ADVERTISEMENT

ಸಾಮಾಜಿಕ ಪರಿವರ್ತನೆಯಲ್ಲಿ ಯುವಜನರ ಪಾತ್ರ ಮುಖ್ಯ: ಪ್ರೊ.ಮೇಜರ್ ರಾಘವ

ಮಡಿಕೇರಿಯಲ್ಲಿ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮದಲ್ಲಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 6:20 IST
Last Updated 13 ಮಾರ್ಚ್ 2024, 6:20 IST
ಮಡಿಕೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ರಾಘವ ಉದ್ಘಾಟಿಸಿದರು
ಮಡಿಕೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ರಾಘವ ಉದ್ಘಾಟಿಸಿದರು   

ಮಡಿಕೇರಿ: ಸಾಮಾಜಿಕ ಪರಿವರ್ತನೆಯಲ್ಲಿ ಯುವಜನರ ಪಾತ್ರ ಮಹತ್ತರವಾಗಿದ್ದು, ಸಮಾಜದ ಅಭಿವೃದ್ಧಿ ಮತ್ತು ಬದಲಾವಣೆಯಲ್ಲಿ ಯುವಜನರು ತಮ್ಮದೇ ಆದ ಪಾತ್ರ ವಹಿಸುತ್ತಾರೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ರಾಘವ ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಡಿಕೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎನ್‍ಎಸ್‍ಎಸ್ ಘಟಕ, ಜಿಲ್ಲಾ ಹಾಗೂ ತಾಲ್ಲೂಕು ಯುವ ಒಕ್ಕೂಟ, ಮಡಿಕೇರಿ ಸ್ಪೂರ್ತಿ ಯುವ ಸಂಘದ ವತಿಯಿಂದ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಸುಸ್ಥಿರ ಅಭಿವೃದ್ಧಿಗೆ ಯುವ ಜನರ ಪಾತ್ರ ಪ್ರಮುಖವಾದುದು. ಆ ನಿಟ್ಟಿನಲ್ಲಿ ಯುವಜನರು ನಾಯಕತ್ವ ಗುಣ ಬೆಳೆಸಿಕೊಳ್ಳುವಂತಾಗಬೇಕು. ಇದರಿಂದ ಪರಿಣಾಮಕಾರಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.

ADVERTISEMENT

ವಿರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಅವರು ‘ಮಹಿಳಾ ಸಬಲೀಕರಣ’ ಕುರಿತು ಮಾತನಾಡಿ, ‘ರಾಜ್ಯ ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಕೇಂದ್ರ ಸರ್ಕಾರವು ನಾರಿಶಕ್ತಿ ಸ್ವ ಆಧಾರ್, ಒನ್ ಸ್ಟಾಪ್ ಸೆಂಟರ್ ಹೀಗೆ ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ’ ಎಂದು ತಿಳಿಸಿದರು.

ಹೆಣ್ಣು ಮತ್ತು ಗಂಡು ಇಬ್ಬರು ಸಮಾನರು, ಸಂಸಾರದ ರಥ ಚಲಿಸಲು ಸ್ತ್ರೀ ಮತ್ತು ಪುರುಷ ಇಬ್ಬರು ಅಗತ್ಯ. ಆ ನಿಟ್ಟಿನಲ್ಲಿ ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ಊಹಿಸಲು ಅಸಾಧ್ಯ. ಹೆಣ್ಣನ್ನು ರಕ್ಷಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

‘ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಭ್ರೂಣಹತ್ಯೆ ನಿಷೇಧ, ಮಹಿಳಾ ಸಹಾಯವಾಣಿ. ಆಶ್ರಯ ಆಧಾರ, ಸುಕನ್ಯಾ ಸಮೃದ್ಧಿ, ನಾರಿಶಕ್ತಿ ಪುರಸ್ಕಾರ ಮತ್ತಿತರ ಜಾರಿಗೊಳಿಸಿದೆ’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಮಾತನಾಡಿ, ‘ರಾಷ್ಟ್ರದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯುವಜನರು ರಾಷ್ಟ್ರದಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತಾರೆ’ ಎಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕಿ ಡಿ.ಎಸ್.ಮಾನಸ ಅವರು ‘ನನ್ನ ಭಾರತ’ ವಿಷಯ ಕುರಿತು ಮಾತನಾಡಿದರು.

‘ಸಮಾಜದ ಒಂದು ಶಕ್ತಿ ಎಂದರೆ ಶಿಕ್ಷಣ ಪಡೆದ ಮಹಿಳೆ, ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದ್ದಾರೆ’ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್, ಉಪನ್ಯಾಸಕರಾದ ಎವರೆಸ್ಟ್ ರಾಡ್ರಿಗಸ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಿ.ಪಿ.ಸುಕುಮಾರ್, ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಬಾಳಾಡಿ ದಿಲೀಪ್ ಕುಮಾರ್ ಭಾಗವಹಿಸಿದ್ದರು.

ತ್ರಿವೇಣಿ ಹಾಗೂ ದೀಪ್ತಿ ಅವರು ಪ್ರಾರ್ಥಿಸಿದರು. ರಿಷಿತಾ ಸ್ವಾಗತ ನೃತ್ಯ ಮಾಡಿದರು.

ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಡಿಕೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎನ್‍ಎಸ್‍ಎಸ್ ಘಟಕ ಜಿಲ್ಲಾ ಹಾಗೂ ತಾಲ್ಲೂಕು ಯುವ ಒಕ್ಕೂಟ ಮಡಿಕೇರಿ ಸ್ಪೂರ್ತಿ ಯುವ ಸಂಘದ ವತಿಯಿಂದ ಮಡಿಕೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು

ಗಣ್ಯರ ಭಾಷಣಕ್ಕಷ್ಟೇ ಸೀಮಿತವಾದ ಯುವ ಸಂಸತ್ತು ಬಾರದ ಜನಪ್ರತಿನಿಧಿಗಳು!

ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು’ ಕಾರ್ಯಕ್ರಮವು ಗಣ್ಯರ ಭಾಷಣಕ್ಕಷ್ಟೇ ಸೀಮಿತವಾಯಿತು. ವಿದ್ಯಾರ್ಥಿಗಳಿಗೆ ಸಂಸತ್ತಿನ ತರಹ ಚರ್ಚೆ ಮಾಡುವ ಮಾತನಾಡುವ ಅವಕಾಶ ಲಭಿಸಲಿಲ್ಲ. ಜೊತೆಗೆ ಯಾವುದೇ ಜನಪ್ರತಿನಿಧಿಗಳೂ ಯುವ ಸಂಸತ್ತಿನಲ್ಲಿ ಭಾಗಿಯಾಗಲಿಲ್ಲ. ವಿದ್ಯಾರ್ಥಿಗಳಿಗೂ ಮಾತನಾಡುವ ವಿವಿಧ ವಿಷಯಗಳನ್ನು ಕುರಿತು ಚರ್ಚಿಸುವ ಕುರಿತು ಅವಕಾಶ ದೊರೆಯಬೇಕಿತ್ತು ಎನ್ನುವ ಅಭಿಪ್ರಾಯವೂ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.