ADVERTISEMENT

ಸೋಮವಾರಪೇಟೆ: ಮನಸೂರೆಗೊಳ್ಳುತ್ತಿದೆ ಮಲ್ಲಳ್ಳಿ ಜಲಪಾತ

ಡಿ.ಪಿ.ಲೋಕೇಶ್
Published 21 ಜುಲೈ 2024, 4:06 IST
Last Updated 21 ಜುಲೈ 2024, 4:06 IST
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ಇದೀಗ ಕಣ್ಮನ ಸೆಳೆಯುತ್ತಿದೆ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ಇದೀಗ ಕಣ್ಮನ ಸೆಳೆಯುತ್ತಿದೆ   

ಸೋಮವಾರಪೇಟೆ: ತಾಲ್ಲೂಕಿನ ಪುಷ್ಪಗಿರಿ ಮಡಿಲಿನಲ್ಲಿ ಜನ್ಮತಳೆಯುವ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು, ಇದರಿಂದಾಗಿ ಪಶ್ಚಿಮಘಟ್ಟ ಸಾಲಿನ ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿದೆ. ಜಲಪಾತಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಿಂದ ಪ್ರಾರಂಭವಾಗುವ ಈ ನದಿ, ಸರಾಸರಿ ಸಮುದ್ರ ಮಟ್ಟದಿಂದ 1,600 ಮೀಟರ್ ಎತ್ತರದಿಂದ ತನ್ನ ಹರಿವನ್ನು ಪ್ರಾರಂಭಿಸುತ್ತದೆ. ಪಶ್ಚಿಮಘಟ್ಟಗಳ ಸೊಂಪಾದ ನಿತ್ಯಹರಿದ್ವರ್ಣ ಕಾಡಿನ ಮೂಲಕ ಹಾದುಹೋಗುತ್ತದೆ.

ಪುಷ್ಪಗಿರಿ ಪರ್ವದಲ್ಲಿ ಹುಟ್ಟುವ ಲಿಂಗದ ಹೊಳೆ, ಕುಡಿಗಾಣದ ಭಕ್ತಿಹೊಳೆ ಮತ್ತು ಬೀದಳ್ಳಿಯ ಹೊಳೆ ಸೇರಿ ಕುಮಾರಧಾರ ನದಿಯಾಗಿ ಹರಿಯುತ್ತದೆ. ಪುಷ್ಪಗಿರಿಯಲ್ಲಿಯೇ ಒಂದು ಚಿಕ್ಕ ಜಲಪಾತ ಇದ್ದು, ನಂತರ ಸಾಕಷ್ಟು ಚಿಕ್ಕಪುಟ್ಟ ಜಲಪಾತಗಳು ಸೇರಿದಂತೆ, ದೇಶದ ಪ್ರಮುಖ ಜಲಪಾತಗಳಲ್ಲೊಂದಾದ ಮಲ್ಲಳ್ಳಿ ಜಲಪಾತವನ್ನು ಇದು ಸೃಷ್ಟಿಸುತ್ತದೆ. ಇದನ್ನು ದೇಶದೆಲ್ಲೆಡೆಗಳಿಂದ ಪ್ರವಾಸಿಗರು ವರ್ಷಂಪ್ರತಿ ಆಗಮಿಸಿ, ಜಲಪಾತದ ಸೊಬಗನ್ನು ಸವಿಯುತ್ತಿದ್ದಾರೆ.

ADVERTISEMENT

ನಿಸರ್ಗ ರಮಣೀಯತೆಯನ್ನು ತನ್ನೊಡಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದೆ.

ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಎಂಬ ಗ್ರಾಮದಲ್ಲಿ ಮಲ್ಲಳ್ಳಿ ಜಲಪಾತವಿದೆ. ಪಟ್ಟಣದಿಂದ 25 ಕಿ.ಮೀ ಕ್ರಮಿಸಿದರೆ, ಜಲಪಾತ ದರ್ಶನವಾಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮೂಲಕ 20 ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಬಲಕ್ಕೆ ತಿರುಗಿ 4 ಕಿ.ಮೀ. ತೆರಳಿದರೆ ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳಕ್ಕೆ ವಾಹನಗಳಲ್ಲಿ ತೆರಳಬಹುದು.

ಮಲ್ಲಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರಿ ಮಳೆಯ ಸಂದರ್ಭ ಜಲಪಾತದ ಬುಡದಲ್ಲಿ ನಿಂತು ನೋಡುವುದು ಕಷ್ಟ. ಜಲಪಾತದ ಸಮೀಪಕ್ಕೆ ತೆರಳಲು 400ಕ್ಕೂ ಅಧಿಕ ಮೆಟ್ಟಿಲನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳನ್ನು ಇಳಿದು ಹೋಗಬಹುದಾಗಿದೆ. ಬೀದಳ್ಳಿ ಗ್ರಾಮದಲ್ಲಿ 3 ಮೆಗಾವ್ಯಾಟ್ ಸಾಮರ್ಥ್ಯದ ಮಿನಿ ಹೈಡಲ್ ವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗಿದೆ. ಉಳಿದಂತೆ, 6 ಸ್ಥಳಗಳಲ್ಲಿ ವಿದ್ಯುತ್ ಉತ್ಪಾದಿಸಲು ಯೋಜನೆಗಳಿಗೆ ಸ್ಥಳ ಸರ್ವೆ ನಡೆಸಲಾಗಿದೆ.

ಮಲ್ಲಳ್ಳಿ ಜಲಪಾತ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ದೇಶದಾದ್ಯಂತ ಪ್ರವಾಸಿಗರು ಆಗಮಿಸಿ ಸಂತಸಪಡುತ್ತಿದ್ದಾರೆ. ಹಿಂದೆ ಜಿಲ್ಲಾ ಪಂಚಾಯಿತಿಯಲ್ಲಿ ಕೆ.ಪಿ.ಚಂದ್ರಕಲಾ ಅಧ್ಯಕ್ಷರಾಗಿ ಹಾಗೂ ಜಿಲ್ಲಾಧಿಕಾರಿಯಾಗಿ ಜಯಂತಿ ಅವರು ಕೆಲಸ ಮಾಡುವ ಸಂದರ್ಭ ಮಲ್ಲಳ್ಳಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೆಲವು ಅಭಿವೃದ್ಧಿ ಕೆಲಸಕ್ಕೆ ಮುಂದಾಗಲಾಗಿತ್ತು. ಅದರಂತೆ ಕಾಂಕ್ರೀಟ್ ರಸ್ತೆ ಮೆಟ್ಟಿಲು, ರೇಲಿಂಗ್ಸ್ ಸೇರಿದಂತೆ ಕೆಲವು ಯೋಜನೆಗಳು ಇಲ್ಲಿಗೆ ಬಂದವು.

ಆದರೆ, ರಸ್ತೆ ಬಿಟ್ಟರೆ, ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸ್ಥಳ ಇಂದಿಗೂ ಮೂಲಸೌಕರ್ಯದ ಕೊರತೆ ಎದುರಿಸುತ್ತಿದೆ ಎಂದು ಮಲ್ಲಳ್ಳಿ ಗ್ರಾಮದ ಎಂ.ಜೆ.ವೆಂಕಟೇಶ್ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಜಲಪಾತ ಮತ್ತೊಂದು ಬದಿಯಿಂದ ಕಾಣುವ ದೃಶ್ಯ ಹೀಗಿದೆ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ಭಾರಿ ಮಳೆಗೆ ಬೋರ್ಗರೆಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.