ADVERTISEMENT

ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಸಂಚಾರಕ್ಕೆ ಇನ್ನಿಲ್ಲದ ತೊಂದರೆ, ಅಪಘಾತದ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಸುನಿಲ್ ಎಂ.ಎಸ್.
Published 29 ಆಗಸ್ಟ್ 2024, 7:10 IST
Last Updated 29 ಆಗಸ್ಟ್ 2024, 7:10 IST
ರಾಷ್ಟ್ರೀಯ ಹೆದ್ದಾರಿಯ ಏಳನೇ ಹೊಸಕೋಟೆ ಬಳಿ ರಸ್ತೆಯಲ್ಲೇ ಗುಂಪುಗುಂಪಾಗಿ ದನಕರಗಳು ಹೋಗುತ್ತಿದ್ದ ದೃಶ್ಯಗಳು ಬುಧವಾರ ಕಂಡು ಬಂತು
ರಾಷ್ಟ್ರೀಯ ಹೆದ್ದಾರಿಯ ಏಳನೇ ಹೊಸಕೋಟೆ ಬಳಿ ರಸ್ತೆಯಲ್ಲೇ ಗುಂಪುಗುಂಪಾಗಿ ದನಕರಗಳು ಹೋಗುತ್ತಿದ್ದ ದೃಶ್ಯಗಳು ಬುಧವಾರ ಕಂಡು ಬಂತು   

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 275ರ ಏಳನೇ ಹೊಸಕೋಟೆ- ಆನೆಕಾಡು ಭಾಗದಲ್ಲಿ ರಸ್ತೆಯ ಮಧ್ಯದಲ್ಲಿಯೇ ದನಗಳು ಮಲಗುತ್ತಿವೆ ಮತ್ತು ಓಡಾಡುತ್ತಿವೆ. ದಿಢೀರನೇ ಎದುರಾಗುವ ಇಂತಹ ಜಾನುವಾರುಗಳಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಅಪಘಾತಗಳೂ ಸಂಭವಿಸಿವೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಜೊತೆಗೆ, ಜಾನುವಾರುಗಳೂ ಮೃತಪಟ್ಟಿವೆ.

ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ದನಗಳ ಮಾಲೀಕರಿಗೆ ಆಗಾಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ADVERTISEMENT

ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಸಕೋಟೆ, ತೊಂಡೂರು, ಹೇರೂರು, ಮೆಟ್ನಳ್ಳ, ಉಪ್ಪುತೋಡು, ಬಸವನಹಳ್ಳಿ ಭಾಗದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಮೇಯಲು ರಸ್ತೆಗೆ ಬಿಡುತ್ತಿದ್ದಾರೆ. ಈ‌ ನಡುವೆ ನಾಕೂರು ಶಿರಂಗಾಲ, ಹೇರೂರು ಭಾಗದಿಂದಲೂ ಜಾನುವಾರುಗಳು ಕಾಡಿನೊಳಗೆ ಮೇಯುತ್ತಾ ರಸ್ತೆಗೆ ಬರುತ್ತಿವೆ. ಮಳೆ ಮತ್ತು ಚಳಿ ಹೆಚ್ಚು ಇರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಚ್ಚನೆಯ ವಾತಾವರಣ ಇರುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಕಾಣಿಸಿಕೊಳ್ಳುತ್ತಿವೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ಮಳೆಯ ಹನಿಯ ನಡುವೆ ಚಾಲಕರಿಗೆ ರಸ್ತೆ ಅಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ.

ಅಪಘಾತಗಳು ಹೆಚ್ಚಾದಂತೆ ಗ್ರಾಮ ಪಂಚಾಯಿತಿ ಆ ದನಕರುಗಳ ಚಿತ್ರವನ್ನು ತೆಗೆದು ಮಾಲಿಕರಿಗೆ ಕಳುಹಿಸಿ ದಂಡ ವಿಧಿಸಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.

ಮಾಲೀಕರ ಬೇಜವಾಬ್ದಾರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಅಪಘಾತದಲ್ಲಿ ಜಾನುವಾರುಗಳು ಮೃತಪಟ್ಟ ಸಂದರ್ಭ ಅದರ ಮಾಲೀಕರು ಬರುವುದಿಲ್ಲ. ಗಾಯಗೊಂಡು ನರಳುವಾಗಲೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಮೃತಪಡುವ ಜಾನುವಾರುಗಳನ್ನು ಮಣ್ಣು ಮಾಡುವ ಕೆಲಸವೂ ಕೂಡ ಗ್ರಾಮ ಪಂಚಾಯಿತಿಯ ಹೆಗಲಿಗೆ ಬಿದ್ದಿದ್ದು, ಅದಕ್ಕಾಗಿಯೇ ಸಾವಿರಾರು ರೂಪಾ ತೆಗೆದಿಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ.

