ADVERTISEMENT

ಕೊಡಗಿನ ಹೆಗ್ಗಳಿಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್

ಸಾವಿರಾರು ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವ ಅಪರೂಪದ ಜಾಗತಿಕ ಸಂಸ್ಥೆ

ಕೆ.ಎಸ್.ಗಿರೀಶ್
Published 22 ಫೆಬ್ರುವರಿ 2024, 5:01 IST
Last Updated 22 ಫೆಬ್ರುವರಿ 2024, 5:01 IST
ಮಡಿಕೇರಿಯಲ್ಲಿರುವ ಭಾರತ್ ಮತ್ತು ಸ್ಕೌಟ್ಸ್ ಜಿಲ್ಲಾ ಕಚೇರಿ
ಮಡಿಕೇರಿಯಲ್ಲಿರುವ ಭಾರತ್ ಮತ್ತು ಸ್ಕೌಟ್ಸ್ ಜಿಲ್ಲಾ ಕಚೇರಿ   

ಮಡಿಕೇರಿ: ವಿಶ್ವದ 216 ದೇಶಗಳಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಕೊಡಗಿನಲ್ಲಿಯೂ ಅಸ್ತಿತ್ವ ಪಡೆದಿದೆ. ಮಾತ್ರವಲ್ಲ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿ ನಿಲ್ಲುವಂತಹ ಕೆಲಸಗಳನ್ನು ಮಾಡುತ್ತಿದೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಮಿತಿ ಪ್ರತಿ ವರ್ಷವೂ ರಾಜ್ಯದ ವಿಭಾಗವಾರು ಮಟ್ಟದಲ್ಲಿ 1, 2 ಅಥವಾ 3ನೇ ಸ್ಥಾನ ಪಡೆಯುತ್ತಿರುವುದು ಹೆಗ್ಗಳಿಕೆ ಎನಿಸಿದೆ. ಇಲ್ಲಿ ಸದ್ಯ 12ರಿಂದ 13 ಸಾವಿರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೋಂದಣಿಯಾಗಿದ್ದು, ಅತ್ಯಂತ ಕ್ರಿಯಾಶೀಲ ಸಂಸ್ಥೆ ಎನಿಸಿದೆ.

ಜಿಲ್ಲಾ ಸಂಸ್ಥೆಯಡಿ 6 ಸ್ಥಳೀಯ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಡಿಕೇರಿ, ಸಂಪಾಜೆ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು‌ ಸೋಮವಾರಪೇಟೆ ಸಂಸ್ಥೆಗಳಿದ್ದು, ವರ್ಷಕ್ಕೆ ಕನಿಷ್ಠ ಎಂದರೂ 25ರಿಂದ 30 ಕಾರ್ಯಕ್ರಮಗಳು ಜರುಗುತ್ತಿವೆ.

ADVERTISEMENT

ಮುಖ್ಯವಾಗಿ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಹಾಗೂ ಕೋವಿಡ್ ಬಂದಾಗ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಹಲವು ಸೇವಾಪರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿದರೆ, ವರ್ಷಕ್ಕೆ ಒಂದು ಅಥವಾ ಎರಡು ರಾಜ್ಯಮಟ್ಟದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇಲ್ಲಿನ ಮಕ್ಕಳು ಭಾಗವಹಿಸುವುದು ವಿಶೇಷ.

ಕಳೆದ ವರ್ಷವಷ್ಟೇ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಶ್ವಮಟ್ಟದ ಜಾಂಬೂರಿಯಲ್ಲಿ ಕೊಡಗು ಜಿಲ್ಲೆಯಿಂದ 700 ಮಕ್ಕಳು ಭಾಗವಹಿಸಿದ್ದರು.

ಮುಖ್ಯವಾಗಿ, ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜನರಲ್ಲಿ ಅರಿವು ಮೂಡಿಸುವ ಹಾಗೂ ಪರಿಸರ ಉಳಿಸುವ ಕೆಲಸ ಮಾಡುತ್ತಿದೆ. ಪ್ರತಿ ದೀಪಾವಳಿಯಲ್ಲೂ ಪಟಾಕಿಯಿಂದ ಉಂಟಾಗುವ ಮಾರಕ ಪರಿಣಾಮಗಳನ್ನು ಕುರಿತು ಮಕ್ಕಳು ಮಡಿಕೇರಿಯ ಬೀದಿಬೀದಿಗಳಲ್ಲಿ ಜಾಥಾ ನಡೆಸುತ್ತಾರೆ. ಈ ಮೂಲಕ ಕನಿಷ್ಠ ಮಕ್ಕಳಲ್ಲಿಯಾದರೂ ಪಟಾಕಿಯಿಂದ ಉಂಟಾಗುವ ಮಾರಕ ಪರಿಣಾಮಗಳ ಅರಿವು ಮೂಡುತ್ತದೆ.

