತ್’ ಅನ್ನು ಸ್ಥಾಪಿಸಬೇಕು. ಇದು ವಿಶೇಷ ಆಕರ್ಷಣೆಯಾಗಲಿದೆ
ಛಾಯಾ ನಂಜಪ್ಪ ಉದ್ಯಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.