ADVERTISEMENT

ಕುಶಾಲನಗರ | ಏ.17ಕ್ಕೆ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಹಾಸನ, ಮೈಸೂರು ಜಿಲ್ಲೆಯ ಗಡಿಭಾಗದ ಗ್ರಾಮಗಳಿಂದ ಆಗಮಿಸುವ ಭಕ್ತರು

ರಘು ಹೆಬ್ಬಾಲೆ
Published 16 ಏಪ್ರಿಲ್ 2024, 6:15 IST
Last Updated 16 ಏಪ್ರಿಲ್ 2024, 6:15 IST
ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ವರ ದೇವಾಲಯದ ವಾರ್ಷಿಕ ರಥೋತ್ಸವಕ್ಕೆ ಸಿದ್ಧಗೊಳ್ಳತ್ತಿರುವ ತೇರು
ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ವರ ದೇವಾಲಯದ ವಾರ್ಷಿಕ ರಥೋತ್ಸವಕ್ಕೆ ಸಿದ್ಧಗೊಳ್ಳತ್ತಿರುವ ತೇರು   

ಕುಶಾಲನಗರ: ಉತ್ತರ ಕೊಡಗಿನ ಪವಿತ್ರ ಕಾವೇರಿ ನದಿಯ ದಂಡೆಯಲ್ಲಿರುವ ಕಣಿವೆ ಗ್ರಾಮದಲ್ಲಿ ಏ. 17ರಂದು (ಬುಧವಾರ) ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದ್ದು, ದೇವಸ್ಥಾನ ಸಮಿತಿಯಿಂದ ಭರದ ಸಿದ್ಧತೆ ನಡೆದಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಯುಗಾದಿ ಹಬ್ಬ ಕಳೆದು 7 ದಿನಕ್ಕೆ ಬ್ರಹ್ಮ ರಥೋತ್ಸವ ನಡೆಯುವುದು ಸಂಪ್ರದಾಯ. ರಥೋತ್ಸವವು ಅಂದು ಮಧ್ಯಾಹ್ನ 12.30ಕ್ಕೆ ಜರುಗಲಿದ್ದು, ಜಿಲ್ಲೆಯ ಜನರೂ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆ ಗಡಿಭಾಗದ ಗ್ರಾಮಗಳಿಂದಲೂ ಅಪಾರ ಭಕ್ತಾದಿಗಳು ಆಗಮಿಸಲಿದ್ದಾರೆ.

ಹೆಬ್ಬಾಲೆ ಬಸವೇಶ್ವರ ದೇವಸ್ಥಾನ ಸಮಿತಿ ಅವರು ಕಾಶಿಯಿಂದ ತೀರ್ಥವನ್ನು ತರಿಸಿ ಅದನ್ನು ಅಡ್ಡಪಲ್ಲಕ್ಕಿ ಮೂಲಕ ತಂದು ಕಣಿವೆ ರಾಮಲಿಂಗೇಶ್ವರನಿಗೆ ಪೂಜೆ, ಅಭಿಷೇಕ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ADVERTISEMENT
ಇಲ್ಲಿ ಕಾವೇರಿ ನದಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ಶ್ರೀರಾಮ ಲಕ್ಷ್ಮಣ ಹಾಗೂ ಆಂಜನೇಯ ಅವರ ಪಾದ ಸ್ಪರ್ಶಗೊಂಡ ಈ ಸ್ಥಳ ಶ್ರೇಷ್ಠವಾಗಿದೆ.
ಎಚ್.ಆರ್.ರಾಘವೇಂದ್ರ ಆಚಾರ್, ಪ್ರಧಾನ ಅರ್ಚಕರು

ಐತಿಹಾಸಿಕ ಹಿನ್ನೆಲೆ: ದಕ್ಷಿಣಗಂಗೆ ಕಾವೇರಿ ನದಿಯ ದಂಡದ‌‌ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಬಗ್ಗೆ ಐತಿಹ್ಯವಿದೆ.

ರಾಮಾಯಣದಲ್ಲಿ ಸೀತೆ ಅಪಹರಣಗೊಂಡ ಸಂದರ್ಭ ಸೀತೆಯನ್ನು ಹುಡುಕಿಕೊಂಡು ಆಂಜನೇಯ ಮತ್ತು ಲಕ್ಷ್ಮಣನೊಂದಿಗೆ ಬಂದ ಶ್ರೀರಾಮ ಇಲ್ಲಿನ ರಮಣೀಯ ದೃಶ್ಯವನ್ನು ನೋಡಿ, ಇಲ್ಲಿಯೇ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು ಎಂದು ಹೇಳಲಾಗುತ್ತದೆ. ಇದೇ ವೇಳೆ ಇಲ್ಲಿನ ನದಿ ದಡದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರ ಮಹರ್ಷಿ ಶ್ರೀರಾಮನಿಗೆ ಆಜ್ಞೆ ಮಾಡಿ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಆಂಜನೇಯನನ್ನು‌ ಶ್ರೀರಾಮ ಕಾಶಿಗೆ ಕಳುಹಿಸುತ್ತಾನೆ. ಆದರೆ, ಆಂಜನೇಯ ಶಿವಲಿಂಗ ತರುವುದು ವಿಳಂಬವಾದ ಕಾರಣ ಶ್ರೀರಾಮ ಅಲ್ಲಿಯೇ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜೆಗೆ ಅನುವು ಮಾಡಿಕೊಟ್ಟು ಅಲ್ಲಿಂದ ತೆರಳಿದ ಎನ್ನುವ ಪ್ರತೀತಿಯೂ ಇದೆ.

ಈ ಕಾರಣದಿಂದಾಗಿ ಕಣಿವೆ ದೇವಸ್ಥಾನದಲ್ಲಿರುವ ಲಿಂಗವನ್ನು ‘ಮರಳುಲಿಂಗ’ ಎಂದೇ ಕರೆಯಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಆರ್.ರಾಘವೇಂದ್ರ ಆಚಾರ್ ಹೇಳುತ್ತಾರೆ.

ಆಂಜನೇಯನೂ ಶಿವಲಿಂಗವನ್ನು ತಂದಿದ್ದರಿಂದ ಆ ಲಿಂಗವನ್ನು ಪಕ್ಕದಲ್ಲೇ ಇರುವ ಲಕ್ಷ್ಮಣೇಶ್ವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಯಿತು ಎಂದೂ ಹೇಳಲಾಗುತ್ತದೆ.

ಗ್ರಾಮದಲ್ಲಿ ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ತೇರನ್ನು ಎಳೆಯುತ್ತೇವೆ. ಸುತ್ತಮುತ್ತಲ ಗ್ರಾಮಗಳು ಹೊರ ಜಿಲ್ಲೆಗಳಿಂದಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
ಕೆ.ಎನ್.ಸುರೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ
ಕುಶಾಲನಗರ ಸಮೀಪದ ಪವಿತ್ರ ಕಾವೇರಿ ನದಿ ದಂಡೆಯಲ್ಲಿರುವ ರಾಮಲಿಂಗೇಶ್ವರ ದೇವಾಲಯ
ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಕರ್ಷಣೀಯ ತೂಗು ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.