ADVERTISEMENT

ಕಾಡಾನೆ ಹಾವಳಿ ತಡೆಯಲು ಇಲಾಖೆ ವಿಫಲ

ವಿರಾಜಪೇಟೆ ಸಮೀಪದ ಬೇಟೋಳಿಯ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ 

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 4:32 IST
Last Updated 8 ನವೆಂಬರ್ 2024, 4:32 IST
ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು
ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು   

ವಿರಾಜಪೇಟೆ: ಗ್ರಾಮಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆ ಮಹತ್ವ ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ರವಿ ಹೇಳಿದರು.

ಸಮೀಪದ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸಭಾ ಭವನದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ.ಬೋಪಣ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

‘ಬದುಕಿನಲ್ಲಿ ಸಾಧಿಸಲು ಮುಖ್ಯವಾಗಿ ಶಿಕ್ಷಣ ಅವಶ್ಯಕ. ಗ್ರಾಮೀಣ ಭಾಗದ ಕಡು ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

ಗ್ರಾಮಸ್ಥ ಅಚ್ಚಪಂಡ ಹರೀಶ್ ಮಾತನಾಡಿ, ‘ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ಷ್ಮ ಪ್ರದೇಶವೆಂದು ಹೇಳಿ 80 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಈಚೆಗೆ ನೋಟಿಸ್ ನೀಡುತ್ತಿದ್ದಾರೆ. ಕಾಡಾನೆಗಳು ನಿತ್ಯ ಬೆಳೆ ನಷ್ಟ ಮಾಡುತ್ತಿದ್ದು, ಅರಣ್ಯ ಇಲಾಖೆ ಇದನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ’ ಎಂದು ಆರೋಪಿಸಿದರು.

ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಮತ್ತು ನಾರಾಯಣ ಅವರು ಮಾತನಾಡಿ, ‘ಈ ಹಿಂದೆ 1991ರಲ್ಲಿ ಕೇಂದ್ರ ಸರ್ಕಾರ ಮಾಡಿರುವ ಯೋಜನೆಯನ್ವಯ ಇದೀಗ ನೋಟಿಸ್ ನೀಡಲು ಆದೇಶಿಸಿದ್ದಾರೆ. ಗ್ರಾಮಸ್ಥರು ಈ ಕುರಿತು ಆಕ್ಷೇಪ ಸಲ್ಲಿಸುವ ಅವಕಾಶವಿದೆ. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆಸಲಾಗಿದೆ’ ಎಂದರು.

ಪಶು ಸಂಗೋಪನ ಇಲಾಖೆಯ ಡಾ. ರಾಕೇಶ್ ಮಾತನಾಡಿ, ‘ಜಾನುವಾರು ರೋಗಮುಕ್ತ ಮಾಡಬೇಕೆಂಬುದು ಸರ್ಕಾರದ ಆದೇಶ. ಆದರೆ ಸಿಬ್ಬಂದಿ ಕೊರತೆಯಿದೆ. ಗ್ರಾಮೀಣ ಪ್ರದೇಶದ ಜನರಿಗೆ ಜಾನುವಾರು ಸಾಕಾಣಿಕೆಗೆ ಬ್ಯಾಂಕ್‌ಗಳು ಸಬ್ಸಿಡಿ ರೂಪದಲ್ಲಿ ಸಾಲ ನೀಡಲು ಮುಂದೆ ಬಂದಿದ್ದು, ಗ್ರಾಮಸ್ಥರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಅವರು ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ತೋಡು, ಕಾಲುವೆಗಳ ಹೂಳೆತ್ತುವ ಕಾರ್ಯ ನಡೆಸಲಾಗಿದೆ. ಎಲ್ಲಾ ಶಾಲೆಗಳಿಗೂ ಆವರಣ ಗೋಡೆಯನ್ನು ನಿರ್ಮಿಸಿ ಕೊಡಲಾಗಿದೆ’ ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಎಚ್. ಅಲೀಮಾ, ಸದಸ್ಯರಾದ ವೈ.ಎಂ. ಶಾಂತಿ, ಎ.ಎ. ವಸಂತ ಕಟ್ಟಿ, ಪಿ.ಬಿ. ಚಂಗಪ್ಪ, ಎಂ.ಎಂ. ರಜಾಕ್, ಬಿ.ಜೆ.ಯಶೋಧ, ಎಂ.ಎಂ. ರಂಜಿತ್, ಸಿ.ಎಸ್. ಸುದೀಶ್, ಪಿ.ಕೆ. ಗೀತಾ, ಪಿ.ಎಂ.ಲಕ್ಷ್ಮಿ, ಕೆ.ಆರ್.ಲತಾ, ಉಪಸ್ಥಿತರಿದ್ದರು.

ಸಭೆಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ, ಸೆಸ್ಕ್, ಪೊಲೀಸ್, ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.