ADVERTISEMENT

ಸೋಮವಾರಪೇಟೆ: ಒಳಗುಂದ ಹಾಡಿ ಜನರಿಗೆ ‘ಆಧಾರ’ವೂ ಇಲ್ಲ, ಸೂರೂ ಇಲ್ಲ!

ಇಂದಿಗೂ ಟೆಂಟ್ ಮನೆಯಲ್ಲಿ ವಾಸ, ಆಧಾರ್‌, ಪಡಿತರ ಚೀಟಿ ಇಲ್ಲದೇ ಪರದಾಟ

ಡಿ.ಪಿ.ಲೋಕೇಶ್
Published 28 ಜೂನ್ 2024, 5:29 IST
Last Updated 28 ಜೂನ್ 2024, 5:29 IST
ಸೋಮವಾರಪೇಟೆ ಸಮೀಪದ ಒಳಗುಂದ ಹಾಡಿಯ ಜೇನು ಕುರುಬರ ಜ್ಯೋತಿ ಅವರ ಮನೆ.
ಸೋಮವಾರಪೇಟೆ ಸಮೀಪದ ಒಳಗುಂದ ಹಾಡಿಯ ಜೇನು ಕುರುಬರ ಜ್ಯೋತಿ ಅವರ ಮನೆ.   

ಸೋಮವಾರಪೇಟೆ: ತಾಲ್ಲೂಕಿನ ಒಳಗುಂದ ಹಾಡಿಯಲ್ಲಿರುವ ಕೆಲವು ಕುಟುಂಬಗಳು ಇಂದಿಗೂ ಟೆಂಟ್‌ನಲ್ಲೇ ವಾಸ ಮಾಡುತ್ತಿದ್ದು, ಸ್ವಂತ ಸೂರಿನ ಕನಸಿನಲ್ಲೇ ದಿನದೂಡುತ್ತಿವೆ. ಆಧಾರ್‌ ಕಾರ್ಡ್‌ ಇಲ್ಲದೇ ಪರಿತಪಿಸುತ್ತಿದ್ದಾರೆ.

ಇಲ್ಲಿ ಸುಮಾರು 50 ಪರಿಶಿಷ್ಟ ಪಂಗಡದ ಕುಟುಂಬಗಳಿದ್ದು, ಹೆಚ್ಚಿನವರು ಜೇನು ಕುರುಬರಾಗಿದ್ದಾರೆ. ಇವರಿಗೆ ಮೀಸಲಿದ್ದ 50 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಕೇವಲ 15 ಎಕರೆ ಭೂ ಪ್ರದೇಶ ಮಾತ್ರವೇ ಉಳಿದಿದೆ. ಅದರಲ್ಲಿಯೇ ಅನ್ಯರು ತಮ್ಮ ಹೆಸರಿನಲ್ಲಿ ಭೂ ದಾಖಲೆ ಮಾಡಿಸಿಕೊಂಡು ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕುರುಬರು ಮಾತ್ರ ತಮ್ಮ ಹೆಸರಿನಲ್ಲಿ ದಾಖಲೆ ಮಾಡಿಸಿಕೊಳ್ಳಲು ವಿಫಲರಾಗಿದ್ದು, ಪರದಾಡುತ್ತಿದ್ದಾರೆ.

ಹೆಚ್ಚಿನ ಹಾಡಿಗಳಲ್ಲಿ ಜನರು ಅನಕ್ಷರಸ್ಥರಾಗಿದ್ದು, ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದರೂ, ಅವುಗಳು  ಹೆಚ್ಚಿನವರಿಗೆ ತಲುಪುತ್ತಿಲ್ಲ. ಹಾಡಿಗಳ ಸುತ್ತ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದರಿಂದ, ಇವರು ಬೆಳಿಗ್ಗೆಯಿಂದ ದುಡಿದ ಹೆಚ್ಚಿನ ಪಾಲು ಮದ್ಯ ಮತ್ತು ಗುಟ್ಕಾದ ಪಾಲಾಗುತ್ತಿದೆ.

ADVERTISEMENT

ಈ ಹಾಡಿಯಲ್ಲಿ ಹಗಲಿನಲ್ಲಿಯೇ ಜೂಜುಕೋರರು ರಸ್ತೆಗಳಲ್ಲಿಯೇ ಇಸ್ಪೀಟ್ ಆಡಲು ಪ್ರರಂಭಿಸುವುದರಿಂದ, ಜನರು ರಸ್ತೆಯಲ್ಲಿಯೂ ಸಂಚರಿಸಲು ಪರದಾಡುವಂತಾಗಿದೆ. ಹೆಂಗಸರು ಮತ್ತು ಮಕ್ಕಳು ಈ ಸಂದರ್ಭ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದ್ದರೂ, ಸಂಬಂಧಿಸಿದ ಇಲಾಖೆಯವರು ಇದರತ್ತ ಗಮನ ಹರಿಸಲುತ್ತಿಲ್ಲ ಎಂದು ಸ್ಥಳೀಯರ ದೂರಾಗಿದೆ.

ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕೊಳವೆ ಬಾವಿ ಕೊರೆಸಿದ್ದರೂ, ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ, ಕೊಳವೆಯನ್ನು ಅಳವಡಿಸಿ ನೀರನ್ನು ವಿತರಿಸಲು ಸ್ಥಳಿಯಾಡಳಿತ ವಿಫಲವಾಗಿದೆ. ಇಲ್ಲಿನ ಭೂಮಿಗೆ ಸರಿಯಾದ ದಾಖಲಾತಿ ಇಲ್ಲ. 11 ಸರ್ವೆ ನಂಬರ್‌ನಲ್ಲಿ 15 ಎಕರೆ ಭೂಮಿ ಇದೆ. ಆದ್ದರಿಂದ ಇಲ್ಲಿನವರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ ಎಂದು ಕಂದಾಯ ಇಲಾಖೆಯ ಮಂಜುನಾಥ್ ತಿಳಿಸಿದರು.

‘ನಾವು ಇಲ್ಲಿಯ ಮೂಲನಿವಾಸಿಗಳಾಗಿದ್ದು, ಹಳೆಯ ಮನೆ ಬಿದ್ದು ಹೋದ ನಂತರ ಕಳೆದ 5 ವರ್ಷಗಳಿಂದ ಟೆಂಟ್ ಮನೆಯಲ್ಲಿ ವಾಸವಿದ್ದೇವೆ. ನಮಗೆ ಆಧಾರ್ ಮತ್ತು ರೇಷನ್ ಕಾರ್ಡ್ ಇಲ್ಲದೆ, ಯಾವುದೇ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಮಗೆ ಹಕ್ಕುಪತ್ರ ನೀಡಿದಲ್ಲಿ ಎಲ್ಲರಂತೆ ನಾವು ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಜೀವನ ನಡೆಸಲು ಸಾಧ್ಯ’ ಎಂದು ಇಲ್ಲಿನ ನಿವಾಸಿ ಗಂಗೆ ತಿಳಿಸಿದರು.

‘5 ವರ್ಷದ ಮಗುವಿನೊಂದಿಗೆ ಟೆಂಟ್‌ನಲ್ಲಿ ವಾಸ ಇದ್ದೇವೆ. ನಮಗೆ ಭೂಮಿಯ ದಾಖಲೆ ಇಲ್ಲದಿರುವುದರಿಂದ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ನಿವಾಸಿ ಲಿಂಗರಾಜು ತಿಳಿಸಿದರು.

ಕೂಡಲೇ ಇಲ್ಲಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ, ನಮಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ಸೋಮವಾರಪೇಟೆ ಸಮೀಪದ ಒಳಗುಂದ ಹಾಡಿಯ ಜೇನು ಕುರುಬರ ಜ್ಯೋತಿ ಅವರ ಮನೆಯ ಒಳಗಿನ ಸ್ಥಿತಿ.
ಸೋಮವಾರಪೇಟೆ ಸಮೀಪದ ಒಳಗುಂದ ಹಾಡಿಯ ಲಿಂಗರಾಜು ಅವರ ನಿವಾಸ.

15 ದಿನದಲ್ಲಿ ಆಧಾರ್‌ ಕಾರ್ಡ್‌; ಶಾಸಕ

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್‌ಗೌಡ ‘ಮುಂದಿನ 15 ದಿನಗಳಲ್ಲಿ ಆಧಾರ್ ಕಾರ್ಡ್ ನೀಡಲು ಒಂದು ಕ್ಯಾಂಪ್ ನಡೆಸಿ ತಾಲ್ಲೂಕಿನ ಎಲ್ಲೆಡೆಯಿಂದ ಆಧಾರ್ ಇಲ್ಲದವರನ್ನು ಕರೆತಂದು ಆಧಾರ್ ನೀಡಲು ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಲ್ಲಿ ಹಾಡಿಗಳ ನಿವಾಸಿಗಳು ಸರ್ಕಾರದ ಸವಲತ್ತು ಪಡೆಯಲು ಸಾಧ್ಯ’ ಎಂದು  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.