ಮಡಿಕೇರಿ: ತಲಕಾವೇರಿಗೆ ಭೇಟಿ ನೀಡಿದ ಅಪಾರ ಜನಸ್ತೋಮವು ಕೊಡಗು ಏಕೀಕರಣ ರಂಗ ಹಾಗೂ ವಾಲ್ನೂರು ಎಸ್ಟೇಟ್ ಅಣ್ಣಾಮಲೈ ಉಮಾ ಅವರು ವಿತರಿಸಿದ ಪ್ರಸಾದ ಸೇವಿಸಿತು.
ತಲಕಾವೇರಿ ದೇಗುಲದಲ್ಲೇ ಕೊಡಗು ಏಕೀಕರಣ ರಂಗದಿಂದ ವ್ಯವಸ್ಥಿತವಾಗಿ ಅನ್ನದಾನ ನಡೆಯಿತು. ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತ ಜನರು ಪ್ರಸಾದ ಸ್ವೀಕರಿಸಿದರು. ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಭಾತ್ ಸೇರಿದಂತೆ ಅನೇಕ ಬಗೆಯ ಪ್ರಸಾದಗಳು ಅಲ್ಲಿದ್ದವು.
ತಲಕಾವೇರಿ ದೇಗುಲದ ಹೊರಭಾಗದಲ್ಲಿರುವ ಬೆಂಗಳೂರಿನ ಶ್ರೀ ಕೈಲಾಸ ಆಶ್ರಮ ಟ್ರಸ್ಟ್ ಶಾಖೆಯಲ್ಲೂ ಅಪಾರ ಸಂಖ್ಯೆಯ ಜನರು ಪ್ರಸಾದ ಸ್ವೀಕರಿಸಿದರು. ಇಲ್ಲಿ ವಾಲ್ನೂರು ಎಸ್ಟೇಟ್‌ನ ಅಣ್ಣಾಮಲೈ ಮತ್ತು ಉಮಾ ಅವರು ಕಳೆದ 53 ವರ್ಷಗಳಿಂದಲೂ ಪ್ರಸಾದ ವಿತರಣೆ ಮಾಡುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ‘ಇದೇ ರೀತಿಯ ಮಠದ ಸೇವಾಕಾರ್ಯ ಕಾಶಿ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಇದೆ. ಇಂದು ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು’ ಎಂದು ಹೇಳಿದರು.
ಭಾಗಮಂಡಲದಲ್ಲಿ ಗಜಾನನ ಯುವಕ ಸಂಘ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.