ADVERTISEMENT

ವೈಯಕ್ತಿಕವಾಗಿ ಪ್ರತಿಕೃತಿ ಸುಟ್ಟಿಲ್ಲ; ಸಮರ್ಥಿಸಿಕೊಂಡ ಮುಖಂಡರು

ಕಾಂಗ್ರೆಸ್ ವಿರುದ್ಧ ಬಿಜೆಪಿಗರ ಆಕ್ರೋಶ, ಸಾಲು ಸಾಲು ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:37 IST
Last Updated 26 ಜೂನ್ 2024, 5:37 IST

ಮಡಿಕೇರಿ: ಈಚೆಗೆ ವಿರಾಜಪೇಟೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿಯನ್ನು ಸುಟ್ಟ ವಿಚಾರದ ಕಾವು ಇನ್ನೂ ತಣ್ಣಗಾಗಿಲ್ಲ. ಮಂಗಳವಾರವೂ ಸಾಲು ಸಾಲು ಸುದ್ದಿಗೋಷ್ಠಿಗಳನ್ನು ನಡೆಸಿದ ಮುಖಂಡರು ಈ ಕುರಿತ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕೊಡವ ಸಮಾಜಗಳ ಮುಖಂಡರು, ಬಿಜೆಪಿ ಮಹಿಳಾ ಮೋರ್ಚಾ, ಯುವ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾದ ನಾಯಕರು ಪ್ರತ್ಯೇಕವಾಗಿ ಸುದ್ದಿಗೋಷ್ಠಿಗಳನ್ನು ನಡೆಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎಲ್ಲರೂ ವೈಯಕ್ತಿಕ ದೃಷ್ಟಿಯಿಂದ ಪೊನ್ನಣ್ಣ ಅವರ ಪ್ರತಿಕೃತಿಯನ್ನು ಸುಟ್ಟಿಲ್ಲ. ಸರ್ಕಾರದ ದರ ಏರಿಕೆಯ ಕ್ರಮ ಖಂಡಿಸಿ ಮಾತ್ರವೇ ಪ್ರತಿಕೃತಿ ಸುಡಲಾಯಿತು. ಇದು ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಅಭಿವ್ಯಕ್ತಿಸುವ ಕ್ರಮವೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆ ಹಕ್ಕನ್ನು ಕಸಿಯುವ ಯತ್ನ; ಅನಿತಾ ಪೂವಯ್ಯ

ADVERTISEMENT

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಆಡಳಿತ ಪಕ್ಷದ ಜನವಿರೋಧಿ ನೀತಿಯನ್ನು ಪ್ರತಿಭಟನೆಯ ಮೂಲಕ ವಿರೋಧಿಸುವುದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇದೆ. ಆದರೆ, ವಿರಾಜಪೇಟೆಯಲ್ಲಿ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿರುವುದು ಪ್ರತಿಭಟನೆ ಹಕ್ಕನ್ನು ಕಸಿಯುವ ಯತ್ನ’ ಎಂದು ಕಿಡಿಕಾರಿದರು.

ಈ ಪ್ರತಿಭಟನೆಗೆ ಜಾತಿ ಬಣ್ಣ ಹಾಕಿ, ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಈ ಹಿಂದೆ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರ ಪ್ರತಿಕೃತಿಯನ್ನು ದಹಿಸಲಾಗಿತ್ತು. ಆಗ ಅವರು ಯಾರೂ ಪ್ರಕರಣ ದಾಖಲಿಸಲಿಲ್ಲ. ಆದರೆ, ಈಗ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಹರಿಹಾಯ್ದರು.

ಮೋರ್ಚಾದ ಕಾರ್ಯದರ್ಶಿ ಬೀನಾ ಬೊಳ್ಳಮ್ಮ ಮಾತನಾಡಿ, ‘ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಸರ್ಕಾರದ ಒಂದು ಭಾಗವಾಗಿದ್ದಾರೆ. ಆ ದೃಷ್ಟಿಯಿಂದ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರರ ಪ್ರತಿಕೃತಿಯನ್ನು ದಹಿಸಲಾಯಿತೇ ಹೊರತು ವೈಯಕ್ತಿಕವಾಗಿ ಅಲ್ಲ’ ಎಂದು ಪ್ರತಿಪಾದಿಸಿದರು.

ಮುಖಂಡರಾದ ಉಮಾಪ್ರಭು, ಕವಿತಾ ಭೋಜಪ್ಪ, ಕನ್ನಿಕಾ ಭಾಗವಹಿಸಿದ್ದರು.

ವೈಯಕ್ತಿಕವಾಗಿ ಪರಿಗಣಿಸುವುದು ಸರಿಯಲ್ಲ; ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ

ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ ಮಾತನಾಡಿ, ‘ಪ್ರತಿಕೃತಿ ದಹನ ಎನ್ನುವುದು ಪ್ರತಿಭಟನೆಯ ಒಂದು ಭಾಗ. ಅದನ್ನು ರಾಜಕೀಯ ದೃಷ್ಟಿಯಿಂದ ನೋಡಬೇಕೇ ಹೊರತು ವೈಯಕ್ತಿಕವಾಗಿ ಪರಿಗಣಿಸುವುದು ಸರಿಯಲ್ಲ’ ಎಂದು ಖಂಡಿಸಿದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ನೆಪ ಮಾಡಿಕೊಂಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಮೋರ್ಚಾದ ಉಪಾಧ್ಯಕ್ಷ ಕೋಲೆಯಂಡ ಗಿರೀಶ್ ಮಾತನಾಡಿ, ‘ಪ್ರತಿಕೃತಿ ದಹಿಸುವುದನ್ನೇ ನೆಪ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ. ಪೊನ್ನಣ್ಣ ಅವರು ಕೇವಲ ಒಂದು ವರ್ಗಕ್ಕೆ ಸೀಮಿತರಾಗದೇ, ಅಭಿವೃದ್ಧಿ ಪರ ಚಿಂತನೆ ಮಾಡದೇ ಬಿಜೆಪಿಯನ್ನೆ ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಿದರೆ ಪಕ್ಷದ ಎಲ್ಲ ಶಕ್ತಿ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪುಲಿಯೇರಿ ಸುದೀಶ್, ಉಮಾಪ್ರಭು, ಪಿ.ಟಿ.ನವೀನ್ ಉತ್ತಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.