ADVERTISEMENT

ಕೊಡಗು: ಶಾಸ್ತ್ರೀಯವಾಗಿ ಕಲಿಯದಿದ್ದರೂ ಆಲಿಸಿ ಹಾಡುಗಾರ್ತಿಯಾದ ಶಿಕ್ಷಕಿ

ಕಟ್ಟೇಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಚ್.ಪಿ.ತೇಜಾವತಿ

ಕೆ.ಎಸ್.ಗಿರೀಶ್
Published 23 ಅಕ್ಟೋಬರ್ 2024, 6:44 IST
Last Updated 23 ಅಕ್ಟೋಬರ್ 2024, 6:44 IST
ಹಾಡು ಹಾಡುತ್ತಿರುವ ಎಚ್.ಪಿ.ತೇಜಾವತಿ
ಹಾಡು ಹಾಡುತ್ತಿರುವ ಎಚ್.ಪಿ.ತೇಜಾವತಿ   

ಮಡಿಕೇರಿ: ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ಆದರೂ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ಪಿ.ತೇಜಾವತಿ.

ಜನಪದಗೀತೆ, ಭಾವಗೀತೆ, ಭಕ್ತಿಗೀತೆ, ಕೀರ್ತನೆಗಳು, ವಚನಗಳು ಹಾಗೂ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಇವರು ಆಗಸ್ಟ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಉದ್ಯೋಗಕ್ಕೆ ಸೇರಿದ್ದು 2016ರಲ್ಲಿ. 2017ರಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಇವರ ಪ್ರತಿಭೆಗೆ ಹಿಡಿದ ಕನ್ನಡಿ ಎನಿಸಿದೆ.

ADVERTISEMENT

ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇದ್ದರೂ ಹಾಡುಗಾರ್ತಿಯಾಗಿರುವ ತೇಜಾವತಿ, ಶಾಸ್ತ್ರೀಯ ಸಂಗೀತವನ್ನು ಕೇಳಿ, ಸತತ ಅಭ್ಯಾಸ ಮಾಡಿದ್ದಾರೆ. ಹೀಗಾಗಿ, ಅವರು ಶಾಸ್ತ್ರೀಯ ಸಂಗೀತದ ಲಘು ಸಂಗೀತವನ್ನೂ ಹಾಡಬಲ್ಲರು.

ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಸಮೀಪದ ಹೆಬ್ಬುಲಸೆ ಗ್ರಾಮದವರಾದ ಇವರ ತಂದೆ ಎಚ್.ಬಿ.ಪುಟ್ಟಯ್ಯ ಹಾಗೂ ತಾಯಿ ಹೂವಮ್ಮ. ತಂದೆ ನಾಟಕ ಕಲಾವಿದರಾಗಿದ್ದರು. ಮಾತ್ರವಲ್ಲ, ರಂಗಗೀತೆಗಳನ್ನು ಹಾಡುತ್ತಿದ್ದರು. ಇವರ ಪ್ರೋತ್ಸಾಹದಿಂದಲೇ ನಾನು ಹಾಡಲು ಶುರುಮಾಡಿದೆ ಎಂದು ತೇಜಾವತಿ ‘ಪ್ರಜಾವಾಣಿ’ ಜೊತೆ ತಮ್ಮ ಮಾತುಗಳನ್ನು ಹಂಚಿಕೊಂಡರು.

‘ಅಂಗನವಾಡಿಯಲ್ಲಿದ್ದಾಗ ಶಿಕ್ಷಕಿ ಸಾವಿತ್ರಿ ಎಂಬುವವರು ಹಾಡುವುದಕ್ಕೆ ಪ್ರೋತ್ಸಾಹ ನೀಡಿದರು. ಇದರಿಂದ ಶಾಲಾ ದಿನಗಳಲ್ಲೇ ನಾನು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದೆ. ಕಾಲೇಜು ದಿನಗಳಲ್ಲಿ ರೇಡಿಯೊ ಕಾರ್ಯಕ್ರಮವನ್ನೂ ನೀಡಿದ್ದೆ’ ಎಂದು ಅವರು ಹೇಳುತ್ತಾರೆ.

ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿಯೂ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. 2017ರಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದಿದ್ದರು. ಹಾಡಿನ ಜೊತೆಗೆ ಇವರು ಜನಪದ ನೃತ್ಯದಲ್ಲೂ ಭಾಗಿಯಾಗುತ್ತಾರೆ.

‘ಶಾಸ್ತ್ರೀಯವಾಗಿ ಕಲಿಯಲಿಲ್ಲ ಎಂಬ ಕೊರಗು ಬೇಡ. ಅವಕಾಶ ಸಿಕ್ಕರೆ ಶಾಸ್ತ್ರೀಯವಾಗಿ ಹಾಡು ಕಲಿಯಬಹುದು. ಒಂದು ವೇಳೆ ಸಿಗದೇ ಹೋದರೆ ಚಿಂತಿಸಿ ಫಲವಿಲ್ಲ. ಅದರ ಬದಲು, ಸತತವಾಗಿ ಅಭ್ಯಾಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂಬುದು ಇವರ ಅನುಭವದ ಮಾತು.

ಇಲ್ಲಿಯವರೆಗೂ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಯ ಕೋಟೆಯ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಿಕಿಯಾಗಿದ್ದರು. ನಂತರ, ಅದೇ ತಾಲ್ಲೂಕಿನ ಕನ್ನಮಂಗಲಪಾಳ್ಯದಲ್ಲೂ ಇವರು ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಆಗಸ್ಟ್‌ 31ರಿಂದ ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.

ತಾವು ಕೆಲಸ ಮಾಡಿದ ಶಾಲೆಗಳಲ್ಲಿ ಪಾಠದ ಜೊತೆಗೆ ಹಾಡನ್ನೂ ಮಕ್ಕಳಿಗೆ ಕಲಿಸುತ್ತಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರೂ ಪ್ರೌಢಶಾಲೆಯ ಮಕ್ಕಳಿಗೆ ಹಾಡಿನ ಕುರಿತು ತರಬೇತಿ ನೀಡಲು ಇವರನ್ನೇ ಆಹ್ವಾನಿಸುತ್ತಿದ್ದರು. ಅನೇಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಮಕ್ಕಳು ಭಾಗಹಿಸುವ ಪ್ರತಿಭಾ ಕಾರಂಜಿ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ಕಲೋತ್ಸವದಲ್ಲಿ ಇವರು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

‘ಈ ಎಲ್ಲವೂ ನನ್ನ ಕುಟುಂಬದ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು, ನನಗೆ ಪಾಠ ಹೇಳಿದ ಶಿಕ್ಷಕರ ಪ್ರೋತ್ಸಾಹದಿಂದ ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.