ಸಂಚಾರ ನಿಯಮಗಳ ಪಾಲನೆ ಕುರಿತು ಮಕ್ಕಳು ಮೂಡಿಸುವ ಜಾಗೃತಿ ಮನಮುಟ್ಟುವಂತಿವೆ. ಮಕ್ಕಳೇ ಹಿರಿಯರಿಗೆ ಸಂಚಾರ ನಿಯಮಗಳ ಪಾಲನೆ ಕುರಿತು ಪಾಠ ಹೇಳುತ್ತಾರೆಂದರೆ ಮಕ್ಕಳಿಗೆ ಅದರ ಅರಿವು ಮೂಡಿರುತ್ತದೆ. ಈ ಮೂಲಕ ಸಮಾಜದಲ್ಲಿ ಮಾತ್ರವಲ್ಲ ಮಕ್ಕಳಲ್ಲಿ ಸಕರಾತ್ಮಕ ಬದಲಾವಣೆ ತರುವ ಕೆಲಸವನ್ನು ಮಾಡಲಾಗುತ್ತಿದೆ.

ರಾಷ್ಟ್ರೀಯ ಹಬ್ಬಗಳಲ್ಲಿಯಂತೂ ಇವರ ಪಾತ್ರ ಅಸಾಧಾರಣವಾದುದು. ಮೈದಾನದಲ್ಲಿ ಪೊಲೀಸರಿಗೆ ಸರಿಸಮಾನವಾಗಿ ಪಥಸಂಚಲನದಲ್ಲಿ ಭಾಗಿಯಾಗುತ್ತಾರೆ. ತಲಕಾವೇರಿ ಜಾತ್ರೆ ಸೇರಿದಂತೆ ವಿವಿಧ ಜಾತ್ರೆಗಳು, ಹಬ್ಬಗಳಲ್ಲೂ ಇವರು ಯೋಗದಾನ ನೀಡುತ್ತಾರೆ. ಬೀಜದುಂಡೆ ಹಾಕುವುದು, ನೆಡುತೋಪುಗಳು, ಗಿಡಗಳನ್ನು ನೆಡುವುದು ಮೊದಲಾದ ಪರಿಸರ ಉಳಿಸುವ ಕೆಲಸಗಳನ್ನು ಮಾಡುತ್ತಿರುವುದು ವಿಶೇಷ.

ಸದ್ಯ, ಈ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತರಾಗಿ ಕೆ.ಟಿ.ಬೇಬಿ ಮ್ಯಾಥ್ಯೂ, ಗೈಡ್ಸ್ ವಿಭಾಗದ ಆಯುಕ್ತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದೆ ರಾಣಿ ಮಾಚಯ್ಯ ಹಾಗೂ ಸ್ಕೌಟ್ಸ್ ವಿಭಾಗದ ಆಯುಕ್ತರಾಗಿ ಜಿಮ್ಮಿ ಸಿಕ್ವೆರಾ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಕೌಟ್ ಮತ್ತು ಗೈಡ್ ಸಂಸ್ಥಾಪಕರ ದಿನಾಚರಣೆ

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಹುಟ್ಟಿಗೆ ಕಾರಣರಾದ ಲಾರ್ಡ್ ಬೇಡನ್ ಪೊವೆಲ್‌ ಅವರ ಜನ್ಮದಿನ ಫೆ.22. ಈ ದಿನವನ್ನು ವಿಶ್ವದಾದ್ಯಂತ ಸ್ಕೌಟ್ ಮತ್ತು ಗೈಡ್ ಸಂಸ್ಥಾಪಕರ ದಿನಾಚರಣೆ ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಪರಿಸರದ ಬಗ್ಗೆ ಕಾಳಜಿ, ದಯೆ, ಸೇವಾಪರತೆ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಈ ಸಂಸ್ಥೆಯ ಉದ್ದೇಶ. ಇವರು 1907ರಲ್ಲಿ ಮೊದಲ ಬಾರಿಗೆ ಸ್ಕೌಟ್ ಚಳವಳಿಯನ್ನು ಆರಂಭಿಸಿದರು.