ಹಾಲು ಕೊಡದ ದನಗಳ ನಿರ್ಲಕ್ಷ್ಯ: ದನಗಳ ಮಾಲೀಕರು ವಯಸ್ಸಾದ ಮತ್ತು ಹಾಲು ಕೊಡದ ರಾಸುಗಳನ್ನು ನಿರ್ಲಕ್ಷಿಸಿ ರಸ್ತೆಗೆ ಬಿಟ್ಟಿರುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿವೆ.

ಈ ರಾಸುಗಳಿಗೆ ಕೊಡಲು ಮೇವಿನ ಕೊರತೆ ಇರುವುದರಿಂದ ಅದರ ಮಾಲೀಕರು ಈ ದನಗಳನ್ನು ಕಾಡಿಗೆ ಹಟ್ಟುತ್ತಿದ್ದಾರೆ. ಆದರೆ, ಮರಳಿ ಆ ರಾಸುಗಳನ್ನು ಕರೆದೊಯ್ಯುವ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಈ ಜಾನುವಾರುಗಳು ವಾಸಸ್ಥಾನಕ್ಕೂ ಮರಳದೆ ಕಾಡಿನೊಳಗೂ ತಂಗದೆ ಡಾಂಬರ್ ರಸ್ತೆಯಲ್ಲಿ ಆಶ್ರಯ ಪಡೆಯುತ್ತಿವೆ.

ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತು ಮಾಲೀಕರಿಗೆ ಎಚ್ಚರಿಕೆಯ ಪತ್ರದ ಜೊತೆಗೆ ಆ ಜಾನುವಾರುಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಸೂಚಿಸಬೇಕು ಎಂದು ಸಾರ್ವಜನಿಕರು, ವಾಹನ ಚಾಲಕರು ಮನವಿ ಮಾಡಿಕೊಂಡಿದ್ದಾರೆ.

ಈ ಭಾಗದಲ್ಲಿ ನಿರಂತರವಾಗಿ ದನಗಳು ರಸ್ತೆಯಲ್ಲಿ ಮಲಗುತ್ತಿರುವುದರಿಂದ ರಸ್ತೆಯ ಅರಿವಿಲ್ಲದ ಪ್ರವಾಸಿಗರು ಜಾನುವಾರುಗಳಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಎಚ್ಚರ ವಹಿಸಬೇಕು.
– ದಿನೇಶ್ ಪೂಜಾರಿ, ಸ್ಥಳೀಯ ನಿವಾಸಿ
ಕಳೆದ ಕೆಲವು ದಿನಗಳಿಂದ‌ ವಾಹನಗಳ ಡಿಕ್ಕಿಯಿಂದ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಆ ಮೂಕ ಪ್ರಾಣಿಗಳ ಮಾಲೀಕರಿಗೆ ಮಾನವೀಯತೆ‌ ಇಲ್ಲದಂತಾಗಿದೆ. ಇಂತವರ ವಿರುದ್ದ ಗ್ರಾಮ ಪಂಚಾಯತಿ ದಂಡ ವಿಧಿಸಿದಾಗ ಮಾತ್ರ ಹತೋಟಿ ಬರಲಿದೆ.
–ಪ್ರಶಾಂತ್ ಶೌರ್ಯ, ಕಾರ್ಯಪಡೆ ಏಳನೇ ಹೊಸಕೋಟೆ
ಈ‌ ವ್ಯಾಪ್ತಿಗೆ ಸೇರಿದ ಕೆಲವರ ಮಾಹಿತಿ ಲಭ್ಯವಿದ್ದು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಅದಕ್ಕೂ ಸ್ಪಂದನೆ ಇಲ್ಲದಿದ್ದರೆ ಅಂತಹ ಮಾಲೀಕರ ಮೇಲೆ ದಂಡ ವಿಧಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಯಿಂದ ಮಾಡಲಾಗುವುದು.
–ನಂದೀಶ್, ಹೊಸಕೋಟೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ.
ಸುತ್ತಮುತ್ತಲಿನ‌ ಗ್ರಾಮ ಪಂಚಾಯಿತಿಗಳು ದೊಡ್ಡಿ ಮಾಡಿದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರಕಲಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
–ಜೋಸೆಫ್, ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.