ಮಡಿಕೇರಿ: ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಕಣ್ಮರೆಯಾದ ಉಳಿದ ಇಬ್ಬರ ಪತ್ತೆಗಾಗಿ ನಡೆಯುತ್ತಿದ್ದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಪತ್ನಿ ಶಾಂತ ಆಚಾರ್, ಸಹಾಯಕ ಅರ್ಚಕ ಶ್ರೀನಿವಾಸ್ ಅವರು ಕಣ್ಮರೆಯಾಗಿ 16 ದಿನವಾದರೂ ಸುಳಿವು ಸಿಕ್ಕಿಲ್ಲ. ಮಳೆ, ಮಂಜಿನ ವಾತಾವರಣದ ನಡುವೆ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಇಬ್ಬರಿಗೆ ಸಂಬಂಧಪಟ್ಟ ವಸ್ತುಗಳು ಮಾತ್ರ ಪತ್ತೆಯಾಗಿದ್ದು ಬಿಟ್ಟರೆ ಯಾವುದೇ ಮಾಹಿತಿ ದೊರೆಯದ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಗಸ್ಟ್ 6ರಂದು ಗಜಗಿರಿ ಬೆಟ್ಟ ಕುಸಿದು ಐವರು ಕಣ್ಮರೆ ಆಗಿದ್ದರು. ಅಲ್ಲಿದ್ದ ಅರ್ಚಕರ ಎರಡು ಮನೆಗಳೂ ನೆಲಸಮವಾಗಿದ್ದವು. ಆಗಸ್ಟ್ 8ರಂದು ಮನೆಯಿದ್ದ ಸ್ಥಳದಲ್ಲೇ ಆನಂದ ತೀರ್ಥರ ಮೃತದೇಹ ಪತ್ತೆಯಾಗಿತ್ತು. 11ರಂದು ನಾರಾಯಣ ಆಚಾರ್ ಅವರು ಶವವಾಗಿ ಪತ್ತೆಯಾಗಿದ್ದರೆ, 15ರಂದು ಮತ್ತೊಬ್ಬ ಸಹಾಯಕ ಅರ್ಚಕ ರವಿಕಿರಣ್ ಭಟ್ ಅವರ ಮೃತದೇಹ ಪತ್ತೆಯಾಗಿತ್ತು.
ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಘೋಷಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ. ಕಳೆದ ವರ್ಷವೂ ತೋರ ಗ್ರಾಮದಲ್ಲಿ ಬೆಟ್ಟ ಕುಸಿತದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರೂ ಕೆಲವರ ಸುಳಿವು ಸಿಕ್ಕಿರಲಿಲ್ಲ. ರಾಜ್ಯ ಸರ್ಕಾರವು ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.