ADVERTISEMENT

ಗೋಣಿಕೊಪ್ಪಲು | ಕೊಡವ ಸಂಸ್ಕೃತಿ ರಕ್ಷಣೆ ಶ್ಲಾಘನೀಯ: ಬಾಂಡ್ ಗಣಪತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 5:56 IST
Last Updated 5 ಆಗಸ್ಟ್ 2024, 5:56 IST
ಗೋಣಿಕೊಪ್ಪಲು ಕೊಡವ ಸಮಾಜದಲ್ಲಿ ನಡೆದ ಕಕ್ಕಡ ಪದ್'ನೆಟ್ಟ್ ಕಾರ್ಯಕ್ರಮದಲ್ಲಿ ಬಾಂಡ್ ಗಣಪತಿ, ಕಾಳಿಮಾಡ ಮೋಟಯ್ಯ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು ಕೊಡವ ಸಮಾಜದಲ್ಲಿ ನಡೆದ ಕಕ್ಕಡ ಪದ್'ನೆಟ್ಟ್ ಕಾರ್ಯಕ್ರಮದಲ್ಲಿ ಬಾಂಡ್ ಗಣಪತಿ, ಕಾಳಿಮಾಡ ಮೋಟಯ್ಯ ಪಾಲ್ಗೊಂಡಿದ್ದರು   

ಗೋಣಿಕೊಪ್ಪಲು: ಕೊಡವ ಸಮಾಜ ಮದುವೆ ಸಮಾರಂಭಗಳ ಜತೆಗೆ ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.

ಪೊನ್ನಂಪೇಟೆಯಲ್ಲಿ ಕೊಡವ ಹಿತಾರಕ್ಷಣಾ ಬಳಗ ಕಿಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ಆಶ್ರಯದಲ್ಲಿ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಕ್ಕಡ ಪದ್ ನೆಟ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡವ ಸಂಸ್ಕೃತಿಯ ಬೇರಾಗಿರುವ ಭತ್ತದ ಕೃಷಿಯಲ್ಲಿ ನಿರಾಸಕ್ತಿ ತಾಳಿದ್ದು ಕೊಡಗಿನಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿದ್ದ ಕೃಷಿ, ಇದೀಗ 19 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಕುಸಿತವಾಗಿದೆ. ಇದು ಅತ್ಯಂತ ಆತಂಕಕಾರಿ ಸಂಗತಿ. ಇಂಥ ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡವ ಸಂಸ್ಕೃತಿ ಉಳಿಯುವುದು ಕಷ್ಟ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಕೊಡವ ಸಂಸ್ಕೃತಿಯ ಗತವೈಭವ ಆಚರಣೆಗೆ ತರಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಸಂತಸದ ವಿಷಯ. ಕೊಡವ ಸಮುದಾಯದ ಮನೆಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ, ಹಿಂದಿನ ಕಾಲದಲ್ಲಿ ಎಲ್ಲರೂ ಐನ್ ಮನೆಗಳಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ ಎಲ್ಲರೂ ಸೇರಿ ಹಬ್ಬದ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಆದರೆ ಜನರ ಕೊರತೆಯಿಂದ ಮನೆಗಳಲ್ಲಿ ಕೆಲವರು ಮಾತ್ರ ಇರುವುದರಿಂದ ಸಂಘ ಸಂಸ್ಥೆಗಳು ಹಾಗೂ ಕೊಡವ ಸಮಾಜಗಳು ಸಾಮೂಹಿಕವಾಗಿ ಹಬ್ಬಗಳನ್ನು ಆಚರಿಸುತ್ತಿರುವುದು ಉತ್ತಮ ಕೆಲಸ ಎಂದು ಹೇಳಿದರು.

ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಕಕ್ಕಡ 18 ಆಚರಣೆಯ ಸಂದರ್ಭದಲ್ಲಿ ತೀವ್ರ ಚಳಿ ಶೀತಾ ವಾತಾವರಣ ಇರುತ್ತದೆ. ‌‌ಇದೇ ವೇಳೆ ಕೃಷಿ ಚಟುವಟಿಕೆಯಲ್ಲಿ ನಿರತರಾದ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಬೇಕಾಗಿರುವ ಆಹಾರವನ್ನು ಪೂರ್ವಜರು ವೈಜ್ಞಾನಿಕವಾಗಿ ನಿರ್ಧರಿಸಿದ್ದಾರೆ. ಪ್ರಕೃತಿಯಿಂದ ನಾವು ಆಹಾರವನ್ನು ಪಡೆಯುತ್ತೇವೆ. ಅದರಿಂದ ಪ್ರಕೃತಿಯನ್ನು ರಕ್ಷಿಸಬೇಕು ಹಾಗೂ ಪೂಜೆ ಮಾಡಬೇಕು ಎಂದಿಗೂ ನಾಶ ಮಾಡ ಬಾರದು ಎಂದು ಕಿವಿ ಮಾತು ಹೇಳಿದರು.

ಕೊಡಗಿನ ಭವಿಷ್ಯದ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕು. ಈಗಲೇ ಕೊಡವ ಜನಾಂಗದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಮುಂದೆ ಇದರ ಪರಿಣಾಮ ಏನಾಗಬಹುದೆಂದು ಗಂಭೀರವಾಗಿ ಚಿಂತಿಸಬೇಕಾಗಿದೆ. ಜನಸಂಖ್ಯೆ ಕಡಿಮೆಯಾದರೆ ಕೊಡವ ಸಂಸ್ಕೃತಿ ಆಚಾರ ವಿಚಾರ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ತೊಂದರೆಯಾಗಲಿದೆ. ಈ ಬಗ್ಗೆ ಎಚ್ಚರ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಹಿರಿಯ ವೈದ್ಯಾಧಿಕಾರಿ ಡಾ. ಬಿಜ್ಜಂಡ ಕಾರ್ಯಪ್ಪ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಅವರನ್ನು ಸನ್ಮಾನಿಸಲಾಯಿತು.

ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಶಾಲಾ ವಿದ್ಯಾರ್ಥಿ ಕಾಟಿಮಾಡ ಭಾಷಿತ ದೇವಯ್ಯ ಹಾಗೂ ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರನ್ನು ಗೌರವಿಸಲಾಯಿತು.

ಕೊಡವ ಹಿತಾರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚೆಕ್ಕೇರ ರಮೇಶ್, ಚೆಟ್ಟಂಗಡ ಲೇಖನ ಚೊಟ್ಟೆ ಕಾಳಪಂಡ ಆಶಾ ಪ್ರಕಾಶ್, ಬಲ್ಲಡಿಚಂಡ ಕಸ್ತೂರಿ, ಉಳುವಂಗಡ ಲೋಹಿತ್ ಭೀಮಯ್ಯ, ಬೋಡಂಗಡ ಜಗದೀಶ್ ಹಾಜರಿದ್ದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಮಂದತವ್ವ ತಂಡದಿಂದ ಗೆಜ್ಜೆತಂಡ್ ನೃತ್ಯ ಯಂಗ ಕಲರಂಗ ತಂಡದಿಂದ ಕೊಡವ ಕಿರು ನಾಟಕ ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.