ಮಡಿಕೇರಿ: ಹೋಬಳಿ ಮಟ್ಟದಲ್ಲಿ ಸಮುದಾಯ ಕೃಷಿಕ ಗುಂಪುಗಳ ಆರಂಭ, ಗುಣಮಟ್ಟ ಹೆಚ್ಚಳಕ್ಕೆ ಕ್ರಮ, 2 ವರ್ಷದ ಡಿಪ್ಲೊಮಾ ಪದವಿ, ಕೆಫೆ ನಿರ್ವಾಹಕ ತರಬೇತಿ... ಹೀಗೆ ಕಾಫಿ ಮಂಡಳಿ ಮುಂದಿರುವ ವಿವಿಧ ಬಗೆಯ ಯೋಜನೆಗಳನ್ನು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್ ಬೆಳೆಗಾರರ ಮುಂದಿಟ್ಟರು.
ಇಲ್ಲಿನ ಖಾಸಗಿ ಹೋಟೆಲ್ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ನಡೆದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 145ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಮೊದಲಿಗೆ ಕಾಫಿ ಗುಣಮಟ್ಟ ಹೆಚ್ಚಳ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡ ಅವರು, ‘ಹೋಬಳಿ ಮಟ್ಟದಲ್ಲಿ 100 ಬೆಳೆಗಾರರನ್ನು ಒಳಗೊಂಡ ಗುಂಪನ್ನು ರಚಿಸಿ, ಅವರು ಬೆಳೆದ ಕಾಫಿಯ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವುದು. ಒಂದು ವೇಳೆ ಗುಣಮಟ್ಟ ಕಡಿಮೆ ಇದೆ ಎಂದು ಕಂಡುಬಂದಲ್ಲಿ ಅದರ ಹೆಚ್ಚಳಕ್ಕೆ ಏನೇನು ಮಾಡಬೇಕು ಎಂಬ ಕುರಿತು ಮಂಡಳಿಯು ತಜ್ಞರ ಮೂಲಕ ಬೆಳೆಗಾರರಿಗೆ ಮಾಹಿತಿ ನೀಡಲಿದೆ. ಈ ಮೂಲಕ ಗುಣಮಟ್ಟ ಹೆಚ್ಚಳವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ದೊರಕಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.
ಇನ್ನು ಕಾಫಿ ಮಂಡಳಿಯಿಂದ ಶೀಘ್ರದಲ್ಲೇ 2 ವರ್ಷಗಳ ಅವಧಿಯ ಡಿಪ್ಲೊಮಾ ಪದವಿ ನೀಡಲಾಗುತ್ತದೆ. ಜೊತೆಗೆ, ತೋಟಗಳ ಸೂಪರ್‌ವೈಸರ್‌ಗಳು, ವ್ಯವಸ್ಥಾಪಕ ಹುದ್ದೆಗೂ ತರಬೇತಿ ನೀಡಲಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಈ ತರಬೇತಿ ಪಡೆದುಕೊಂಡು ಕಾಫಿ ತೋಟಗಳಲ್ಲಿ ಉದ್ಯೋಗ ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದರು.
ಇತ್ತೀಚೆಗೆ ಕಾಫಿ ಕೆಫೆಗಳು ಹೆಚ್ಚುತ್ತಿವೆ. ಮುಂದಿನ 1 ವರ್ಷದಲ್ಲಿ ದೇಶದಲ್ಲಿ 3 ಸಾವಿರ ಕಾಫಿ ಕೆಫೆಗಳು ಆರಂಭಗೊಳ್ಳುವ ಸಾಧ್ಯತೆಗಳಿವೆ. ಇಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಅಗತ್ಯತೆ ಇದೆ. ಹೀಗಾಗಿ, ಮಂಡಳಿಯು ಕೆಫೆ ನಿರ್ವಾಹಕ ತರಬೇತಿ ನೀಡಲು ನಿರ್ಧರಿಸಿದೆ. ಮಹಿಳೆಯರು, ಯುವಜನರು ಈ ಬಗೆಯ ತರಬೇತಿ ಪಡೆದುಕೊಂಡು ಕಾಫಿ ತೋಟಗಳಿಗೆ ಬರುವ ಸಂದರ್ಶಕರು ಹಾಗೂ ಪ್ರವಾಸಿಗರಿಗೆ ಗುಣಮಟ್ಟದ ಸ್ವಾದಿಷ್ಟಮಯ ಕಾಫಿ ತಯಾರಿಸಿ ನೀಡಬಹುದು ಎಂದು ತಿಳಿಸಿದರು.
ಕೊಡಗಿನಲ್ಲಿ ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಒಂದು ವೇಳೆ ಮಾಲೀಕರು ತಮ್ಮ ತಮ್ಮ ತೋಟಗಳನ್ನು ಪರಿಸರ ಸ್ನೇಹಿಯಾಗಿ ಉಳಿಸಿಕೊಂಡಲ್ಲಿ ಖಂಡಿತವಾಗಿಯೂ ಕಾಫಿ ಪ್ರವಾಸೋದ್ಯಮದಿಂದ ಲಾಭ ಗಳಿಸಬಹುದು ಎಂದರು.
