ಸುಂಟಿಕೊಪ್ಪ: ಸುಂಟಿಕೊಪ್ಪದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂತ ಅಂತೋಣಿ ದೇವಾಲಯದ ಧರ್ಮ ಗುರು ರೆ.ಫಾ.ವಿಜಯಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಸೆಲ್ವರಾಜ್ ಹಾಗೂ ಎಲ್ಲ ಶಿಕ್ಷಕರು ಆಕರ್ಷಕ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದರು. ಪಾಠ ಮಾತ್ರವಲ್ಲ, ನೃತ್ಯಕ್ಕೂ ಸೈ ಎಂದು ವಿದ್ಯಾರ್ಥಿಗಳ ಮುಂದೆ ಸಾಬೀತು ಪಡಿಸಿದರು. ಗುರುಗಳ ನೃತ್ಯವನ್ನು ನೋಡಿದ ಪುಟಾಣಿ ಮಕ್ಕಳು ಪ್ರೋತ್ಸಾಹಿಸಿದರು.
ಶಿಕ್ಷಕರ ನೃತ್ಯದ ನಂತರ ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ನೃತ್ಯ ಎಲ್ಲರನ್ನು ಮನರಂಜಿಸಿತು.
ಇದಾದ ನಂತರ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, ಓಟದ ಸ್ಪರ್ಧೆ, ಚೆಂಡು ಊದಿ ತಳ್ಳುವುದು, ಬೆಲೂನಿನಲ್ಲಿ ವಿವಿಧ ಬಗೆಯ ಆಟಗಳು, ಚಿತ್ರಕಲೆ ಇನ್ನಿತರ ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ಶಾಲೆಯ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಾದಾಪುರ ಶಾಲೆ: ಸಮೀಪದ ಮಾದಾಪುರದ ಎಸ್‌ಜೆಎಂ ಶಾಲೆಯಲ್ಲೂ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆ, ಆಸ್ಪತ್ರೆ, ಬ್ಯಾಂಕ್, ಆಟೊ ನಿಲ್ದಾಣಗಳಿಗೆ ಕರೆದುಕೊಂಡು ಹೋಗಿ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಪ್ರಿಯ, ಶಿಕ್ಷಕರಾದ ನಿವೇದಿತಾ, ಭವ್ಯ, ಜೋರ, ದೀಪಿಕಾ, ಧನ್ಯ, ಅಂಕಿತ, ಆದಿರಾ, ಸಂಜಯ್ ಹಾಗೂ ಶಾಲಾ ಆಡಳಿತ ಮಂಡಳಿಯ ಅನಿಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.