ಮಡಿಕೇರಿ: ಎಂಬಿಎ ಪದವೀಧರರೊಬ್ಬರು ಕುಕ್ಕುಟ್ಟೋದ್ಯಮಿಯಾಗಿ ಯಶಸ್ಸು ಕಂಡ ನಿದರ್ಶನ ಇಲ್ಲಿನ ಪೊನ್ನಂಪೇಟೆ ತಾಲ್ಲೂಕಿನಲ್ಲಿದೆ.
ಪೊನ್ನಂಪೇಟೆ ಸಮೀಪದ ಬಲ್ಯಮಂಡೂರು ರಸ್ತೆಯಲ್ಲಿ ಇವರು ಶುರು ಮಾಡಿರುವ ಎಂ.ಜಿ.ಫಾರಂ ಇಂತಹದ್ದೊಂದು ಯಶಸ್ಸಿನ ಕಥೆ ಹೇಳುತ್ತಿದೆ. ಇಲ್ಲಿ ಬರೋಬರಿ 500ಕ್ಕೂ ಹೆಚ್ಚು ನಾಟಿಕೋಳಿಗಳು ಮಾತ್ರವಲ್ಲ ವೈವಿಧ್ಯಮಯ ಕೋಳಿಗಳಿವೆ. ಇದರೊಂದಿಗೆ 8 ಮೇಕೆಗಳನ್ನು ಸಾಕಿದ್ದು, ಮೇಕೆ ಫಾರಂ ಮಾಡುವ ಉದ್ದೇಶ ಹೊಂದಿದ್ದಾರೆ. ಮೊಲಗಳನ್ನೂ ಸಾಕಿದ್ದಾರೆ. ಮತ್ತೂ ವಿಶೇಷ ಎಂದರೆ, ಇಷ್ಟೊಂದು ದೊಡ್ಡ ಫಾರಂನ್ನು ತಮ್ಮ ತಂದೆ ಹಾಗೂ ತಾಯಿಯ ಸಹಾಯದೊಂದಿಗೆ ತಾವೊಬ್ಬರೇ ಮುನ್ನಡೆಸುತ್ತಿದ್ದಾರೆ.
ಪೊನ್ನಂಪೇಟೆ ಪಟ್ಟಣದ ವಾಸಿಗಳಾದ ಗಣಪತಿ ಮತ್ತು ದಮಯಂತಿ ಅವರ ಪುತ್ರರಾದ ಮಂಜು ಎಂಬಿಎ ಓದಿದ ಬಳಿಕ ತಮ್ಮ ಮನಸ್ಸಿನ ಇಚ್ಛೆಯಂತೆ ಕೋಳಿ ಫಾರಂ ಆರಂಭಿಸಿದರು. ಮೊದಲಿಗೆ 50 ಕೋಳಿಗಳನ್ನು ತಂದರು. ಈಗ ಇವರ ಬಳಿ 500ಕ್ಕೂ ಹೆಚ್ಚಿನ ನಾಟಿಕೋಳಿಗಳಿವೆ.
ನಾಟಿಕೋಳಿಗಳ ಜೊತೆಗೆ ಗಿರಿರಾಜ, ಫ್ಯಾನ್ಸಿ ಕೋಳಿಗಳು, ಟರ್ಕಿ ಕೋಳಿಗಳು, ಗಿಣಿ ಕೋಳಿಗಳೂ ಇವರ ಬಳಿ ಇವೆ. ಇವುಗಳಿಂದ ನಿತ್ಯ ಇವರು 90ರಿಂದ 100 ನಾಟಿಕೋಳಿ ಮೊಟ್ಟೆಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಜು, ‘ಮಾರುಕಟ್ಟೆಯಲ್ಲಿ ನಾಟಿಕೋಳಿಗಳು ಹಾಗೂ ನಾಟಿಕೋಳಿ ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಷ್ಟು ಉತ್ಪಾದನೆಯಾದರೂ ಬೇಡಿಕೆಯನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ಯುವಕರು ಈ ಕುಕ್ಕುಟ್ಟೋದ್ಯಮದತ್ತ ಬಂದರೆ ಒಳ್ಳೆಯ ಲಾಭ ಇದೆ’ ಎಂದು ಹೇಳಿದರು.
ಕೋಳಿಗಳಿಗೆ ಇವರು ಭತ್ತ, ಫೀಡ್ಸ್ ಕೊಡುವುದರ ಜೊತೆಗೆ ಅವುಗಳನ್ನು ತಮ್ಮದೇ ವಿಶಾಲ ಫಾರಂನಲ್ಲಿ ಮುಕ್ತವಾಗಿ ಮೇಯಲು ಬಿಡುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಮುಕ್ತವಾಗಿ ಮೇಯುವ ಇವು ಹೆಸರಿಗೆ ತಕ್ಕಂತೆ ನಾಟಿಕೋಳಿಗಳೇ ಎನಿಸಿವೆ. ಇದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಇವರ ಬಳಿ ವರ್ಷದ ಎಲ್ಲ ದಿನಗಳೂ ಕೋಳಿಗಳು ಲಭ್ಯವಿದೆ. ಗರಿಷ್ಠ 4–5 ಕೆ.ಜಿಯವರೆಗೆ ತೂಗುವ ಕೋಳಿಗಳೂ ಸಹ ಇವರ ಬಳಿ ಸಿಗುತ್ತವೆ. ಕೋಳಿಮರಿಗಳ ಜೊತೆಗೆ ನಿತ್ಯ ಮೊಟ್ಟೆಗಳೂ ಲಭ್ಯ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಕೃಷಿ ಇಲಾಖೆ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಮೈತ್ರಿ, ‘ಮಂಜು ಅವರ ಫಾರಂನ್ನು ಗುರುವಾರವಷ್ಟೇ ನೋಡಿದೆವು. ನಿಜಕ್ಕೂ ಇವರು ಅಚ್ಚುಕಟ್ಟಾದ ಕುಕ್ಕುಟ್ಟೋದ್ಯಮ ನಡೆಸುತ್ತಿದ್ದಾರೆ. ಯುವ ತಲೆಮಾರಿಗೆ ಆದರ್ಶ ಎನಿಸಿದ್ದಾರೆ’ ಎಂದು ಹೇಳಿದರು.
ಸಂಪರ್ಕಕ್ಕೆ ಮೊ: 9880359606
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.