ಹವಾಮಾನ ಬದಲಾವಣೆ ಎನ್ನುವುದು ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಗತ್ತಿನಲ್ಲೇ ಹವಾಮಾನ ಬದಲಾವಣೆ ಉಂಟಾಗುತ್ತಿದೆ. ಇದಕ್ಕೆ ತಕ್ಕಂತೆ ತೋಟಗಳನ್ನೂ ನಿರ್ವಹಿಸಿದ್ದಲ್ಲಿ ಹವಾಮಾನ ಬದಲಾವಣೆಯಿಂದ ಆಗುವ ನಷ್ಟವನ್ನು ಆದಷ್ಟು ತಗ್ಗಿಸಬಹುದು. ಹೆಚ್ಚಿನ ಮಳೆ ಬಿದ್ದ ಸಂದರ್ಭದಲ್ಲಿ ಉತ್ತಮ ಚರಂಡಿ ವ್ಯವಸ್ಥೆ, ಕಡಿಮೆ ಮಳೆಯಾದಾಗ ಮಳೆ ಕೊಯ್ಲು ಮೊದಲಾದ ವೈಜ್ಞಾನಿಕ ಕ್ರಮಗಳನ್ನು ತೋಟಗಳ ಮಾಲೀಕರು ತಮ್ಮ ತಮ್ಮ ತೋಟಗಳಲ್ಲಿ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಮುಂದೆ ಕಾರ್ಮಿಕರ ಕೊರತೆ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ, ಪ್ರತಿ ಮಾಲೀಕರೂ ತಮ್ಮ ತಮ್ಮ ತೋಟದ ಶೇ 60ರಷ್ಟು ಭಾಗವನ್ನಾದರೂ ಯಾಂತ್ರೀಕರಣಕ್ಕೆ ಒಳಪಡಿಸಬೇಕು. ಹಾಗೆಯೇ, ಮಾರುಕಟ್ಟೆಯಲ್ಲಿ ಶೇ 5ರಷ್ಟು ಇರುವ ಸ್ಪೆಷಾಲಿಟಿ ಕಾಫಿ ಶೇ 40ರಷ್ಟು ಭಾಗವನ್ನು ಆವರಿಸುವ ಸಾಧ್ಯತೆ ಇದೆ. ಹಾಗಾಗಿ, ಸ್ಪೆಷಾಲಿಟಿ ಕಾಫಿಯತ್ತ ಗಮನ ಕೊಡುವುದು ಒಳಿತು ಎಂದರು.
ಈ ವರ್ಷ ಕಾಫಿ ಉತ್ಪಾದನೆ ಹೆಚ್ಚಾಗಿದೆ. ಆದರೆ, ಈಚೆಗೆ ಸುರಿದ ಅಕಾಲಿಕ ಮಳೆಯು ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ವಿಷಯ ತಜ್ಞರಾದ ಡಾ.ರಾಜಾ ವಿಜಯ್ ಕುಮಾರ್, ಬ್ರಿಟನ್‌ನ ಕೃಷಿ ಪರಿಣಿತ ಮಾರ್ಕ್ ತ್ರಿಸ್ನಿ, ಕೆ.ಸುಧೀಂದ್ರ ಅವರು ಕಾಫಿ ಕೃಷಿಗೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಹಲವು ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಕೆ.ಬೆಳ್ಳಿಯಪ್ಪ, ಉಪಾಧ್ಯಕ್ಷ ಎ.ಎ.ಚಂಗಪ್ಪ, ಕರ್ನಾಟಕ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಾಜೀವ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಬಿ.ಡಿ.ಮಂಜುನಾಥ್, ಮೋಹನ್‌ದಾಸ್, ಕೆ.ಪಿ.ಉತ್ತಪ್ಪ ಭಾಗವಹಿಸಿದ್ದರು.
ಟಾಟಾ ಕಾಫಿ ಸಂಸ್ಥೆಯ ತೋಟಗಳಲ್ಲಿ ಪರಿಸರ ಸ್ನೇಹಿ ಪಲ್ಪರ್‌ಗಳು ಮಳೆ ಕೊಯ್ಲು ವ್ಯವಸ್ಥೆಯನ್ನು ನಿರ್ವಹಿಸಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.ಪಿ.ಎ.ಮಂದಣ್ಣ, ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
ಅಸೋಸಿಯೇಷನ್ ವತಿಯಿಂದ ಬೆಳೆಗಾರರಿಗೆ ಕಾಲಕ್ಕೆ ತಕ್ಕಂತೆ ಅಗತ್ಯ ಮಾಹಿತಿ ನೀಡಲಾಗಿದೆ. ಬೆಳೆಗಾರರ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಬಗ್ಗೆ ಧ್ವನಿ ಎತ್ತಲಾಗಿದೆ.ಎ.ನಂದ ಬೆಳ್ಯಪ್ಪ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.