ನಂತರ 1909ರಲ್ಲಿ ಭಾರತದಲ್ಲೇ ಮೊದಲ ಸ್ಕೌಟ್ ದಳ ಬೆಂಗಳೂರಿನ ಬಿಷಪ್‌ ಕಾಟನ್ ಶಾಲೆಯ ಆವರಣದಲ್ಲಿ ಆರಂಭಗೊಂಡಿತು. 1917ರಲ್ಲಿ ಅಧಿಕೃತವಾಗಿ ಕರ್ನಾಟಕದಲ್ಲಿ ‘ದಿ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನಲ್ಲಿ ಕೃಷ್ಣರಾಜ ಒಡೆಯರ್ ಅವರೇ ಪೋಷಕರಾಗಿ ಆರಂಭಿಸಿದರು. ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾದರು. 1927ರಲ್ಲಿ ದಿ ಗರ್ಲ್ಸ್ ಗೈಡ್ ಆಫ್ ಮೈಸೂರ್‌ ಅನ್ನು ಮಹಾರಾಜರೇ ಆರಂಭಿಸಿದರು. ಪತ್ಯೇಕವಾಗಿದ್ದ ಈ ಎರಡೂ ಸಂಸ್ಥೆಗಳು ಮುಂದೆ 1951ರಲ್ಲಿ ಒಂದು ಗೂಡಿ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಎಂಬ ಒಂದೇ ಸಂಸ್ಥೆಯಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಈಚೆಗೆ ಮಡಿಕೇರಿ ನಗರದಲ್ಲಿ ಬೃಹತ್ ಮಾನವ ಸರಪಳಿ ರಚಿಸಿದರು
ಮಡಿಕೇರಿಯಲ್ಲಿ ಈಚೆಗೆ ನಡೆದ ‘ಹುತಾತ್ಮರ ದಿನಾಚರಣೆ’ಯಲ್ಲಿ  ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಡಿಕೇರಿಯಲ್ಲಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಕುರಿತು ಈಚೆಗೆ ಅರಿವು ಮೂಡಿಸಲು ಜಾಥಾ ನಡೆಸಿದರು
ಕೆ.ಟಿ.ಬೇಬಿ ಮ್ಯಾಥ್ಯೂ

ಜಿಲ್ಲಾ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಪ್ರತಿಕ್ರಿಯಿಸಿ ‘ಕೊಡಗು ಜಿಲ್ಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಚಳವಳಿಯಲ್ಲಿ ಪ್ರತಿ ವರ್ಷ 12ರಿಂದ 13 ಸಾವಿರ ವಿದ್ಯಾರ್ಥಿಗಳು ಶಿಕ್ಷಕರು ಭಾಗಿಯಾಗುತ್ತಿದ್ದಾರೆ. ಜಿಲ್ಲಾ ಕಚೇರಿ ಅಸ್ತಿತ್ವದಲ್ಲಿದೆ. ಮುಂದೆ ಜಿಲ್ಲಾ ತರಬೇತಿ ಕೇಂದ್ರ ಸ್ಥಾಪಿಸುವ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಕುರಿತ ಚಿಂತನೆ ಇದೆ’ ಎಂದು ಹೇಳಿದರು.

1918ರಲ್ಲಿ ಕೊಡಗಿನಲ್ಲಿ ಆರಂಭ

ಕೊಡಗಿನಲ್ಲಿ 1918ರಲ್ಲಿ ಈ ಚಳವಳಿ ಆರಂಭಗೊಂಡಿತು. ರಾವ್ ಬಹದ್ದೂರ್ ಕೋಡೀರ ಉತ್ತಪ್ಪ ಅವರು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ಸ್ಕೌಟ್ ದಳವನ್ನು ಆರಂಭಿಸುತ್ತಾರೆ. ಮುಂದೆ 1939ರಲ್ಲಿ ಕೊಡಗಿನಲ್ಲೇ ಮೊದಲ ಸ್ಕೌಟ್ ರ‍್ಯಾಲಿ ಮಡಿಕೇರಿಯಲ್ಲಿ ನಡೆಯುತ್ತದೆ. 1935ರಲ್ಲಿ ಕೊಡಗು ಕಮಿಷನರ್ ಆರ್.ಬಿ.ಮೆಕ್ ಈವನ್ ಅವರ ನೇತೃತ್ವದಲ್ಲಿ ಸ್ಕೌಟ್ಸ್ ಅಸೋಸಿಯೇಷನ್ ಆರಂಭವಾಗುತ್ತದೆ. 1956ರಲ್ಲಿ ಕೊಡಗು ಮೈಸೂರು ರಾಜ್ಯದೊಂದಿಗೆ ವಿಲೀನವಾದಾಗ ಈ ಸಂಸ್ಥೆಯೂ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಜೊತೆ ಸೇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.