ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ನವರಾತ್ರಿ ಹಬ್ಬಕ್ಕೆ ಚಾಲನೆ ದೊರೆತಿದೆ.
ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ ದೇವಿಗೆ ನೈವೇದ್ಯ ಪೂಜೆಯೊಂದಿಗೆ ಉತ್ಸವ ಆರಂಭಗೊಂಡಿತು. ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ದೇವಿಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ, ದೀಪಾರಾಧನೆ ನಡೆಯಿತು. ಸಂಜೆ ವಿಶೇಷ ಪೂಜೆ, ವಿಧಿ ವಿಧಾನಗಳು ನಡೆದವು. ದೇವಾಲಯದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು.
ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಕಾರ್ಯದರ್ಶಿ ಪಿ.ಸಿ.ಮೋಹನ, ಪದಾಧಿಕಾರಿಗಳು ಇದ್ದರು.
ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದಲ್ಲಿ ನವರಾತ್ರಿ ಮೊದಲ ದಿನ ದೇವಿಯರಿಗೆ ವಿಶೇಷ ಪೂಜೆ, ಮಹಾ ಪೂಜೆ, ವೀಳ್ಯದೆಲೆ ಅರ್ಚನೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಸಮೀಪದ ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ 69ನೇ ವರ್ಷದ ನವರಾತ್ರಿ ಅಂಗವಾಗಿ ಗುರುವಾರ ಗಣಹೋಮದೊಂದಿಗೆ ಚಾಲನೆ ನೀಡಲಾಯಿತು. ಶುಕ್ರವಾರ ಸಂಜೆ ಕುಶಾಲನಗರದ ಪ್ರಗತಿ ಕೇಡನಾ ಸಂಗೀತ ಕಲಾ ಕೇಂದ್ರದ ವತಿಯಿಂದ ಭರತನಾಟ್ಯ, ಅ.5 ರಂದು ಸಂಜೆ ಕಂಬಿಬಾಣೆ ಶ್ರೀರಾಮ ಮಕ್ಕಳ ಕುಣಿತ, ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಅ.6ರ ಭಾನುವಾರದಂದು ಬೆಳಿಗ್ಗೆ ದುರ್ಗಾಹೋಮ ನಡೆಯಲಿದ್ದು, ಸಂಜೆ ಝೇಂಕಾರ್ ಆರ್ಕೇಸ್ಟ್ರಾ ತಂಡದಿಂದ ರಸಮಂಜರಿ ಆಯೋಜಿಸಲಾಗಿದೆ.
ಅ.7ರ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 8ರ ಸಂಜೆ ಕೊಡಗರಹಳ್ಳಿ ಶ್ರೀಬೈತೂರಪ್ಪ ಭಜನಾ ಮಂಡಳಿ ಮಾಯೆದಾ ನಿರೆಲ್ ತುಳು ನಾಟಕ, ಅ.9ರಂದು ಓಂ ಶಕ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಅ.10ರ ಸಂಜೆ ಸಾಮೂಹಿಕ ದುರ್ಗಾ ದೀಪ ನಮಸ್ಕಾರ ಪೂಜೆ, ಅ.11ರ ಸಂಜೆ ವಾಹನಪೂಜೆ ಮತ್ತು ಅ.12ರಂದು ರಾತ್ರಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.
ಕೊಡಗರಹಳ್ಳಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯ ಮೊದಲ ದಿನ ವಿಶೇಷ ಪೂಜೆಗಳು ನಡೆದವು. ಶ್ರೀರಂಗಪೂಜೆ, ಪಂಚಾಮೃತ ಅಭಿಷೇಕಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.